×
Ad

ಪಹಲ್ಗಾಮ್ ದಾಳಿಯ ಬಗ್ಗೆ ಚರ್ಚಿಸಲು ವಿಶೇಷ ಸಂಸತ್ ಅಧಿವೇಶನ ನಡೆಸಿ: ಪ್ರಧಾನಿಗೆ ಪತ್ರ ಬರೆದ ಖರ್ಗೆ, ರಾಹುಲ್ ಗಾಂಧಿ

Update: 2025-04-29 11:57 IST

File Photo: PTI

ಹೊಸದಿಲ್ಲಿ: ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬಗ್ಗೆ ಚರ್ಚಿಸಲು ಮತ್ತು ಒಗ್ಗಟ್ಟು ಪ್ರದರ್ಶಿಸಲು ಸಂಸತ್ತಿನ ವಿಶೇಷ ಅಧಿವೇಶನ ಕರೆಯುವಂತೆ ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.

ಕಳೆದ ವಾರ 26 ಜನ ಪ್ರವಾಸಿಗರು ಸಾವನ್ನಪ್ಪಿದ ಭೀಕರ ದಾಳಿಯ ನಂತರ ಹಲವಾರು ವಿರೋಧ ಪಕ್ಷದ ಸಂಸದರು ಸರ್ಕಾರಕ್ಕೆ ಇದೇ ರೀತಿಯ ಬೇಡಿಕೆಯನ್ನು ಇಟ್ಟಿದ್ದಾರೆ. ಪಹಲ್ಗಾಮ್ ನಲ್ಲಿನ ಭೀಕರ ದಾಳಿಯು ದೇಶದಲ್ಲಿ ಆಕ್ರೋಶದ ಭಾವನೆ ಹೆಚ್ಚಿಸಿದೆ. ದಾಳಿಯಲ್ಲಿ ಮಡಿದ ಜನರಿಗೆ ಕಂಬನಿಯ ನದಿಯೇ ಹರಿದಿದೆ. ಭಾರತವು ಈ ಭಯಾನಕ ಘಟನೆಗೆ ಗಡಿಯಾಚೆಗಿನ ಬಾಹ್ಯ ವ್ಯಕ್ತಿಗಳ ಸಂಪರ್ಕವನ್ನು ಉಲ್ಲೇಖಿಸಿದೆ. ಭಯೋತ್ಪಾದಕ ದಾಳಿಯಲ್ಲಿ ಭಾಗಿಯಾಗಿರುವವರಿಗೆ ಕಠಿಣ ಶಿಕ್ಷೆ ವಿಧಿಸುವ ಪಣ ತೊಟ್ಟಿದೆ.

"ಏಕತೆ ಮತ್ತು ಒಗ್ಗಟ್ಟು ಅತ್ಯಗತ್ಯವಾಗಿರುವ ಈ ಕ್ಷಣದಲ್ಲಿ, ಸಂಸತ್ತಿನ ಎರಡೂ ಸದನಗಳ ವಿಶೇಷ ಅಧಿವೇಶನವನ್ನು ಆದಷ್ಟು ಬೇಗ ಕರೆಯುವುದು ಮುಖ್ಯ ಎಂದು ವಿರೋಧ ಪಕ್ಷಗಳ ನಿಲುವು" ಎಂದು ಖರ್ಗೆ ಪ್ರಧಾನಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

"ಎಪ್ರಿಲ್ 22 ರಂದು ಪಹಲ್ಗಾಮ್‌ ನಲ್ಲಿ ಮುಗ್ಧ ನಾಗರಿಕರ ಮೇಲೆ ನಡೆದ ಕ್ರೂರ ಭಯೋತ್ಪಾದಕ ದಾಳಿಯನ್ನು ಎದುರಿಸಲು ನಮ್ಮ ಸಾಮೂಹಿಕ ಸಂಕಲ್ಪ ಮತ್ತು ಇಚ್ಛಾಶಕ್ತಿಯ ಪ್ರಬಲ ಪ್ರದರ್ಶನ ಇದಾಗಲಿದೆ. ಅಧಿವೇಶನವನ್ನು ಕರೆಯಬೇಕೆಂಬ ಪ್ರೀತಿಯ ಆಶಯ ನಮ್ಮದು" ಎಂದು ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ರಾಹುಲ್ ಗಾಂಧಿ ಕೂಡ ಇದೇ ವಿನಂತಿಯೊಂದಿಗೆ ಮೋದಿಗೆ ಪತ್ರ ಬರೆದು ಪಹಲ್ಗಾಮ್ ದುರಂತವು ಪ್ರತಿಯೊಬ್ಬ ಭಾರತೀಯನಲ್ಲಿ ಆಕ್ರೋಶ ಹುಟ್ಟು ಹಾಕಿದೆ ಎಂದು ಹೇಳಿದ್ದಾರೆ.

"ಈ ನಿರ್ಣಾಯಕ ಸಮಯದಲ್ಲಿ, ಭಯೋತ್ಪಾದನೆಯ ವಿರುದ್ಧ ನಾವು ಯಾವಾಗಲೂ ಒಟ್ಟಾಗಿ ನಿಲ್ಲುತ್ತೇವೆ ಎಂದು ಭಾರತ ತೋರಿಸಬೇಕು. ಸಂಸತ್ತಿನ ಎರಡೂ ಸದನಗಳ ವಿಶೇಷ ಅಧಿವೇಶನವನ್ನು ಕರೆಯಬೇಕು ಎಂದು ವಿರೋಧ ಪಕ್ಷಗಳು ಭಾವಿಸುತ್ತವೆ. ಆ ಸಂದರ್ಭದಲ್ಲಿ ಜನ ಪ್ರತಿನಿಧಿಗಳು ತಮ್ಮ ಏಕತೆ ಮತ್ತು ದೃಢಸಂಕಲ್ಪವನ್ನು ತೋರಿಸಬಹುದು", ಎಂದು ಅವರು ಉಲ್ಲೇಖಿಸಿದ್ದಾರೆ.

"ವಿಶೇಷ ಅಧಿವೇಶನವನ್ನು ಆದಷ್ಟು ಬೇಗ ಕರೆಯಬೇಕೆಂದು ನಾವು ವಿನಂತಿಸುತ್ತೇವೆ. ಈ ನಿರ್ಣಾಯಕ ಸಮಯದಲ್ಲಿ, ಭಯೋತ್ಪಾದನೆಯ ವಿರುದ್ಧ ನಾವು ಯಾವಾಗಲೂ ಒಟ್ಟಾಗಿ ನಿಲ್ಲುತ್ತೇವೆ ಎಂದು ದೇಶವು ತೋರಿಸಬೇಕು", ಎಂದು ರಾಹುಲ್ ಗಾಂಧಿ ತಮ್ಮ ಪತ್ರದಲ್ಲಿ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News