×
Ad

ಕೋಚಿಂಗ್ ಸೆಂಟರ್ ಗಳ ಸೇವಾ ನ್ಯೂನ್ಯತೆ; ಬಿಸಿ ಮುಟ್ಟಿಸಿದ ಕೇಂದ್ರ ಗ್ರಾಹಕ ವ್ಯವಹಾರಗಳ ಇಲಾಖೆ

Update: 2025-02-23 23:21 IST

ಸಾಂದರ್ಭಿಕ ಚಿತ್ರ (credit: GROK)

ಹೊಸದಿಲ್ಲಿ: ಕೋಚಿಂಗ್ ಸೆಂಟರ್ ತೆರೆದು ಅಭ್ಯರ್ಥಿಗಳಿಗೆ ಸರಿಯಾಗಿ ಸ್ಪಂದಿಸದೆ ಇರುವಂಥ ಶಿಕ್ಷಣ ಸಂಸ್ಥೆಗಳಿಗೆ ಕೇಂದ್ರ ಗ್ರಾಹಕ ವ್ಯವಹಾರಗಳ ಇಲಾಖೆ ಬಿಸಿ ಮುಟ್ಟಿಸಿದೆ. ವಂಚನೆಗೆ ಒಳಗಾಗಿ ರಾಷ್ಟ್ರೀಯ ಗ್ರಾಹಕ ಸಹಾಯವಾಣಿ ಮೊರೆ ಹೋದ 600ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಿದೆ.

ಇತ್ತೀಚಿನ ದಿನಗಳಲ್ಲಿ ನಾಗರಿಕ ಸೇವೆ, ಇಂಜಿನಿಯರಿಂಗ್ ಸೇರಿದಂತೆ ವಿವಿಧ ಉನ್ನತ ಶಿಕ್ಷಣದ ತರಬೇತಿ ಕೇಂದ್ರ (ಕೋಚಿಂಗ್ ಸೆಂಟರ್ ) ತೆರೆದು ಶುಲ್ಕ ಪಾವತಿಸಿಕೊಂಡು ಬಳಿಕ ಸೀಟ್ ಇಲ್ಲವೆಂದು ವಂಚಿಸುವುದು ಮತ್ತು ಸೂಕ್ತ, ಸಮರ್ಪಕ ಅಭ್ಯಾಸ ಪರಿಕರ, ತರಗತಿ ನೀಡದೇ ವಿದ್ಯಾರ್ಥಿಗಳನ್ನು ವಂಚಿಸುತ್ತಿರುವ ಬಗ್ಗೆ ಬರುತ್ತಿದ್ದ ದೂರುಗಳ ಹಿನ್ನೆಲೆ ಸಚಿವ ಪ್ರಹ್ಲಾದ್ ಜೋಶಿ ಅವರ ಮಾರ್ಗದರ್ಶನ, ಸೂಚನೆಯಂತೆ ಸಚಿವಾಲಯವು, ರಾಷ್ಟ್ರೀಯ ಗ್ರಾಹಕ ಸಹಾಯವಾಣಿ‌ (NCH) ಮೂಲಕ ಅನ್ಯಾಯಕ್ಕೊಳಗಾದ ಅಭ್ಯರ್ಥಿಗಳು ನೇರವಾಗಿ ದೂರು ಸಲ್ಲಿಸಲು ಅವಕಾಶ ಒದಗಿಸಿದ್ದೂ ಅಲ್ಲದೇ, ಅಂತಹ ದೂರುಗಳಿಗೆ ತಕ್ಷಣವೇ ಪರಿಹಾರ ಸಹ ಕಲ್ಪಿಸಿಕೊಟ್ಟಿದೆ.

600ಕ್ಕೂ ಹೆಚ್ಚು ಅಭ್ಯರ್ಥಿಗಳಿಗೆ ನ್ಯಾಯ ಕಲ್ಪಿಸಿದ NCH:

ದೇಶದ ವಿವಿಧೆಡೆಯಿಂದ ರಾಷ್ಟ್ರೀಯ ಗ್ರಾಹಕ ಸಹಾಯವಾಣಿ NCH ಗೆ ದೂರು ಸಲ್ಲಿಸಿದ ನಾಗರಿಕ ಸೇವೆಗಳು, ಎಂಜಿನಿಯರಿಂಗ್ ಕೋರ್ಸ್ ಮತ್ತಿತರ ಕಾರ್ಯಕ್ರಮಗಳ 600ಕ್ಕೂ ಹೆಚ್ಚು ಅಭ್ಯರ್ಥಿಗಳಿಗೆ ನ್ಯಾಯ ಒದಗಿಸಿದೆ. ಶಿಕ್ಷಣ ಸೇವೆಯಲ್ಲಿ ನ್ಯೂನ್ಯತೆವೆಸಗಿದ ಕೋಚಿಂಗ್ ಸೆಂಟರ್ ಗಳಿಂದಲೇ ಒಟ್ಟು ರೂ.1.56 ಕೋಟಿ ಪರಿಹಾರ ರೂಪದಲ್ಲಿ ಮರುಪಾವತಿ ಮಾಡಿಸಲಾಗಿದೆ ಎಂದು ಕೇಂದ್ರ ಗ್ರಾಹಕ ವ್ಯವಹಾರಗಳ ಇಲಾಖೆ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿದೆ.

ನಾಗರಿಕ ಸೇವೆಗಳು, ಎಂಜಿನಿಯರಿಂಗ್ ಕೋರ್ಸ್ ಮತ್ತಿತರ ಕಾರ್ಯಕ್ರಮಗಳಿಗೆ ತರಬೇತಿ ಕೇಂದ್ರಗಳಲ್ಲಿ ದಾಖಲಾಗಿದ್ದ ವಿದ್ಯಾರ್ಥಿಗಳಿಗೆ, ತರಬೇತಿ ಸಂಸ್ಥೆಗಳು ನಿಯಮಾನುಸಾರ ಮರುಪಾವತಿಗೆ ನಿರಾಕರಿಸುದ್ದವು. ಹೀಗಾಗಿ ಅಭ್ಯರ್ಥಿಗಳು ಅಂತಿಮವಾಗಿ ರಾಷ್ಟ್ರೀಯ ಗ್ರಾಹಕ ಸಹಾಯವಾಣಿ (NCH) ಮೂಲಕ ನ್ಯಾಯಕ್ಕೆ ಮೊರೆ ಹೋಗಿದ್ದರು. ಗ್ರಾಹಕ ಇಲಾಖೆ ಎಲ್ಲವನ್ನೂ ಕೂಲಂಕುಷ ರೀತಿಯಲ್ಲಿ ಪರಿಶೀಲಿಸಿ ಅಗತ್ಯ ಸೇವೆ ಪೂರೈಸದ, ತರಗತಿ ವಿಳಂಬ ಮತ್ತು ರದ್ದಾದ ಕೋರ್ಸ್‌ಗಳಿಗೆ ಸಂಬಂಧಿಸಿದಂತೆ ತ್ವರಿತ ನ್ಯಾಯ ಕಲ್ಪಿಸುವ ಮೂಲಕ ನೆರವಾಗಿದೆ.

ಕೋಚಿಂಗ್ ಸೆಂಟರ್ ಗಳಿಗೆ ನಿರ್ದೇಶನ: ತರಬೇತಿ ಕೇಂದ್ರಗಳು ಕೇವಲ ವ್ಯಾವಹಾರಿಕ ದೃಷ್ಟಿಯಿಂದ ನೋಡದೇ, ವಿದ್ಯಾರ್ಥಿ ಕೇಂದ್ರಿತ ವಿಧಾನವನ್ನು ಅಳವಡಿಸಿಕೊಳ್ಳಬೇಕು ಮತ್ತು ವಿದ್ಯಾರ್ಥಿಗಳಿಂದ ಮರುಪಾವತಿ ಹಕ್ಕುಗಳನ್ನು ನಿರಾಕರಿಸುವಂತಹ ವಂಚನೆಗೆ ಅಂತ್ಯ ಹಾಡಬೇಕು ಎಂದು ಗ್ರಾಹಕ ವ್ಯವಹಾರಗಳ ಇಲಾಖೆ (DoCA) ನಿರ್ದೇಶಿಸಿದೆ.

ಎಲ್ಲಾ ತರಬೇತಿ ಕೇಂದ್ರಗಳು ವಿದ್ಯಾರ್ಥಿ ಕೇಂದ್ರಿತ ವಿಧಾನ ಅಳವಡಿಸಿಕೊಳ್ಳುವ ಜತೆಗೆ ವಿದ್ಯಾರ್ಥಿಗಳ ಆರ್ಥಿಕ ಹಿತಾಸಕ್ತಿಗಳನ್ನು ರಕ್ಷಿಸಲು ಸ್ಪಷ್ಟ, ಪಾರದರ್ಶಕ ಮರುಪಾವತಿ ನೀತಿಗಳನ್ನು ಕಡ್ಡಾಯವಾಗಿ ಪಾಲಿಸಲೇಬೇಕು. ಕಾನೂನುಬದ್ಧ ಮರುಪಾವತಿ ಹಕ್ಕುಗಳನ್ನು ನಿರಾಕರಿಸುವ ಇಂಥ ವಂಚನೆಯನ್ನು ಇನ್ನು ಮುಂದೆ ಸಹಿಸಲಾಗುವುದಿಲ್ಲ ಎಂದು ಎಚ್ಚರಿಸಿದ ಕೇಂದ್ರ ಗ್ರಾಹಕ ವ್ಯವಹಾರಗಳ ಇಲಾಖೆ, ಶಿಕ್ಷಣ ಸಂಸ್ಥೆಗಳು ಗ್ರಾಹಕರ ಹಕ್ಕುಗಳನ್ನು ಎತ್ತಿ ಹಿಡಿಯಬೇಕು ಎಂದೂ ಕಟ್ಟುನಿಟ್ಟಿನ ಸೂಚನೆ ನೀಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News