ಆರೆಸ್ಸೆಸ್ ಗೆ ಮುಖಭಂಗ: ಐಐಸಿಸಿ ಅಧ್ಯಕ್ಷರಾಗಿ ಸಲ್ಮನ್ ಖುರ್ಷಿದ್ ಆಯ್ಕೆ
PC:x.com/salman7khurshid
ಹೊಸದಿಲ್ಲಿ: ಹಿರಿಯ ಕಾಂಗ್ರೆಸ್ ಮುಖಂಡ ಮತ್ತು ಖ್ಯಾತ ನ್ಯಾಯವಾದಿ ಸಲ್ಮಾನ್ ಖುರ್ಷಿದ್ ಅವರು ರಾಷ್ಟ್ರ ರಾಜಧಾನಿಯ ಪ್ರಸಿದ್ಧ ಅಲ್ಪಸಂಖ್ಯಾತರ ಸಂಸ್ಥೆ ಎನಿಸಿದ ಇಂಡಿಯನ್ ಇಸ್ಲಾಮಿಕ್ ಕಲ್ಚರಲ್ ಸೆಂಟರ್ (ಐಐಸಿಸಿ) ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಈ ಪ್ರಾತಿನಿಧಿಕ ಸಾಂಸ್ಕೃತಿಕ ಸಂಸ್ಥೆಯ ಆಡಳಿತ ಮಂಡಳಿಯಲ್ಲಿ ತನ್ನ ಅಸ್ತಿತ್ವ ಸ್ಥಾಪಿಸಲು ಹೊರಟಿದ್ದ ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ ಇದರಿಂದ ಮುಖಭಂಗವಾಗಿದ್ದು, ಖುರ್ಷಿದ್ 721 ಮತಗಳನ್ನು ಪಡೆದು ಜಯಭೇರಿ ಸಾಧಿಸಿದರು.
ಆರೆಸ್ಸೆಸ್ ಬೆಂಬಲಿತ ಮುಸ್ಲಿಂ ರಾಷ್ಟ್ರೀಯ ಮಂಚ್ (ಎಂಆರ್ಎಂ) ಸಂಚಾಲಕ ಮತ್ತು ಖ್ಯಾತ ಕ್ಯಾನ್ಸರ್ ತಜ್ಞ ಡಾ.ಮಜೀದ್ ಅಹ್ಮದ್ ತಾಳಿಕೋಟಿ ಸಂಸ್ಥೆಯ ಅಧ್ಯಕ್ಷ ಸ್ಥಾನದ ಸ್ಪರ್ಧೆಯಲ್ಲಿದ್ದರು. ಐಐಸಿಸಿ ಮಾಜಿ ಅಧ್ಯಕ್ಷ ಸಿರಾಜುದ್ದೀನ್ ಖುರೇಷಿ ಅವರ ಬೆಂಬಲವೂ ತಾಳಿಕೋಟಿಯವರಿಗಿತ್ತು. ಆದರೆ ಅವರು ಕೇವಲ 227 ಮತಗಳನ್ನಷ್ಟೇ ಪಡೆಯಲು ಸಾಧ್ಯವಾಯಿತು. ಉದ್ಯಮಿ ಹಾಗೂ ದಾನಿ ಆಸೀಫ್ ಹಬೂಬ್ 278 ಮತ ಪಡೆದರು.
ಒಟ್ಟು 13 ಮಂದಿಯ ಆಡಳಿತ ಮಂಡಳಿಯಲ್ಲಿ ಕನಿಷ್ಠ ಎಂಟು ಮಂದಿ ಖುರ್ಷಿದ್ ಬೆಂಬಲಿಗರು ಆಯ್ಕೆಯಾಗಿದ್ದಾರೆ. "ಐಐಸಿಸಿ ಅಧ್ಯಕ್ಷ ಹುದ್ದೆಗೆ ಆಯ್ಕೆಯಾಗಿರುವುದು ನನಗೆ ಸಂದ ಅತಿದೊಡ್ಡ ಗೌರವ. ವಿಶ್ವಾಸ ಮತ್ತು ಬೆಂಬಲಕ್ಕಾಗಿ ಎಲ್ಲ ಸದಸ್ಯರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಎಲ್ಲ ಚುನಾಯಿತ ಅಭ್ಯರ್ಥಿಗಳಿಗೆ ಅಭಿನಂದನೆಗಳು. ಐಐಸಿಸಿ ಮೌಲ್ಯಗಳನ್ನು ಉಳಿಸಿ ಬೆಳೆಸಲು ಎಲ್ಲರೂ ಜತೆಯಾಗಿ ಕಾರ್ಯ ನಿರ್ವಹಿಸೋಣ" ಎಂದು ಅವರು ಎಕ್ಸ್ ಪೋಸ್ಟ್ ನಲ್ಲಿ ಹೇಳಿದ್ದಾರೆ.
ಆಗಸ್ಟ್ 11ರಂದು ಚುನಾವಣೆ ನಡೆದಿದ್ದು, ಮೂರು ದಿನಗಳ ಮತ ಎಣಿಕೆ ಬಳಿಕ ಬುಧವಾರ ಫಲಿತಾಂಶ ಪ್ರಕಟಿಸಲಾಯಿತು. ನಿವೃತ್ತ ಉನ್ನತಾಧಿಕಾರಿ ಅಬ್ರಾರ್ ಅಹ್ಮದ್ ಹಾಗೂ ಹಬೀಬ್ ಕಣಕ್ಕೆ ಇಳಿಯುವ ಮೂಲಕ ಅಧ್ಯಕ್ಷ ಹುದ್ದೆಗೆ ಬಹುಮುಖಿ ಸ್ಪರ್ಧೆ ಇತ್ತು.