ಗೋಡ್ಸೆ ಪ್ರಶಂಸಿದ ಪ್ರಾಧ್ಯಾಪಕಿಯ ಡೀನ್ ಆಗಿ ನೇಮಕ: ಮೋದಿ ಸರಕಾರಕ್ಕೆ ಕಾಂಗ್ರೆಸ್ ತರಾಟೆ
ಡಾ. ಶೈಜಾ |PC: nitc.ac.in
ಹೊಸದಿಲ್ಲಿ: ಮಹಾತ್ಮಾ ಗಾಂಧಿ ಹಂತಕ ನಾಥುರಾಮ್ ಗೋಡ್ಸೆಯನ್ನು ಪ್ರಶಂಶಿಸಿದ ಆರೋಪಕ್ಕೆ ಒಳಗಾಗಿರುವ ಎನ್‌ಐಟಿ-ಕ್ಯಾಲಿಕಟ್‌ನ ಪ್ರಾಧ್ಯಾಪಕಿಯನ್ನು ಡೀನ್ ಆಗಿ ನಿಯೋಜಿಸಿರುವ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರವನ್ನು ಕಾಂಗ್ರೆಸ್ ಗುರುವಾರ ತರಾಟೆಗೆ ತೆಗೆದುಕೊಂಡಿದೆ.
ಎನ್‌ಐಟಿ-ಕ್ಯಾಲಿಕಟ್‌ನ ನಿರ್ದೇಶಕರು ಜಾರಿಗೊಳಿಸಿದ ಆದೇಶದಲ್ಲಿ ಮಾರ್ಚ್ 7ರಂದು ಅನ್ವಯವಾಗುವಂತೆ ಯೋಜನೆ ಹಾಗೂ ಅಭಿವೃದ್ಧಿ ವಿಭಾಗದ ಡೀನ್ ಆಗಿ ಡಾ. ಶೈಜಾ ಅವರನ್ನು ನಿಯೋಜಿಸಲಾಗಿದೆ ಎಂದು ಹೇಳಲಾಗಿದೆ.
ಮಹಾತ್ಮಾ ಗಾಂಧಿ ಹುತಾತ್ಮ ದಿನದಂದು ನಾಥುರಾಮ್ ಗೋಡ್ಸೆಯನ್ನು ಪ್ರಶಂಸಿದ ಆರೋಪದಲ್ಲಿ ಡಾ. ಶೈಜಾ ಅವರ ವಿರುದ್ಧ ದಾಖಲಾಗಿರುವ ಪೊಲೀಸ್ ಪ್ರಕರಣದ ವಿಚಾರಣೆ ಇನ್ನೂ ಬಾಕಿ ಇದೆ.
‘‘ಭಾರತವನ್ನು ರಕ್ಷಿಸಿದ ಗೋಡ್ಸೆ ಬಗ್ಗೆ ನನಗೆ ಹೆಮ್ಮೆ ಇದೆ ಎಂದು ಸಾರ್ವಜನಿಕವಾಗಿ ಹೇಳಿಕೆ ನೀಡಿದ ಕೇರಳದ ಪ್ರಾಧ್ಯಾಪಕರೊಬ್ಬರನ್ನು ಮೋದಿ ಸರಕಾರ ಎನ್‌ಐಟಿ-ಕ್ಯಾಲಿಕಟ್‌ನಲ್ಲಿ ಡೀನ್ ಆಗಿ ನೇಮಕ ಮಾಡಿದೆ’’ ಎಂದು ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ (ಸಂವಹನ ಉಸ್ತುವಾರಿ) ಜೈರಾಮ್ ರಮೇಶ್ ತನ್ನ ‘ಎಕ್ಸ್’ನ ಪೋಸ್ಟ್‌ನಲ್ಲಿ ಹೇಳಿದ್ದಾರೆ.
ಮಹಾತ್ಮಾ ಗಾಂಧಿ ಹಾಗೂ ನಾಥೂರಾಮ್ ಗೋಡ್ಸೆ ನಡುವೆ ಯಾರನ್ನು ಒಪ್ಪಿಕೊಳ್ಳಬೇಕು ಎಂದು ಕಲ್ಕತ್ತಾ ಉಚ್ಚ ನ್ಯಾಯಾಲಯದ ಮಾಜಿ ನ್ಯಾಯಾಧೀಶರು ಆಯ್ಕೆ ಮಾಡಲು ಸಾಧ್ಯವಿಲ್ಲ. ಅಲ್ಲದೆ, ಅವರು ಈಗ ಬಿಜೆಪಿಯ ಸಂಸದರಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಗಾಂಧಿಯನ್ನು ಒಪ್ಪಿಕೊಳ್ಳಿ, ಗೋಡ್ಸೆಯನ್ನು ವೈಭವೀಕರಿಸಿ ಎಂಬುದು ಮೋದಿ ಅವರ ಮನಸ್ಥಿತಿಯ ಭಾಗ ಎಂದು ಜೈರಾಮ್ ರಮೇಶ್ ಹೇಳಿದ್ದಾರೆ.