×
Ad

"ಇಷ್ಟೊಂದು ಅಸೂಯೆ ಏಕೆ?": ಒಡಿಶಾ ಸೇರಿದಂತೆ ಬಿಜೆಪಿ ಆಡಳಿತದ ರಾಜ್ಯಗಳ ವಿರುದ್ಧ ಮಮತಾ ಬ್ಯಾನರ್ಜಿ ವಾಗ್ಧಾಳಿ

Update: 2025-05-06 12:44 IST

ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ (Photo: PTI) 

ಕೋಲ್ಕತ್ತಾ: ಬಿಜೆಪಿ ಆಡಳಿತದ ಒಡಿಶಾ ಮತ್ತು ಇತರ ರಾಜ್ಯಗಳ ವಿರುದ್ಧ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ವಾಗ್ದಾಳಿ ನಡೆಸಿದರು. ಒಡಿಶಾ ಅಸೂಯೆ ಪಡುತ್ತಿದೆ. ಅಲ್ಲಿನ ನಿವಾಸಿಗಳು ಬಂಗಾಳಿ ಮಾತನಾಡುವವರನ್ನು ಥಳಿಸುತ್ತಿದ್ದಾರೆ ಎಂದು ಆರೋಪಿಸಿದರು.

ಎ.30ರಂದು ದಿಘಾದಲ್ಲಿ ಉದ್ಘಾಟನೆಯಾದ ಜಗನ್ನಾಥ ಮಂದಿರ ಪಶ್ಚಿಮ ಬಂಗಾಳ ಮತ್ತು ಒಡಿಶಾದ ನಡುವೆ ವಿವಾದಕ್ಕೆ ಕಾರಣವಾಗಿದೆ. 250 ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸಿದ ಮಂದಿರಕ್ಕೆ ‘ಜಗನ್ನಾಥ ಧಾಮ’ ಎಂದು ಹೆಸರಿಡಲು ಬಂಗಾಳ ನಿರ್ಧರಿಸಿದೆ. ಒಡಿಶಾದ ಪುರಿಯಲ್ಲಿ ಜಗನ್ನಾಥ ದೇವಾಲಯವಿದೆ. ಬಂಗಾಳದ ದೇವಸ್ಥಾನಕ್ಕೂ ಅದೇ ಹೆಸರಿಟ್ಟಿರುವುದು ವಿವಾದಕ್ಕೆ ಕಾರಣವಾಗಿದೆ.

ಈ ಕುರಿತು ಪ್ರತಿಕ್ರಿಯಿಸಿದ ಮಮತಾ ಬ್ಯಾನರ್ಜಿ, ನನಗೆ ಪುರಿ ಮತ್ತು ಒಡಿಶಾ ತುಂಬಾ ಇಷ್ಟ. ನಾನು ಪುರಿಗೆ ಹೋದಾಗ ಆರೆಸ್ಸೆಸ್ ಮತ್ತು ಬಿಜೆಪಿ ಪ್ರತಿಭಟಿಸುತ್ತದೆ. ಆದರೆ ನಿಮ್ಮ ಸ್ಟಾಕ್ ಕಡಿಮೆಯಾದಾಗ ಬಂಗಾಳ ಆಲೂಗಡ್ಡೆ ಪೂರೈಸುತ್ತದೆ. ಚಂಡಮಾರುತದಿಂದ ವಿದ್ಯುತ್ ಸರಬರಾಜಿಗೆ ಅಡಚಣೆಯಾದಾಗ ನೀವು ನಮ್ಮಿಂದ ಎಂಜಿನಿಯರ್‌ಗಳ ಸಹಾಯ ಪಡೆಯುತ್ತೀರಿ, ಚಂಡಮಾರುತದಿಂದ ನಾವು ತತ್ತರಿಸಿದ್ದರೂ ನಿಮ್ಮ ನೆರವಿಗೆ ಬಂದಿದ್ದೇವೆ. ಬಂಗಾಳದಿಂದ ಗರಿಷ್ಠ ಸಂಖ್ಯೆಯ ಪ್ರವಾಸಿಗರು ಪುರಿ ಮತ್ತು ಒಡಿಶಾಗೆ ಭೇಟಿ ನೀಡುತ್ತಾರೆ. ಬಂಗಾಳದ ಪ್ರವಾಸಿಗರು ವರ್ಷವಿಡೀ ಇಲ್ಲಿಗೆ ಭೇಟಿ ನೀಡುತ್ತಾರೆ. ನಮಗೆ ಒಂದು ಜಗನ್ನಾಥ ಧಾಮ ಇದ್ದರೆ ನಿಮಗೆ ಸಮಸ್ಯೆ ಏನು? ನೀವು ಸಂತೋಷವಾಗಿರಿ, ಬಂಗಾಳವೂ ಸಂತೋಷವಾಗಿರಲಿ ಎಂದು ಹೇಳಿದರು.

ದಿಘಾದ ಜಗನ್ನಾಥ ದೇವಸ್ಥಾನಕ್ಕೆ ಭೇಟಿ ನೀಡದಂತೆ ಅವರು ಅಧಿಸೂಚನೆ ಹೊರಡಿಸಿದ್ದಾರೆ. ನಾವೆಲ್ಲರೂ ಪುರಿಗೆ ಭೇಟಿ ನೀಡುತ್ತೇವೆ. ಅವರಿಗೆ ಏಕೆ ಇಷ್ಟೊಂದು ಅಸೂಯೆ? ನೀವು ಬಂಗಾಳಿ ಮಾತನಾಡುವ ಜನರನ್ನು ಗುರಿಯಾಗಿಸಿಕೊಂಡು ಏಕೆ ಹಲ್ಲೆ ನಡೆಸುತ್ತಿದ್ದೀರಿ? ಒಡಿಶಾದಲ್ಲಿ ಬಂಗಾಳಿಯಲ್ಲಿ ಮಾತನಾಡಿದರೆ ಜನರನ್ನು ಥಳಿಸಲಾಗುತ್ತಿದೆ ಎಂಬ ಮಾಹಿತಿ ನನಗೆ ಬಂದಿದೆ. ಮಹಾರಾಷ್ಟ್ರ, ಉತ್ತರ ಪ್ರದೇಶ ಮತ್ತು ಬಿಹಾರದಲ್ಲೂ ಇದೇ ರೀತಿಯ ಘಟನೆಗಳು ನಡೆದಿವೆ ಎಂದು ಹೇಳಿದರು.

ಅಸೂಯೆಗೆ ಯಾವುದೇ ಚಿಕಿತ್ಸೆ ಇಲ್ಲ. ಅಸೂಯೆಗೆ ಯಾವುದೇ ಔಷಧಿ ಇಲ್ಲ. ಯಾರೊಂದಿಗೂ ಯಾವುದೇ ತಪ್ಪು ತಿಳುವಳಿಕೆ ಬೇಡ ಎಂದು ನಾನು ಬಯಸುತ್ತೇನೆ. ನಮ್ಮ ಮುಖ್ಯ ಕಾರ್ಯದರ್ಶಿ ಬಿಹಾರ, ರಾಜಸ್ಥಾನ ಮತ್ತು ಒಡಿಶಾ ಸರಕಾರಗಳಿಗೆ ಪತ್ರ ಕಳುಹಿಸುತ್ತಾರೆ. ನಮ್ಮ ಡಿಜಿ ಈಗಾಗಲೇ ಒಡಿಶಾ ಡಿಜಿಪಿ ಜೊತೆ ಮಾತನಾಡಿದ್ದಾರೆ ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News