×
Ad

ಅಹ್ಮದಾಬಾದ್ ವಿಮಾನ ಪತನ | ರಾಹುಲ್ ಗಾಂಧಿಯನ್ನು ಗುರಿಯಾಗಿಸಿ ದ್ವೇಷದ ಪೋಸ್ಟ್‌ : ದಿಲ್ಲಿ ಪೊಲೀಸರಿಗೆ ದೂರು

Update: 2025-06-13 12:13 IST

ಹೊಸದಿಲ್ಲಿ : ಗುಜರಾತ್‌ನಲ್ಲಿ ಸಂಭವಿಸಿದ ಏರ್ ಇಂಡಿಯಾ ವಿಮಾನ ದುರಂತದಲ್ಲಿ 265 ಮಂದಿ ಮೃತಪಟ್ಟಿದ್ದಾರೆ. ಘಟನೆ ಬಗ್ಗೆ ಇಡೀ ದೇಶವೇ ದುಃಖತಪ್ತವಾಗಿದೆ. ಘಟನೆ ಬಗ್ಗೆ ಸಂತಾಪ ವ್ಯಕ್ತಪಡಿಸಿದ ರಾಹುಲ್ ಗಾಂಧಿ ಬಗ್ಗೆ ವ್ಯಕ್ತಿಯೋರ್ವ ದ್ವೇಷದ ಕಮೆಂಟ್ ಮಾಡಿದ್ದಾನೆ. 'ನೀವೂ ಅದೇ ಏರ್ ಇಂಡಿಯಾ ವಿಮಾನವನ್ನು ಹತ್ತಬೇಕಿತ್ತು' ಎಂದು ಹೇಳಿದ್ದಾನೆ.

ವಿಮಾನ ದುರಂತದ ಬಗ್ಗೆ ಆಘಾತವನ್ನು ವ್ಯಕ್ತಪಡಿಸಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದರು. ʼಅಹ್ಮದಾಬಾದ್ ಏರ್ ಇಂಡಿಯಾ ಅವಘಡ ಘಟನೆಯು ಹೃದಯವಿದ್ರಾವಕವಾಗಿದೆ. ಸಂತ್ರಸ್ತ ಕುಟುಂಬಗಳು ಅನುಭವಿಸುತ್ತಿರುವ ನೋವು ಮತ್ತು ಆತಂಕವನ್ನು ಊಹಿಸಲೂ ಸಾಧ್ಯವಿಲ್ಲ. ಈ ಕಷ್ಟದ ಕ್ಷಣದಲ್ಲಿ ನನ್ನ ಪ್ರಾರ್ಥನೆಗಳು ಅವರ ಜೊತೆಗಿದೆ ಎಂದ ರಾಹುಲ್ ಗಾಂಧಿ, ರಕ್ಷಣಾ ಕಾರ್ಯಚರಣೆಯಲ್ಲಿ ಸಹಕರಿಸುವಂತೆ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಮನವಿ ಮಾಡಿಕೊಂಡಿದ್ದರು.

ರಾಹುಲ್ ಗಾಂಧಿ ಅವರ ಪೋಸ್ಟ್‌ಗೆ ಅನುಭವ್ ಗುಪ್ತಾ ಎಂಬಾತ ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿ, ನೀನು ಅದೇ ವಿಮಾನವನ್ನು ಹತ್ತಬೇಕಿತ್ತು. ಆಗ ನೀನು ಕೂಡ ಸಾಯುತ್ತಿದ್ದೆ ಎಂದು ಬರೆದಿದ್ದಾನೆ. ವಿಮಾನ ದುರಂತ ಘಟನೆಯಲ್ಲೂ ದ್ವೇಷ ಸಾಧಿಸಿದ್ದಾನೆ.

ಕಾಂಗ್ರೆಸ್ ನಾಯಕ ಮಂಜಿತ್ ಘೋಷಿ ಈ ಕುರಿತು ಪ್ರತಿಕ್ರಿಯಿಸಿ, ರಾಹುಲ್ ಗಾಂಧಿ ಆ ವಿಮಾನದಲ್ಲಿ ಹೋಗುವುದರಿಂದ ಇತರರ ಜೀವ ಉಳಿಯುತ್ತಿತ್ತು ಎಂದಾದರೆ, ಅವರು ಕೂಡ ಆ ವಿಮಾನದಲ್ಲಿ ಇರುತ್ತಿದ್ದರು. ನಿಮ್ಮ ಮನಸ್ಥಿತಿ ಕೊಳೆತು ಹೋಗಿದೆ. ಜವಾಬ್ದಾರಿಯ ಬಗ್ಗೆ ಪ್ರಶ್ನೆಗಳು ಇರಬೇಕಾದಾಗ, ನೀವು ರಾಹುಲ್ ಸಾವನ್ನು ಬಯಸುತ್ತಿದ್ದೀರಿ. ಇಂದು ಅನೇಕ ಕುಟುಂಬಗಳು ನಾಶವಾಗಿವೆ. ಇದು ಹೀಗೆಯೇ ಮುಂದುವರಿದರೆ, ನಾಳೆ ನಿಮ್ಮ ಮತ್ತು ನನ್ನ ಕುಟುಂಬಗಳು ನಾಶವಾಗುತ್ತವೆ ಎಂದು ಪ್ರತಿಕ್ರಿಯಿಸಿದ್ದಾರೆ.

ಅನುಭವ್ ಗುಪ್ತಾ ದ್ವೇಷದ ಹೇಳಿಕೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಅನುಭವ್ ಗುಪ್ತಾ ಅವರನ್ನು ತಕ್ಷಣ ಬಂಧಿಸುವಂತೆ ಎಕ್ಸ್ ಬಳಕೆದಾರರೋರ್ವರು ಆಗ್ರಹಿಸಿದ್ದಾರೆ. ಮತ್ತೋರ್ವರು ಅನುಭವ್ ಗುಪ್ತಾ ಅವರ ನಡವಳಿಕೆ ಸಂಪೂರ್ಣವಾಗಿ ನಾಚಿಕೆಗೇಡು ಮತ್ತು ದುಃಖಕರವಾಗಿದೆ ಎಂದು ಹೇಳಿದ್ದಾರೆ.

ದಿಲ್ಲಿ ಪೊಲೀಸರಿಗೆ ದೂರು ನೀಡಿದ ವಕೀಲ :

ಏರ್ ಇಂಡಿಯಾ ವಿಮಾನ ದುರಂತಕ್ಕೆ ಸಂತಾಪ ವ್ಯಕ್ತಪಡಿಸಿ ಪೋಸ್ಟ್ ಮಾಡಿದ ರಾಹುಲ್ ಗಾಂಧಿ ಅವರನ್ನು ಗುರಿಯಾಗಿಸಿ ನಿಂದನೀಯ ಕಮೆಂಟ್ ಮಾಡಿರುವ ಅಭಿನವ್ ಗುಪ್ತಾ ವಿರುದ್ಧ ದಿಲ್ಲಿ ಪೊಲೀಸರಿಗೆ ದೂರು ನೀಡಿರುವುದಾಗಿ ಸುಪ್ರೀಂ ಕೋರ್ಟ್ ವಕೀಲರಾದ ಪ್ರಣವ್ ಅರೋರಾ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News