NCERT ಇತಿಹಾಸ ಪಠ್ಯ ಪುಸ್ತಕದಲ್ಲಿ ʼಕೋಮು ವ್ಯಾಖ್ಯಾನʼ : ಪುರಾವೆ ಕೇಳಿದ ಇತಿಹಾಸಕಾರರು; ವರದಿ
ಸಾಂದರ್ಭಿಕ ಚಿತ್ರ
ಹೊಸದಿಲ್ಲಿ: ಮಧ್ಯ ಏಶ್ಯಾದ ಆಕ್ರಮಣಕಾರರು ‘ಅಗತ್ಯವಾದರೆ ಹಿಂಸೆಯ ಮೂಲಕವೂ ತಮ್ಮ ಧರ್ಮದ ತಮ್ಮದೇ ಆದ ಆವೃತ್ತಿಗಳನ್ನು ಹರಡಲು’ ಭಾರತಕ್ಕೆ ಬಂದಿದ್ದರು ಎಂದು ಎನ್‌ಸಿಇಆರ್‌ಟಿಯ ಎಂಟನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕವು ಹೇಳುತ್ತದೆ. ‘ಎಕ್ಸ್‌ಪ್ಲೋರಿಂಗ್ ಸೊಸೈಟಿ:ಇಂಡಿಯಾ ಆ್ಯಂಡ್ ಬಿಯಾಂಡ್(ಭಾಗ 1)’ ಶೀರ್ಷಿಕೆಯ ಪಠ್ಯಪುಸ್ತಕದಲ್ಲಿ ಮುಸ್ಲಿಮೇತರರು ರಕ್ಷಣೆ ಮತ್ತು ಸೇನೆಯಲ್ಲಿ ಸೇವೆಯಿಂದ ವಿನಾಯಿತಿಗಾಗಿ ಪಾವತಿಸಬೇಕಿದ್ದ ‘ಜಿಝಿಯಾ’ ತೆರಿಗೆಯು ಇಸ್ಲಾಮ್‌ಗೆ ಮತಾಂತರವನ್ನು ಪ್ರೋತ್ಸಾಹಿಸಿತ್ತು ಎಂದು ಹೇಳಲಾಗಿದೆ.
ಕೆಲವು ಇತಿಹಾಸಕಾರರು ಐತಿಹಾಸಿಕ ಘಟನೆಗಳ ಈ ‘ಕೋಮುವಾದಿ ವ್ಯಾಖ್ಯಾನ’ಗಳಿಗೆ ಪುರಾವೆಗಳನ್ನು ಪ್ರಶ್ನಿಸಿದ್ದಾರೆ ಎಂದು telegraphindia.com ವರದಿ ಮಾಡಿದೆ.
ಮಧ್ಯ ಏಶ್ಯಾದ ಆಕ್ರಮಣಕಾರರು ಭಾರತದ ಸಂಪತ್ತು ಮತ್ತು ಪ್ರಾದೇಶಿಕ ಮಹತ್ವಾಕಾಂಕ್ಷೆಗಳಿಗಾಗಿ ಮಾತ್ರವಲ್ಲ, ‘ಅಗತ್ಯವಾದರೆ ಹಿಂಸೆಯ ಮೂಲಕವೂ ತಮ್ಮ ಧರ್ಮದ ತಮ್ಮದೇ ಆದ ಆವೃತ್ತಿಗಳನ್ನು ಹರಡಲು’ ಸಹ ಇಲ್ಲಿಗೆ ಬಂದಿದ್ದರು ಎಂದು ಪಠ್ಯಪುಸ್ತಕವು ಹೇಳುತ್ತದೆ.
ದಿಲ್ಲಿಯ ಸುಲ್ತಾನ್ ಅಲ್ಲಾವುದ್ದೀನ್ ಖಿಲ್ಜಿಯು ಶ್ರೀರಂಗಂ, ಮದುರೈ, ಚಿದಂಬರಂ ಮತ್ತು ಬಹುಶಃ ರಾಮೇಶ್ವರದಂತಹ ಸ್ಥಳಗಳಲ್ಲಿಯ ಹಿಂದು ಕೇಂದ್ರಗಳ ಮೇಲೆ ದಾಳಿಗಳನ್ನು ನಡೆಸಿದ್ದ ಎಂದು ಹೇಳಿರುವ ಪುಸ್ತಕವು,ದಿಲ್ಲಿ ಸುಲ್ತಾನರ ಆಡಳಿತದ ಅವಧಿಯಲ್ಲಿ ಬೌದ್ಧ,ಜೈನ ಮತ್ತು ಹಿಂದು ದೇವಸ್ಥಾನಗಳ ಮೇಲೆ ಹಲವಾರು ದಾಳಿಗಳು ನಡೆದಿದ್ದವು. ಲೂಟಿ ಮಾತ್ರವಲ್ಲ,ಮೂರ್ತಿಭಂಜನೆಯೂ ಈ ದಾಳಿಗಳ ಉದ್ದೇಶವಾಗಿತ್ತು ಎಂದು ಉಲ್ಲೇಖಿಸಿದೆ.
ಜಿಝಿಯಾ ಕುರಿತಂತೆ ಪುಸ್ತಕವು, ಆಡಳಿತಗಾರರನ್ನು ಅವಲಂಬಿಸಿ ಈ ತಾರತಮ್ಯದ ತೆರಿಗೆಯು ಆರ್ಥಿಕ ಹೊರೆ ಮತ್ತು ಸಾರ್ವಜನಿಕ ಅವಹೇಳನದ ಮೂಲವಾಗಿತ್ತು ಮತ್ತು ಇಸ್ಲಾಮ್‌ಗೆ ಮತಾಂತರಗೊಳ್ಳುವವರಿಗೆ ಆರ್ಥಿಕ ಮತ್ತು ಸಾಮಾಜಿಕ ಪ್ರೋತ್ಸಾಹವಾಗಿತ್ತು ಎಂದು ಹೇಳಿದೆ.
1398ರಲ್ಲಿ ಭಾರತವನ್ನು ಆಕ್ರಮಿಸಿದ್ದ ತೈಮೂರ್‌ನ ಆತ್ಮಚರಿತ್ರೆಗಳನ್ನು ಉಲ್ಲೇಖಿಸಿರುವ ಅದು,ನಾಸ್ತಿಕರ ಜೊತೆ ಯುದ್ಧವನ್ನು ಸಾರುವುದು ಮತ್ತು ಅವರ ಸಂಪತ್ತನ್ನು ಲೂಟಿ ಮಾಡುವುದು ಆತನ ಉದ್ದೇಶವಾಗಿತ್ತು ಎಂದು ಹೇಳಿದೆ.
ಮುಘಲ್ ಚಕ್ರವರ್ತಿ ಅಕ್ಬರನ ಆಳ್ವಿಕೆಯು ಕ್ರೌರ್ಯ ಮತ್ತು ಸಹಿಷ್ಣುತೆಯ ಮಿಶ್ರಣವಾಗಿತ್ತು ಎಂದು ಬಿಂಬಿಸಿರುವ ಪುಸ್ತಕವು, ಚಿತ್ತೋರ್ ಕೋಟೆಯಲ್ಲಿ ಸುಮಾರು 30,000 ನಾಗರಿಕರ ಮಾರಣಹೋಮಕ್ಕೆ ಆತ ಆದೇಶಿಸಿದ್ದ ಹಾಗೂ ಬದುಕುಳಿದಿದ್ದ ಮಹಿಳೆಯರು ಮತ್ತು ಮಕ್ಕಳನ್ನು ಗುಲಾಮರನ್ನಾಗಿ ಮಾಡಲಾಗಿತ್ತು ಎಂದು ಹೇಳಿದೆ.
‘ನಾಸ್ತಿಕರಿಗೆ ಸೇರಿದ ಹಲವಾರು ಕೋಟೆಗಳು ಮತ್ತು ಪಟ್ಟಣಗಳನ್ನು ವಶಪಡಿಸಿಕೊಳ್ಳುವಲ್ಲಿ ನಾವು ಯಶಸ್ವಿಯಾಗಿದ್ದೇವೆ ಮತ್ತು ಅಲ್ಲಿ ಇಸ್ಲಾಮ್ ಧರ್ಮವನ್ನು ಸ್ಥಾಪಿಸಿದ್ದೇವೆ. ನಮ್ಮ ರಕ್ತದಾಹಿ ಖಡ್ಗದ ನೆರವಿನಿಂದ ಅವರ ಮನಸ್ಸುಗಳಿಂದ ನಾಸ್ತಿಕತೆಯ ಚಿಹ್ನೆಗಳನ್ನು ಅಳಿಸಿದ್ದೇವೆ ಹಾಗೂ ಆ ಸ್ಥಳಗಳಲ್ಲಿ ಮತ್ತು ಹಿಂದುಸ್ಥಾನದಾದ್ಯಂತ ದೇವಸ್ಥಾನಗಳನ್ನು ನಾಶಗೊಳಿಸಿದ್ದೇವೆ’ ಎನ್ನುವುದು ಅಕ್ಬರನ ವಿಜಯ ಸಂದೇಶವಾಗಿತ್ತು ಎಂದು ಪುಸ್ತಕದಲ್ಲಿ ಹೇಳಲಾಗಿದೆ.
ಬಳಿಕ ಅಕ್ಬರ್ ರಾಜಪೂತರು ಮತ್ತು ಧಾರ್ಮಿಕ ನಾಯಕರನ್ನು ತನ್ನ ಆಸ್ಥಾನಕ್ಕೆ ಸ್ವಾಗತಿಸಿದ್ದ, ಜಿಝಿಯಾವನ್ನು ರದ್ದುಗೊಳಿಸಿದ್ದ ಮತ್ತು ‘ಸುಲ್-ಇ-ಕುಲ್(ಎಲ್ಲರೊಂದಿಗೆ ಶಾಂತಿ ಅಥವಾ ಎಲ್ಲ ಧರ್ಮಗಳ ಸಹಿಷ್ಣುತೆ)’ ಸಿದ್ಧಾಂತವನ್ನು ಉತ್ತೇಜಿಸಿದ್ದ ಎಂದು ಪುಸ್ತಕವು ಹೇಳಿದೆ.
‘ನೂರಾರು ವರ್ಷಗಳ ಹಿಂದಿನ ವ್ಯಕ್ತಿಗಳ ಕೃತ್ಯಗಳಿಗೆ ಇಂದು ನಾವು ಯಾವುದೇ ಜವಾಬ್ದಾರಿಯನ್ನು ಹೊಂದಿಲ್ಲ ಎನ್ನುವುದನ್ನು ನೆನಪಿಟ್ಟುಕೊಳ್ಳುವುದು ಮುಖ್ಯ’ ಎಂಬ ಎಚ್ಚರಿಕೆಯ ಮಾತನ್ನೂ ಪಠ್ಯಪುಸ್ತಕದಲ್ಲಿ ಸೇರಿಸಲಾಗಿದೆ.
‘ಪುಸ್ತಕದ ಲೇಖಕರು ಐತಿಹಾಸಿಕ ಘಟನೆಗಳಿಗೆ ಸತ್ಯವೆಂದು ಸಮರ್ಥಿಸಲಾಗದ ಕೋಮುವಾದಿ ವ್ಯಾಖ್ಯಾನಗಳನ್ನು ನೀಡಿದ್ದಾರೆ. ಧರ್ಮವನ್ನು ಹರಡುವುದು ಮಧ್ಯ ಏಷ್ಯಾದ ಆಕ್ರಮಣಕಾರರ ಉದ್ದೇಶವಾಗಿತ್ತು ಎನ್ನುವುದಕ್ಕೆ ಪುರಾವೆ ಎಲ್ಲಿದೆ?’ ಎಂದು ಹೇಳಿದ ದಿಲ್ಲಿಯ ಶ್ಯಾಮಲಾಲ ಕಾಲೇಜಿನ ಇತಿಹಾಸ ವಿಭಾಗದ ಸಹಾಯಕ ಪ್ರಾಧ್ಯಾಪಕ ಜಿತೇಂದ್ರ ಮೀನಾ ಅವರು,ಮುಹಮ್ಮದ್ ಘಝ್ನವಿ ದೇವಸ್ಥಾನಗಳು ಮಾತ್ರವಲ್ಲ,ಮಸೀದಿಗಳ ಮೇಲೂ ದಾಳಿಗಳನ್ನು ನಡೆಸಿದ್ದ ಎಂದರು.
ಜಿಝಿಯಾ ಇಸ್ಲಾಮ್‌ಗೆ ಮತಾಂತರಗೊಳ್ಳುವುದನ್ನು ಪ್ರೋತ್ಸಾಹಿಸಿತ್ತು ಎಂಬ ಹೇಳಿಕೆಯನ್ನು ಪ್ರಶ್ನಿಸಿದ ಅವರು,ಅಕ್ಬರ್‌ನ ಚಿತ್ತೋರ್ ಮಾರಣಹೋಮವು ಧಾರ್ಮಿಕ ಉದ್ದೇಶಗಳನ್ನು ಹೊಂದಿತ್ತು ಎನ್ನುವುದಕ್ಕೆ ಯಾವುದೇ ಪುರಾವೆಯಿಲ್ಲ ಎಂದು ಹೇಳಿದರು.