ಜನಗಣತಿಯಲ್ಲಿ ಬಂಗಾಳಿಯನ್ನು ಮಾತೃಭಾಷೆಯಾಗಿ ಬರೆದರೆ ಅಸ್ಸಾಮಿನಲ್ಲಿಯ ‘ವಿದೇಶಿಯರ’ ಸಂಖ್ಯೆ ಬಹಿರಂಗ:ಸಿಎಂ ಹಿಮಂತ ಬಿಸ್ವ ಶರ್ಮಾ
ಹಿಮಂತ ಬಿಸ್ವ ಶರ್ಮಾ | PC : PTI
ಗುವಾಹಟಿ: ಜನಗಣತಿಯಲ್ಲಿ ಜನರು ತಮ್ಮ ಮಾತೃಭಾಷೆಯನ್ನು ಅಸ್ಸಾಮಿ ಬದಲಿಗೆ ಬಂಗಾಳಿ ಎಂದು ಬರೆದರೆ ರಾಜ್ಯದಲ್ಲಿಯ ‘ವಿದೇಶಿಯರ’ ಸಂಖ್ಯೆಯನ್ನು ಗುರುತಿಸಲು ಸರಕಾರಕ್ಕೆ ಸಾಧ್ಯವಾಗುತ್ತದೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಅವರು ಹೇಳಿದ್ದಾರೆ.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಪ್ರತಿ ಜನಗಣತಿಯ ಮುನ್ನ ಈ ಭಾಷೆ ಅಥವಾ ಆ ಭಾಷೆ ಎಂದು ಪಟ್ಟಿ ಮಾಡುವ ಬಗ್ಗೆ ಬೆದರಿಕೆಗಳಿಂದ ಯಾರೂ ಪ್ರಭಾವಿತರಾಗುವುದಿಲ್ಲ. ಹೆಚ್ಚಿನ ಜನರು ಅಸ್ಸಾಮಿ ಮಾತನಾಡದಿದ್ದರೆ ಆ ಭಾಷೆಯು ನಶಿಸುತ್ತದೆ ಎಂದು ಅವರನ್ನು ನಂಬಿಸಲಾಗಿದೆ. ಆದರೆ ಅಸ್ಸಾಮಿ ಭಾಷೆಯು ಅದು ಇರುವಲ್ಲಿಯೇ ಉಳಿಯುತ್ತದೆ ಎಂದು ಹೇಳಿದರು.
ಜನಗಣತಿಯಲ್ಲಿ ಸುಳ್ಳು ಮಾಹಿತಿಗಳನ್ನು ನೀಡುವುದು ಅಪರಾಧವಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದರು.
ವಿದ್ಯಾರ್ಥಿ ನಾಯಕ ಮೈನುದ್ದೀನ್ ಅಲಿ ಅವರ ಹೇಳಿಕೆಯ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳ ಪ್ರತಿಕ್ರಿಯೆ ಹೊರಬಿದ್ದಿದೆ. ರಾಜ್ಯದಲ್ಲಿ ತೆರವು ಕಾರ್ಯಾಚರಣೆಗಳ ವಿರುದ್ಧ ಬುಧವಾರ ಪ್ರತಿಭಟನೆ ಸಂದರ್ಭದಲ್ಲಿ ಅಲಿ ಜನಗಣತಿ ದಾಖಲೆಗಳಲ್ಲಿ ಅಸ್ಸಾಮಿ ಭಾಷೆಯನ್ನು ನಮೂದಿಸದಂತೆ ಬಂಗಾಳಿ ಮೂಲದ ಮುಸ್ಲಿಮರನ್ನು ಆಗ್ರಹಿಸಿದ್ದರು.
‘ನಾವು ಬಂಗಾಳಿ ಮುಸ್ಲಿಮರು, ಈ ಜನಗಣತಿಯಲ್ಲಿ ಅಸ್ಸಾಮಿಯನ್ನು ನಮ್ಮ ಮಾತೃಭಾಷೆಯಾಗಿ ಬರೆಯುವುದಿಲ್ಲ ಎಂದು ಸ್ಪಷ್ಟವಾಗಿ ಹೇಳುತ್ತಿದ್ದೇವೆ. ನಾವು ಅಸ್ಸಾಮಿ ಭಾಷೆಯನ್ನು ತೆಗೆದುಹಾಕುತ್ತೇವೆ. ಅಸ್ಸಾಮಿ ಭಾಷೆ ಮತ್ತು ಅಸ್ಸಾಮಿ ಸಮುದಾಯ ಅಲ್ಪಸಂಖ್ಯಾಕರಾಗಲಿದ್ದಾರೆ’ ಎಂದು ಆಲ್ ಬೋಡೊಲ್ಯಾಂಡ್ ಟೆರಿಟೋರಿಯಲ್ ಕೌನ್ಸಿಲ್ ಮೈನಾರಿಟಿ ಸ್ಟುಡೆಂಟ್ಸ್ ಯೂನಿಯನ್ ನಾಯಕ ಅಲಿ ಹೇಳಿದ್ದರು.
ಅಲಿ ಹೇಳಿಕೆಯನ್ನು ಅಸ್ಸಾಂ ಸಾಹಿತ್ಯ ಸಭಾ ಮತ್ತು ಆಲ್ ಅಸ್ಸಾಂ ಸ್ಟುಡೆಂಟ್ಸ್ ಯೂನಿಯನ್ ನಂತಹ ಗುಂಪುಗಳು ತೀವ್ರವಾಗಿ ವಿರೋಧಿಸಿದ್ದವು. ಅಲಿ ಭಾಷಾ ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾರೆ ಎಂದು ಅವು ಆರೋಪಿಸಿದ್ದವು.
ಸುದ್ದಿಗಾರರೊಂದಿಗೆ ಮಾತನಾಡಿದ ಸಂದರ್ಭ ಅಸ್ಸಾಮಿ ಶಾಶ್ವತ ರಾಜ್ಯಭಾಷೆಯಾಗಿದೆ ಎಂದು ಒತ್ತಿ ಹೇಳಿದ ಶರ್ಮಾ,ಜನಗಣತಿಯಲ್ಲಿ ಬಂಗಾಳಿ ಎಂದು ನಮೂದಿಸುವುದು ರಾಜ್ಯದಲ್ಲಿಯ ವಿದೇಶಿಯರ ಸಂಖ್ಯೆಯನ್ನು ಪ್ರಮಾಣೀಕರಿಸುತ್ತದೆ ಅಷ್ಟೇ,ಅದರಿಂದ ಅಸ್ಸಾಮಿ ಭಾಷೆಯ ಸ್ಥಾನಮಾನಕ್ಕೆ ಯಾವುದೇ ಧಕ್ಕೆಯುಂಟಾಗುವುದಿಲ್ಲ ಎಂದು ತಿಳಿಸಿದರು.
ಭಾಷೆಯನ್ನು ಬ್ಲ್ಯಾಕ್‌ಮೇಲ್‌ಗೆ ಸಾಧನವಾಗಿ ಬಳಸಲು ಸಾಧ್ಯವಿಲ್ಲ ಎಂದ ಅವರು,ಜನಗಣತಿಯ ಫಲಿತಾಂಶ ಏನೇ ಆಗಿದ್ದರೂ ತೆರವು ಕಾರ್ಯಾಚರಣೆಗಳು ಮುಂದುವರಿಯುತ್ತವೆ ಎಂದು ಹೇಳಿದರು.
ವಿದ್ಯಾರ್ಥಿ ಒಕ್ಕೂಟವು ಅಲಿಯವರನ್ನು ಅಮಾನತುಗೊಳಿಸಿದ್ದು,ಅವರ ವಿರುದ್ಧ ಪೋಲಿಸ್ ಪ್ರಕರಣ ದಾಖಲಾಗಿದೆ.
ಅಸ್ಸಾಮಿನಲ್ಲಿ ರಾಷ್ಟ್ರಿಯತೆಯನ್ನು ನಿರ್ಧರಿಸಲು ಅಥವಾ ಶಂಕಿಸಲು ಮುಖ್ಯ ಮಾನದಂಡ ವ್ಯಕ್ತಿಯ ಭಾಷೆ ಎನ್ನುವುದನ್ನು ಶರ್ಮಾರ ಹೇಳಿಕೆಯು ಬಹಿರಂಗಗೊಳಿಸಿದೆ. ಇದು ಜನಾಂಗೀಯ ವಾದವಾಗಿದೆ, ಭಾಷೆ ಮತ್ತು ಭಾಷೆ ಗುರುತಿನ ಆಧಾರದಲ್ಲಿ ತಾರತಮ್ಯವಾಗಿದೆ ಎಂದು ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಗುವಾಹಟಿ ಉಚ್ಚ ನ್ಯಾಯಾಲಯದ ವಕೀಲ ವಲಿಯುಲ್ಲಾ ಲಸ್ಕರ್ ಹೇಳಿದರು.