ಸಿಎಂ ರೇಖಾ ಗುಪ್ತಾರ ಅಧಿಕೃತ ನಿವಾಸದ ನವೀಕರಣಕ್ಕೆ ಟೆಂಡರ್ ರದ್ದುಗೊಳಿಸಿದ ದಿಲ್ಲಿ ಸರಕಾರ
ರೇಖಾ ಗುಪ್ತಾ | PC : ddnews.gov.in
ಹೊಸದಿಲ್ಲಿ: ದಿಲ್ಲಿ ಸರಕಾರವು ಆಡಳಿತಾತ್ಮಕ ಕಾರಣಗಳನ್ನು ಉಲ್ಲೇಖಿಸಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರ ಅಧಿಕೃತ ನಿವಾಸದ ನವೀಕರಣಕ್ಕಾಗಿ ಕರೆಯಲಾಗಿದ್ದ ಟೆಂಡರ್‌ನ್ನು ರದ್ದುಗೊಳಿಸಿದೆ ಎಂದು ಸುದ್ದಿಸಂಸ್ಥೆಯು ವರದಿ ಮಾಡಿದೆ.
ರದ್ದಾಗಿರುವ 60 ಲಕ್ಷ ರೂ.ಗಳ ಟೆಂಡರ್ ಗುಪ್ತಾರ ನಿವಾಸದಲ್ಲಿ 14 ಏರ್ ಕಂಡಿಷನರ್‌ಗಳು, ಟಿವಿಗಳು ಮತ್ತು ಇಲೆಕ್ಟ್ರಿಕಲ್ ಫಿಟಿಂಗ್‌ಗಳು ಸೇರಿದಂತೆ ಪ್ರಸ್ತಾವಿತ ಅಳವಡಿಕೆಗಳಿಗೆ ಸಂಬಂಧಿಸಿದೆ.
ಇದಕ್ಕೂ ಮುನ್ನ ಬಿಜೆಪಿಯನ್ನು ಟೀಕಿಸಿದ್ದ ಆಮ್ ಆದ್ಮಿ ಪಾರ್ಟಿ(ಆಪ್)ಯು, ಅದರ ವಿರುದ್ಧ ಬೂಟಾಟಿಕೆ ಮತ್ತು ದುಂದುಗಾರಿಕೆಯ ಆರೋಪವನ್ನು ಹೊರಿಸಿತ್ತು.
ಅರವಿಂದ ಕೇಜ್ರಿವಾಲ್ ಮುಖ್ಯಮಂತ್ರಿಯಾಗಿದ್ದಾಗ ಅವರು ‘ಶೀಷ್ ಮಹಲ್’ನಲ್ಲಿ ವಾಸಿಸುತ್ತಿದ್ದಾರೆ ಎಂದು ಬಿಜೆಪಿ ದಾಳಿ ನಡೆಸಿದ್ದನ್ನು ನೆನಪಿಸಿದ್ದ ಅದು ಗುಪ್ತಾರ ಬಂಗಲೆಯ ನವೀಕರಣವನ್ನು ಪ್ರಶ್ನಿಸಿತ್ತು. ಗುಪ್ತಾರ ನಿವಾಸದ ನವೀಕರಣಕ್ಕೆ ಈಗಾಗಲೇ ಟೆಂಡರ್ ಕರೆಯಲಾಗಿದೆ. ದಿಲ್ಲಿಯನ್ನು ಇನ್ನು ಮುಂದೆ ಇದೇ ‘ಮಾಯಾ ಮಹಲ್’ನಿಂದ ಆಳಲಾಗುವುದು. ಕೇಜ್ರಿವಾಲ್ ಅವರ ಖರ್ಚುವೆಚ್ಚಗಳನ್ನು ಟೀಕಿಸುತ್ತಿದ್ದ ಬಿಜೆಪಿ ನಾಯಕರು ಈಗ ಮೌನವಾಗಿದ್ದಾರೆ ಎಂದು ಅದು ಬೆಟ್ಟು ಮಾಡಿತ್ತು.