ಉತ್ತರಾಖಂಡದಲ್ಲಿ ಮೇಘಸ್ಪೋಟ : ಅವಶೇಷಗಳಡಿ ಹಲವರು ಸಿಲುಕಿರುವ ಸಾಧ್ಯತೆ
Photo | NDTV
ರುದ್ರಪ್ರಯಾಗ: ಉತ್ತರಾಖಂಡದ ರುದ್ರಪ್ರಯಾಗ ಮತ್ತು ಚಮೋಲಿ ಜಿಲ್ಲೆಯಲ್ಲಿ ಮೇಘಸ್ಫೋಟ ಸಂಭವಿಸಿದ್ದು, ಹಲವಾರು ಕುಟುಂಬಗಳು ಅವಶೇಷಗಳಡಿಯಲ್ಲಿ ಸಿಲುಕಿಕೊಂಡಿರುವ ಸಾಧ್ಯತೆ ಇದೆ.
ಈ ಕುರಿತು ಎಕ್ಸ್ ನಲ್ಲಿ ಮಾಹಿತಿ ನೀಡಿರುವ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ, "ಮೇಘಸ್ಫೋಟದ ನಂತರ ಹಲವರು ಅವಾಶೇಷಗಳಡಿ ಸಿಲುಕಿಕೊಂಡಿದ್ದಾರೆ. ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ನಾನು ಅಧಿಕಾರಿಗಳ ಜೊತೆ ನಿರಂತರವಾಗಿ ಸಂಪರ್ಕದಲ್ಲಿದ್ದೇನೆ" ಎಂದು ತಿಳಿಸಿದ್ದಾರೆ.
ಮಣ್ಣು ಮತ್ತು ಬಂಡೆಗಳ ಅಡಿಯಲ್ಲಿ ಜಾನುವಾರುಗಳು ಕೂಡ ಸಿಲುಕಿಕೊಂಡಿವೆ ಎಂದು ಅಧಿಕಾರಿಯೋರ್ವರು ತಿಳಿಸಿದ್ದಾರೆ.
ಪ್ರತ್ಯೇಕ ಘಟನೆಯಲ್ಲಿ ತೆಹ್ರಿ ಜಿಲ್ಲೆಯ ಭಿಲಂಗ್ನಾ ಬ್ಲಾಕ್ ವ್ಯಾಪ್ತಿಯ ಗೆನ್ವಾಲಿ ಗ್ರಾಮದಲ್ಲಿ ಮೇಘಸ್ಫೋಟ ಸಂಭವಿಸಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ವರದಿಯಾಗಿದೆ.
ಈ ವಾರ ಉತ್ತರಾಖಂಡಕ್ಕೆ ಅಪ್ಪಳಿಸಿದ ಎರಡನೇ ಮೇಘಸ್ಫೋಟ ಇದಾಗಿದೆ. ಇದಕ್ಕೂ ಮೊದಲು, ಚಮೋಲಿಯಲ್ಲಿ ಸುರಿದ ಭಾರೀ ಮಳೆಯಿಂದಾಗಿ ಥರಾಲಿ ಮಾರುಕಟ್ಟೆ ಮತ್ತು ತಹಸಿಲ್ ಸಂಕೀರ್ಣದ ಹಲವೆಡೆ ಭಾರೀ ಪ್ರವಾಹ ಸೃಷ್ಟಿಯಾಗಿತ್ತು.