ಎಸ್‌ಸಿ/ಎಸ್‌ಟಿ/ಒಬಿಸಿಗಳಿಗೆ ಕೊಲಿಜಿಯಮ್‌ನಿಂದ ಅನ್ಯಾಯ: ಮಾಜಿ ಹೈಕೋರ್ಟ್ ಮುಖ್ಯ ನ್ಯಾಯಾಧೀಶ
ಸುರೇಶಕುಮಾರ ಕೈಟ್ | PC : hindustantimes.com
ಭೋಪಾಲ: ನ್ಯಾಯಾಂಗದಲ್ಲಿ ದುರ್ಬಲ ವರ್ಗಗಳಿಗೆ ಮೀಸಲಾತಿಗಾಗಿ ಆಗ್ರಹಿಸಿರುವ ಮಧ್ಯಪ್ರದೇಶ ಉಚ್ಚ ನ್ಯಾಯಾಲಯದ ಮಾಜಿ ಮುಖ್ಯ ನ್ಯಾಯಾಧೀಶ ಸುರೇಶಕುಮಾರ ಕೈಟ್ ಅವರು, ಸಾಂವಿಧಾನಿಕ ನ್ಯಾಯಾಲಯಗಳಿಗೆ ನ್ಯಾಯಾಧೀಶರನ್ನು ಆಯ್ಕೆ ಮಾಡುವ ಸರ್ವೋಚ್ಚ ನ್ಯಾಯಾಲಯದ ಕೊಲಿಜಿಯಂ ವ್ಯವಸ್ಥೆಯು ಪರಿಶಿಷ್ಟ ಜಾತಿಗಳು(ಎಸ್‌ಸಿ),ಪರಿಶಿಷ್ಟ ಪಂಗಡಗಳು(ಎಸ್‌ಟಿ) ಮತ್ತು ಇತರ ಹಿಂದುಳಿದ ವರ್ಗಗಳ(ಒಬಿಸಿ) ಸಮುದಾಯಗಳಿಗೆ ಸೇರಿದ ಜನರ ವಿಷಯದಲ್ಲಿ ‘ಅಪ್ರಾಮಾಣಿಕ’ವಾಗಿದೆ ಎಂದು ಹೇಳಿದ್ದಾರೆ.
ದಲಿತ, ಒಬಿಸಿ, ಅಲ್ಪಸಂಖ್ಯಾತರು ಮತ್ತು ಆದಿವಾಸಿಗಳ ಸಂಘಟನೆಗಳ ಒಕ್ಕೂಟ(ಡಿಒಎಂಎ)ವು ರವಿವಾರ ಇಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಕೈಟ್, ‘ನಾನು ದಿಲ್ಲಿ ಹೈಕೋರ್ಟ್‌ನ ನ್ಯಾಯಾಧೀಶನಾಗಿದ್ದೆ ಮತ್ತು ನಾನೊಬ್ಬನೇ ಈ ಗುಂಪುಗಳಿಗೆ ಸೇರಿದವನಾಗಿದ್ದೆ. ಎಸ್‌ಸಿ/ಎಸ್‌ಟಿ/ಒಬಿಸಿ ಸಮುದಾಯಗಳಿಗೆ ಸೇರಿದ ಇತರ ಯಾವುದೇ ನ್ಯಾಯಾಧೀಶರಿರಲಿಲ್ಲ. ಈವರೆಗೆ ಬೇರೆ ಯಾವುದೇ ಎಸ್‌ಸಿ/ಎಸ್‌ಟಿ/ಒಬಿಸಿ ವಕೀಲರು ನ್ಯಾಯಾಧೀಶರಾಗಿಲ್ಲ. ಇದು ನಾವು ಯೋಚಿಸಬೇಕಾದ ವಿಷಯವಾಗಿದೆ’ ಎಂದು ಹೇಳಿದರು.
ಪ್ರಮಾಣಾನುಗುಣ ಪ್ರಾತಿನಿಧ್ಯಕ್ಕೆ ಒತ್ತಾಯಿಸಿದ ಕೈಟ್,ಈ ದೇಶವು ಯಾವುದೇ ಒಂದು ಜಾತಿಗೆ ಸೇರಿಲ್ಲ,ಬದಲಾಗಿ ಎಲ್ಲ ಜಾತಿಗಳು ಮತ್ತು ಧರ್ಮಗಳಿಗೆ ಸೇರಿದೆ. ಅದರಲ್ಲಿ ಪಾಲ್ಗೊಳ್ಳುವಿಕೆಯು ಜನಸಂಖ್ಯೆಯ ಅನುಪಾತದಷ್ಟೇ ಇರಬೇಕು ಎಂದರು.
ನ್ಯಾಯಾಂಗದಂತಹ ಮೀಸಲಾತಿ ಇಲ್ಲದ ಸಂಸ್ಥೆಗಳಲ್ಲಿ ಹಿಂದುಳಿದವರ ಪ್ರಾತಿನಿಧ್ಯ ತುಂಬ ಕಡಿಮೆಯಿದೆ ಎಂದ ಅವರು,‘ನಾನು ನ್ಯಾಯಾಂಗವನ್ನು ಮಾತ್ರ ಪರಿಗಣಿಸುತ್ತಿದ್ದೇನೆ. ಸರ್ವೋಚ್ಚ ನ್ಯಾಯಾಲಯದಲ್ಲಿ ಮುಖ್ಯ ನ್ಯಾಯಾಧೀಶ ಬಿ.ಆರ್.ಗವಾಯಿ ಸೇರಿದಂತೆ ಕೇವಲ ಎಂಟು ನ್ಯಾಯಾಧೀಶರು ಎಸ್‌ಸಿ/ಎಸ್‌ಟಿ ಮತ್ತು ಹಿಂದುಳಿದ ವರ್ಗಗಳಿಗೆ ಸೇರಿದವರಾಗಿದ್ದಾರೆ. ಹಿಂದುಳಿದ ವರ್ಗಗಳ ವಕೀಲರು ಇಲ್ಲ ಎಂದರ್ಥವಲ್ಲ ಎಂದು ಹೇಳಿದರು.
ಇದು ಸ್ವಲ್ಪ ಕಡಿಮೆ ಅಂದಾಜು ಆಗಿರಬಹುದು. ಸುದ್ದಿಸಂಸ್ಥೆಯ ಡೇಟಾ ಬೇಸ್ ಪ್ರಕಾರ ಈವರೆಗೆ ಸರ್ವೋಚ್ಚ ನ್ಯಾಯಾಲಯದ 279 ನ್ಯಾಯಾಧೀಶರ ಪೈಕಿ 27 ಜನರು ಎಸ್‌ಸಿ/ಎಸ್‌ಟಿ/ಒಬಿಸಿ ಹಿನ್ನೆಲೆಯವರಾಗಿದ್ದಾರೆ. ಆದಾಗ್ಯೂ ಇದು ತುಂಬ ಕಡಿಮೆ ಪ್ರಮಾಣವಾಗಿದೆ.
ಮಧ್ಯಪ್ರದೇಶದ ಜನಸಂಖ್ಯೆಯ ಶೇ.90ರಷ್ಟು ಎಸ್‌ಸಿ/ಎಸ್‌ಟಿ/ಒಬಿಸಿಗಳಾಗಿದ್ದಾರೆ. ಆದರೆ ಈವರೆಗೆ ಒಬ್ಬರೇ ಒಬ್ಬ ಎಸ್‌ಸಿ/ಎಸ್‌ಟಿ ನ್ಯಾಯಾಧೀಶರು ಸೇವೆಯಿಂದ ಮಧ್ಯಪ್ರದೇಶ ಹೈಕೋರ್ಟ್‌ಗೆ ಬಂದಿಲ್ಲ ಅಥವಾ ಈ ಸಮುದಾಯಗಳ ವಕೀಲರೂ ನ್ಯಾಯಾಧೀಶರಾಗಿಲ್ಲ ಎಂದು ಹೇಳಿದ ಕೈಟ್,ಇಡೀ ದೇಶದಲ್ಲಿಯ ಹೈಕೋರ್ಟ್‌ಗಳ ಬಗ್ಗೆ ಹೇಳುವುದಾದರೆ ಪ್ರಸ್ತುತ ನ್ಯಾಯಾಧೀಶರಲ್ಲಿ ಎಸ್‌ಸಿ/ಎಸ್‌ಟಿ/ಒಬಿಸಿಗಳ ಪಾಲು ಶೇ.15-ಶೇ.16ರಷ್ಟಿದೆ. ನೀವು ನಿಮ್ಮ ಧ್ವನಿಯನ್ನು ಎತ್ತುವವರೆಗೂ ಇದು ಹೀಗೆಯೇ ಮುಂದುವರಿಯುತ್ತದೆ ಎಂದರು.