ಕೊಯಮತ್ತೂರು ವಿಮಾನ ನಿಲ್ದಾಣದ ಬಳಿ ಕಾಲೇಜು ವಿದ್ಯಾರ್ಥಿನಿಯನ್ನು ಅಪಹರಿಸಿ ಲೈಂಗಿಕ ದೌರ್ಜನ್ಯ
ಸಾಂದರ್ಭಿಕ ಚಿತ್ರ | PC : freepik.com
ಚೆನ್ನೈ: ಕೊಯಮತ್ತೂರು ವಿಮಾನ ನಿಲ್ದಾಣದ ಬಳಿ ರವಿವಾರ ತಡರಾತ್ರಿ ಕಾಲೇಜು ವಿದ್ಯಾರ್ಥಿನಿಯೊಬ್ಬಳನ್ನು ಮೂವರು ಆರೋಪಿಗಳು ಅಪಹರಿಸಿ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪ ಕೇಳಿ ಬಂದಿದೆ.
ಕೊಯಮತ್ತೂರಿನ ಖಾಸಗಿ ಕಾಲೇಜಿನಲ್ಲಿ ಓದುತ್ತಿದ್ದ ವಿದ್ಯಾರ್ಥಿನಿ ತನ್ನ ಸ್ನೇಹಿತನೊಂದಿಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ದುಷ್ಕರ್ಮಿಗಳು ಅವರ ವಾಹನವನ್ನು ಅಡ್ಡಗಟ್ಟಿ, ಯುವಕನ ಮೇಲೆ ದಾಳಿ ನಡೆಸಿ ವಿದ್ಯಾರ್ಥಿನಿಯನ್ನು ಅಪಹರಿಸಿದ್ದಾರೆ. ಬಳಿಕ ವಿದ್ಯಾರ್ಥಿನಿಯನ್ನು ಬೇರೆ ಸ್ಥಳಕ್ಕೆ ಕರೆದುಕೊಂಡು ಹೋಗಿ ಲೈಂಗಿಕ ದೌರ್ಜನ್ಯ ಎಸಗಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಂತ್ರಸ್ತೆ ಪ್ರಸ್ತುತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. “ಲೈಂಗಿಕ ದೌರ್ಜನ್ಯ ದೃಢಪಟ್ಟಿದೆ. ಆಕೆ ಸುರಕ್ಷಿತಳಾಗಿದ್ದಾಳೆ. ಏಳು ವಿಶೇಷ ತಂಡಗಳನ್ನು ರಚಿಸಿ ಶಂಕಿತರ ಶೋಧ ಕಾರ್ಯಾಚರಣೆ ಆರಂಭಿಸಲಾಗಿದೆ,” ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು NDTVಗೆ ತಿಳಿಸಿದ್ದಾರೆ.
ಘಟನೆಯ ನಂತರ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದು, ಸಾಕ್ಷಿಗಳನ್ನು ವಿಚಾರಣೆಗೊಳಪಡಿಸಿದ್ದಾರೆ. ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸಲು ಬೃಹತ್ ಶೋಧ ಕಾರ್ಯಾಚರಣೆ ಮುಂದುವರಿದಿದೆ.
ಘಟನೆ ಬಗ್ಗೆ ಪ್ರತಿಕ್ರಿಯಿಸಿದ ಬಿಜೆಪಿ ನಾಯಕ ಕೆ.ಅಣ್ಣಾಮಲೈ, ಈ ಘಟನೆಯು ಆಘಾತಕಾರಿಯಾಗಿದೆ. ಡಿಎಂಕೆ ಸರಕಾರ ಅಧಿಕಾರಕ್ಕೆ ಬಂದ ನಂತರ ಮಹಿಳೆಯರ ವಿರುದ್ಧದ ಅಪರಾಧಗಳು ಹೆಚ್ಚಾಗಿವೆ. ಸಮಾಜ ವಿರೋಧಿ ಶಕ್ತಿಗಳಿಗೆ ಈಗ ಕಾನೂನು ಅಥವಾ ಪೊಲೀಸರ ಭಯವೇ ಇಲ್ಲ. ಮಂತ್ರಿಗಳಿಂದ ಹಿಡಿದು ಅಧಿಕಾರಿಗಳವರೆಗೂ ಲೈಂಗಿಕ ಅಪರಾಧಿಗಳನ್ನು ರಕ್ಷಿಸುವ ಪ್ರವೃತ್ತಿ ಬೆಳೆಯುತ್ತಿದೆ. ಇದು ನಾಚಿಕೆಗೇಡಿನ ಸಂಗತಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.