ವಿವಿಧ ಹೈಕೋರ್ಟ್ ಗಳಿಗೆ ನ್ಯಾಯಾಧೀಶರನ್ನು ನೇಮಿಸಿದ ಕೊಲೀಜಿಯಮ್
ಕರ್ನಾಟಕ ಹೈಕೋರ್ಟ್ ಗೆ ನ್ಯಾಯಾಧೀಶರಾಗಿ ಗೀತಾ ಕಡಬ ಭರತರಾಜ ಸೆಟ್ಟಿ, ಮುರಳೀಧರ ಪೈ ಬೋರ್ಕಟ್ಟೆ, ತ್ಯಾಗರಾಜ ನಾರಾಯಣ್ ಇನವಳ್ಳಿ
ಸಾಂದರ್ಭಿಕ ಚಿತ್ರ
ಹೊಸದಿಲ್ಲಿ, ಸೆ. 16: ಮುಖ್ಯ ನ್ಯಾಯಾಧೀಶ ಬಿ.ಆರ್. ಗವಾಯಿ ನೇತೃತ್ವದ ಸುಪ್ರೀಂ ಕೋರ್ಟ್ ಕೊಲೀಜಿಯಮ್ ಸೋಮವಾರ ಐದು ಹೈಕೋರ್ಟ್‌ಗಳಿಗೆ ನ್ಯಾಯಾಧೀಶರನ್ನು ಶಿಫಾರಸು ಮಾಡಿದೆ.
ಮುಖ್ಯ ನ್ಯಾಯಾಧೀಶ ಗವಾಯಿ ಹಾಗೂ ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ವಿಕ್ರಮ್ ನಾಥ್ ಅವರನ್ನೊಳಗೊಂಡ ಕೊಲೀಜಿಯಮ್, ಹೈಕೋರ್ಟ್ ಗಳ ಹೊಸ ನ್ಯಾಯಾಧೀಶರ ನೇಮಕಕ್ಕೆ ಸಂಬಂಧಿಸಿದಂತೆ ಐದು ನಿರ್ಣಯಗಳನ್ನು ಅಂಗೀಕರಿಸಿದೆ.
ಹಿಮಾಚಲಪ್ರದೇಶ ಹೈಕೋರ್ಟ್ ಗೆ ಇಬ್ಬರು ಹಿರಿಯ ವಕೀಲರಾದ ಜಿಯಾ ಲಾಲ್ ಭಾರದ್ವಾಜ್ ಮತ್ತು ರಮೇಶ್ ವರ್ಮಾರನ್ನು ನ್ಯಾಯಾಧೀಶರಾಗಿ ನೇಮಕ ಮಾಡಲಾಗಿದೆ.
ಕರ್ನಾಟಕ ಹೈಕೋರ್ಟ್ ನ ನ್ಯಾಯಾಧೀಶರಾಗಿ ಗೀತಾ ಕಡಬ ಭರತರಾಜ ಸೆಟ್ಟಿ, ಮುರಳೀಧರ ಪೈ ಬೋರ್ಕಟ್ಟೆ ಮತ್ತು ತ್ಯಾಗರಾಜ ನಾರಾಯಣ್ ಇನವಳ್ಳಿ ಅವರಿಗೆ ಭಡ್ತಿ ನೀಡಲಾಗಿದೆ. ಅದೇ ವೇಳೆ, ಇದೇ ಹೈಕೋರ್ಟ್‌ನಲ್ಲಿ ಹೆಚ್ಚುವರಿ ನ್ಯಾಯಾಧೀಶರಾಗಿ ಕೆಲಸ ಮಾಡುತ್ತಿರುವ ನ್ಯಾ. ಕುರುಬರಹಳ್ಳಿ ವೆಂಕಟರಾಮರೆಡ್ಡಿ ಅರವಿಂದ್ ಅವರನ್ನು ಖಾಯಂ ನ್ಯಾಯಾಧೀಶರಾಗಿ ಕೊಲೀಜಿಯಮ್ ನೇಮಿಸಿದೆ.
ತ್ರಿಪುರಾ ಹೈಕೋರ್ಟ್ ನಲ್ಲಿ ಹೆಚ್ಚುವರಿ ನ್ಯಾಯಾಧೀಶರಾಗಿ ಕೆಲಸ ಮಾಡುತ್ತಿದ್ದ ನ್ಯಾ. ಬಿಸ್ವಜಿತ್ ಪಲಿತ್ ರನ್ನು ಕೊಲೀಜಿಯಮ್ ಖಾಯಂ ನ್ಯಾಯಾಧೀಶರಾಗಿ ನೇಮಿಸಿದೆ.
ಮದರಾಸು ಹೈಕೋರ್ಟ್‌ನಲ್ಲಿ ಹೆಚ್ಚುವರಿ ನ್ಯಾಯಾಧೀಶರಾಗಿ ಕೆಲಸ ಮಾಡುತ್ತಿದ್ದ ನ್ಯಾ. ಎನ್. ಸೆಂತಿಲ್‌ಕುಮಾರ್ ಮತ್ತು ನ್ಯಾ. ಜಿ. ಅರುಲ್ ಮುರುಗನ್ ರನ್ನು ಅದೇ ನ್ಯಾಯಾಲಯದ ಖಾಯಂ ನ್ಯಾಯಾಧೀಶರಾಗಿ ಕೊಲೀಜಿಯಮ್ ನೇಮಿಸಿದೆ.