×
Ad

ಎಲ್.ಕೆ. ಅಡ್ವಾಣಿಯನ್ನು ಹೊಗಳಿದ ಶಶಿ ತರೂರ್; ಅಂತರ ಕಾಯ್ದುಕೊಂಡ ಕಾಂಗ್ರೆಸ್

Update: 2025-11-10 15:12 IST

Photo credit:X/@ShashiTharoor

ಹೊಸದಿಲ್ಲಿ: ಮಾಜಿ ಉಪ ಪ್ರಧಾನಮಂತ್ರಿ ಹಾಗೂ ಬಿಜೆಪಿ ಹಿರಿಯ ನಾಯಕ ಎಲ್.ಕೆ. ಅಡ್ವಾಣಿ ಅವರನ್ನು ನಿಜವಾದ ರಾಜನೀತಿಜ್ಞ ಎಂದು ಹೊಗಳಿದ ಕಾಂಗ್ರೆಸ್ ಸಂಸದ ಶಶಿ ತರೂರ್ ಅವರ ಹೇಳಿಕೆಯಿಂದ ಕಾಂಗ್ರೆಸ್ ಪಕ್ಷವು ಅಂತರ ಕಾಯ್ದುಕೊಂಡಿದೆ.

ಅಡ್ವಾಣಿ ಅವರ 98ನೇ ಹುಟ್ಟುಹಬ್ಬದ ಅಂಗವಾಗಿ ಶನಿವಾರ ತಿರುವನಂತಪುರಂ ಸಂಸದ ತರೂರ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, “ಸಾರ್ವಜನಿಕ ಸೇವೆಗೆ ಅವರ ಅಚಲ ಬದ್ಧತೆ, ವಿನಮ್ರತೆ ಮತ್ತು ಆಧುನಿಕ ಭಾರತದ ಪಥವನ್ನು ರೂಪಿಸುವಲ್ಲಿ ಅವರ ಪಾತ್ರ ಶ್ಲಾಘನೀಯ” ಎಂದು ಪ್ರಶಂಸಿಸಿದ್ದರು.

“ಅಡ್ವಾಣಿ ಅವರು ನಿಜವಾದ ರಾಜನೀತಿಜ್ಞರು, ಅವರ ಸೇವಾ ಜೀವನವು ಪ್ರೇರಣಾದಾಯಕ” ಎಂದು ತರೂರ್ ಪೋಸ್ಟ್ ಮಾಡಿದ್ದರು.

ಆದರೆ ಈ ಹೇಳಿಕೆಗೆ ಸಾಮಾಜಿಕ ಜಾಲತಾಣಗಳಲ್ಲಿ ವಿರೋಧ ವ್ಯಕ್ತವಾಯಿತು. ಅಯೋಧ್ಯೆ ಚಳುವಳಿಯಲ್ಲಿ ಹಾಗೂ ಬಾಬರಿ ಮಸೀದಿ ಧ್ವಂಸದಲ್ಲಿ ಅಡ್ವಾಣಿಯವರ ಪಾತ್ರವನ್ನು ನೆನಪಿಸಿಕೊಂಡು ಹಲವರು ತರೂರ್ ಅವರನ್ನು ಟೀಕಿಸಿದರು. ವಕೀಲ ಸಂಜಯ್ ಹೆಗ್ಡೆ ಅವರು “ದ್ವೇಷದ ಬೀಜ ಬಿತ್ತುವುದು ಸಾರ್ವಜನಿಕ ಸೇವೆಯಲ್ಲ” ಎಂದು ಪ್ರತಿಕ್ರಿಯಿಸಿದ್ದರು.

ಇದಕ್ಕೆ ತರೂರ್ ಪ್ರತಿಕ್ರಿಯೆ ನೀಡುತ್ತಾ, “ಅಡ್ವಾಣಿಯವರ ದೀರ್ಘ ರಾಜಕೀಯ ಜೀವನವನ್ನು ಕೇವಲ ಒಂದು ಘಟನೆಗೆ ಇಳಿಸುವುದು ಅನ್ಯಾಯ. ನೆಹರೂ ಅವರನ್ನು ಚೀನಾ ಯುದ್ಧದಿಂದಲೂ, ಇಂದಿರಾ ಗಾಂಧಿಯವರನ್ನು ತುರ್ತು ಪರಿಸ್ಥಿತಿಯಿಂದಲೂ ಅಳೆಯಲಾಗುವುದಿಲ್ಲ. ಅದೇ ಸೌಜನ್ಯವನ್ನು ಅಡ್ವಾಣಿಯವರಿಗೂ ತೋರಿಸಬೇಕು” ಎಂದು ಹೇಳಿದ್ದಾರೆ.

ಮಾಧ್ಯಮ ಮತ್ತು ಪ್ರಚಾರ ವಿಭಾಗದ ಮುಖ್ಯಸ್ಥ ಪವನ್ ಖೇರಾ ಅವರು ಮಾತನಾಡಿ, “ಯಾವಾಗಲೂ ಹಾಗೆಯೇ, ಡಾ. ಶಶಿ ತರೂರ್ ತಮ್ಮಷ್ಟಕ್ಕೇ ಮಾತನಾಡುತ್ತಾರೆ. ಕಾಂಗ್ರೆಸ್ ಪಕ್ಷವು ಅವರ ಈ ಹೇಳಿಕೆಯಿಂದ ಸಂಪೂರ್ಣವಾಗಿ ಅಂತರ ಕಾಯ್ದುಕೊಳ್ಳುತ್ತದೆ", ಎಂದು ಸ್ಪಷ್ಟಪಡಿಸಿದ್ದಾರೆ.

“ತರೂರ್ ಅವರಂತಹ ನಾಯಕರು ಪಕ್ಷದೊಳಗಿನ ಪ್ರಜಾಪ್ರಭುತ್ವ ಮತ್ತು ವಿಶಿಷ್ಟ ಮನೋಭಾವದ ಸಂಕೇತ. ಆದರೆ ಅವರ ಅಭಿಪ್ರಾಯಗಳು ಪಕ್ಷದ ಅಧಿಕೃತ ನಿಲುವಾಗುವುದಿಲ್ಲ” ಎಂದು ಪವನ್ ಖೇರಾ ಹೇಳಿದ್ದಾರೆ.

ತರೂರ್ ಅವರಿಂದ ಇಂತಹ ವಿವಾದ ಸೃಷ್ಟಿಯಾದದ್ದು ಮೊದಲ ಬಾರಿ ಅಲ್ಲ. ಈ ವರ್ಷದ ಎಪ್ರಿಲ್‌ನಲ್ಲಿ ಜಮ್ಮು– ಕಾಶ್ಮೀರದ ಪಹಲ್ಗಾಂ ದಾಳಿಯ ನಂತರ ಪ್ರಧಾನಿ ನರೇಂದ್ರ ಮೋದಿ ಅವರ ವಿದೇಶಾಂಗ ನೀತಿಯನ್ನು ಹೊಗಳಿದ ತರೂರ್ ಅವರ ಲೇಖನಕ್ಕೂ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿತ್ತು. ಆಗ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ “ನಮಗೆ ಭಾರತ ದೇಶ ಮೊದಲು, ಆದರೆ ಕೆಲವರಿಗೆ ಪ್ರಧಾನಿ ದೇಶಕ್ಕಿಂತ ಮೊದಲಾಗುತ್ತಾರೆ” ಎಂದು ವ್ಯಂಗ್ಯವಾಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News