×
Ad

ಕೊಲಂಬಿಯಾ ವಿವಿ ಸಂಶೋಧನಾ ವಿದ್ಯಾರ್ಥಿ ಸ್ವಯಂ ಗಡಿಪಾರು; ಕಾರಣ ಏನು ಗೊತ್ತೇ?

Update: 2025-03-15 08:45 IST

PC: x.com/ani_digital

ಕೊಲಂಬಿಯಾ: ಹಮಾಸ್ ಸಂಘಟನೆಯನ್ನು ಬೆಂಬಲಿಸಿದ ಆರೋಪದಲ್ಲಿ ವೀಸಾ ರದ್ದುಗೊಂಡಿರುವ ಭಾರತೀಯ ಸಂಶೋಧನಾ ವಿದ್ಯಾರ್ಥಿ ರಂಜನಿ ಶ್ರೀನಿವಾಸನ್ ಅಮೆರಿಕ ತೊರೆದಿದ್ದಾರೆ ಎಂದು ಅಮೆರಿಕದ ದೇಶೀಯ ಭದ್ರತಾ ಇಲಾಖೆ ಪ್ರಕಟಿಸಿದೆ. ಮಾರ್ಚ್ 5ರಂದು ರಕ್ಷಣಾ ಇಲಾಖೆ ಭದ್ರತಾ ಕಾರಣಗಳಿಂದ ಅವರ ವೀಸಾ ರದ್ದುಪಡಿಸಿದ ಬಳಿಕ ಸಿಬಿಪಿ ಹೋಮ್ ಆ್ಯಪ್ ಬಳಸಿ 2025ರ ಮಾರ್ಚ್ 11ರಂದು ಸ್ವಯಂ ಗಡೀಪಾರುಗೊಂಡಿದ್ದಾರೆ ಎಂದು ಸ್ಪಷ್ಟಪಡಿಸಿದೆ.

ದೇಶೀಯ ಭದ್ರತಾ ಕಾರ್ಯದಶಿ ಕ್ರಿಸ್ಟಿ ನೊಯಿಮ್ ಈ ಬಗ್ಗೆ ಹೇಳಿಕೆ ನೀಡಿ, "ಅಮೆರಿಕದಲ್ಲಿ ವಾಸಿಸಲು ಮತ್ತು ಅಧ್ಯಯನ ಮಾಡಲು ವೀಸಾ ಪಡೆಯುವುದು ಒಂದು ವಿಶೇಷ ಹಕ್ಕು. ಆದರೆ ನೀವು ಹಿಂಸೆ ಮತ್ತು ಭಯೋತ್ಪಾದನೆಯನ್ನು ಪ್ರತಿಪಾದಿಸಿದಾಗ, ಈ ವಿಶೇಷ ಹಕ್ಕನ್ನು ರದ್ದುಪಡಿಸಲಾಗುತ್ತದೆ ಹಾಗೂ ನೀವು ದೇಶದಲ್ಲಿ ಇರುವಂತಿಲ್ಲ. ಉಗ್ರರ ಬಗ್ಗೆ ಅನುಕಂಪ ಹೊಂದಿದ ಕೊಲಂಬಿಯಾ ವಿವಿಯ ವಿದ್ಯಾರ್ಥಿಯೊಬ್ಬರು ಸಿಬಿಪಿ ಹೋಮ್ ಆ್ಯಪ್ ಬಳಸಿ ಸ್ವಯಂ ಗಡೀಪಾರು ಮಾಡಿಕೊಂಡಿರುವ ಬಗ್ಗೆ ಅತೀವ ಸಂತಸವಿದೆ" ಎಂದು ಹೇಳಿದ್ದಾರೆ.

ವಿದೇಶಿ ವಿದ್ಯಾರ್ಥಿಗಳ ಬಗ್ಗೆ ತೀವ್ರ ಪರಿಶೀಲನೆ ನಡೆಯುತ್ತಿರುವ ನಡುವೆಯೇ ಕಾಲೇಜು ಕ್ಯಾಂಪಸ್ ನಲ್ಲಿ ಫೆಲಸ್ತೀನ್ ಪರ ಪ್ರತಿಭಟನೆಯನ್ನು ಹಮ್ಮಿಕೊಂಡ ಹಿನ್ನೆಲೆಯಲ್ಲಿ ಶ್ರೀನಿವಾಸನ್ ಪ್ರಕರಣ ಬೆಳಕಿಗೆ ಬಂದಿತ್ತು. ಕೊಲಂಬಿಯಾದ ಮತ್ತೊಬ್ಬ ವಿದ್ಯಾರ್ಥಿ ಮೂಲತಃ ಪಶ್ಚಿಮ ದಂಡೆಯ ಲೇಕಾ ಕೊದ್ರಿಯಾ ಎಂಬಾತನನ್ನು ಐಸಿಸಿ ಹೋಮ್ ಲ್ಯಾಂಡ್ ಸೆಕ್ಯುರಿಟಿ ಇನ್ ವೆಸ್ಟಿಗೇಶನ್ ಅಧಿಕಾರಿಗಳು ಬಂಧಿಸಿದ್ದರು. 2022ರ ಜನವರಿ 26ರಂದು ಆಕೆಯ ಎಫ್-1 ವಿದ್ಯಾರ್ಥಿ ವೀಸಾ ಅವಧಿ ಮುಗಿದ ಹಿನ್ನೆಲೆಯಲ್ಲಿ ಆಕೆಯನ್ನು ಬಂಧಿಸಲಾಗಿತ್ತು. ಕೊಲಂಬಿಯಾ ವಿವಿಯಲ್ಲಿ ಹಮಾಸ್ ಪರ ಪ್ರತಿಭಟನೆ ಹಮ್ಮಿಕೊಂಡ ಹಿನ್ನೆಲೆಯಲ್ಲಿ ಕೋದ್ರಿಯಾ 2024ರ ಏಪ್ರಿಲ್ ನಲ್ಲಿ ಬಂಧನಕ್ಕೆ ಒಳಗಾಗಿದ್ದರು.

ಶ್ರೀನಿವಾಸನ್ ಅವರ ಚಟುವಟಿಕೆಗಳ ಬಗ್ಗೆ ಡಿಎಚ್ಎಸ್ ಯಾವುದೇ ವಿವರಗಳನ್ನು ಬಹಿರಂಗಪಡಿಸಿರಲಿಲ್ಲ. ಆದರೆ ಸಿಬಿಪಿ ಹೋಮ್ ಆ್ಯಪ್ ಬಳಸಿ ಭಾರತಕ್ಕೆ ಮರಳಿರುವುದನ್ನು ದೃಢೀಕರಿಸುವ ವಿಡಿಯೊ ದೃಶ್ಯಾವಳಿ ಬಿಡುಗಡೆ ಮಾಡಿದೆ. ರಂಜನಿ ಶ್ರೀನಿವಾಸನ್ ಅವರು ಕೊಲಂಬಿಯಾ ವಿವಿಯಲ್ಲಿ ನಗರ ಯೋಜನೆ ವಿಷಯದಲ್ಲಿ ಪಿಎಚ್ ಡಿ ಪದವಿ ಅಧ್ಯಯನ ಮಾಡುತ್ತಿದ್ದರು. ಕೊಲಂಬಿಯಾ ವಿವಿಯ ಸ್ಕೂಲ್ ಆಫ್ ಆರ್ಕಿಟೆಕ್ಚರ್ ನಲ್ಲಿ ಎಂಫಿಲ್ ಪದವಿ ಪಡೆದಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News