‘ವಂತಾರಾ’ದೊಂದಿಗಿನ ದಿಲ್ಲಿ ಮೃಗಾಲಯದ ಪ್ರಸ್ತಾವಿತ ಒಪ್ಪಂದ ಖಾಸಗೀಕರಣದತ್ತ ಮೊದಲ ಹೆಜ್ಜೆಯೇ?: ಕಾಂಗ್ರೆಸ್ ಆಗ್ರಹ
PC : PTI
ಹೊಸದಿಲ್ಲಿ: ದಿಲ್ಲಿ ಮೃಗಾಲಯ ಹಾಗೂ ಪ್ರಾಣಿ ಸಂರಕ್ಷಣೆ ಹಾಗೂ ಪುನರ್ವಸತಿ ಕೇಂದ್ರ ‘ವಂತಾರಾ’ದ ನಡುವಿನ ಪ್ರಸ್ತಾವಿತ ಒಪ್ಪಂದ ಮೃಗಾಲಯವನ್ನು ಖಾಸಗಿ ಉದ್ಯಮಕ್ಕೆ ಹಸ್ತಾಂತರಿಸುವ ಮೊದಲ ಹೆಜ್ಜೆಯೇ ಎಂಬ ಬಗ್ಗೆ ಕೇಂದ್ರ ಸರಕಾರ ಉತ್ತರಿಸುವಂತೆ ಕಾಂಗ್ರೆಸ್ ಬುಧವಾರ ಆಗ್ರಹಿಸಿದೆ.
ಗುಟ್ಟು ಗುಟ್ಟಾಗಿ ಮಾಡಲಾದ ಇಂತಹ ಒಪ್ಪಂದ ಹಲವು ಪ್ರಶ್ನೆಗಳನ್ನು ಹುಟ್ಟು ಹಾಕುತ್ತದೆ. ಇಂತಹ ಒಪ್ಪಂದದಲ್ಲಿ ಪಾರದರ್ಶಕತೆಯ ಅಗತ್ಯವಿರುತ್ತದೆ ಎಂದು ಕಾಂಗ್ರೆಸ್ ನ ಪ್ರಧಾನ ಕಾರ್ಯದರ್ಶಿ ಹಾಗೂ ಮಾಜಿ ಪರಿಸರ ಸಚಿವ ಜೈರಾಮ್ ರಮೇಶ್ ಹೇಳಿದ್ದಾರೆ.
‘‘ದಿಲ್ಲಿ ಮೃಗಾಲಯ ಕೇಂದ್ರ ಪರಿಸರ, ಅರಣ್ಯ ಹಾಗೂ ಹವಾಮಾನ ಬದಲಾವಣೆ ಸಚಿವಾಲಯದ ನೇರ ನಿಯಂತ್ರಣದಲ್ಲಿದೆ. ಉತ್ತಮ ನಿರ್ವಹಣೆ ಪಡೆಯಲು ಏಕೈಕ ವಂತಾರಾ ಹಾಗೂ ಗುಜರಾತ್ ಸರಕಾರದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಲು ಅದು ಯೋಜಿಸುತ್ತಿದೆ’’ ಎಂದು ವರದಿಯೊಂದನ್ನು ಉಲ್ಲೇಖಿಸಿ ‘ಎಕ್ಸ್’ನ ಪೋಸ್ಟ್ ನಲ್ಲಿ ಅವರು ಹೇಳಿದ್ದಾರೆ.
ಇದು ಆಡಳಿತದ ವರ್ಗಾವಣೆ ಅಲ್ಲ ಎಂದು ಸರಕಾರ ಪ್ರತಿಪಾದಿಸಿದರೂ, ಅದರ ಹಿಂದಿನ ದಾಖಲೆ ವಿಶ್ವಾಸ ಮೂಡಿಸುವುದಿಲ್ಲ. ಇದು ಮೃಗಾಲಯವನ್ನು ಖಾಸಗಿ ಉದ್ಯಮಕ್ಕೆ ಹಸ್ತಾಂತರಿಸುವ ಕಡೆಗೆ ಮೊದಲ ಹೆಜ್ಜೆಯೇ? ಎಂದು ಅವರು ಪ್ರಶ್ನಿಸಿದ್ದಾರೆ.
ಮೃಗಾಲಯ, ರಾಷ್ಟ್ರೀಯ ಉದ್ಯಾನವನ, ಹುಲಿ ಹಾಗೂ ಇತರ ಮೀಸಲು ಪ್ರದೇಶಗಳು ಹಾಗೂ ಅಭಯಾರಣ್ಯಗಳು ಸಾರ್ವಜನಿಕ ಸೇವೆಗಳಾಗಿವೆ. ಅವುಗಳನ್ನು ಯಾವುದೇ ರೀತಿಯಲ್ಲಿ ಖಾಸಗೀಕರಣಗೊಳಿಸಬಾರದು ಎಂದು ಅವರು ಪ್ರತಿಪಾದಿಸಿದ್ದಾರೆ.
‘ವಂತಾರಾ’ ರಿಲಾಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಹಾಗೂ ರಿಲಾಯನ್ಸ್ ಫೌಂಡೇಶನ್ ಗುಜರಾತ್‌ನ ಜಾಮ್ ನಗರದಲ್ಲಿ ಸ್ಥಾಪಿಸಿದ ಪ್ರಾಣಿಗಳ ಪುನರ್ವಸತಿ ಕೇಂದ್ರ.