×
Ad

ಸರ್ವಪಕ್ಷ ನಿಯೋಗಕ್ಕೆ ಕಾಂಗ್ರೆಸ್‌ ನಾಮ ನಿರ್ದೇಶಿತ ಪಟ್ಟಿಯಲ್ಲಿಲ್ಲ ಶಶಿ ತರೂರ್‌ ಹೆಸರು

Update: 2025-05-17 14:23 IST

 ಶಶಿ ತರೂರ್‌ (PTI)

ಹೊಸದಿಲ್ಲಿ: ಭಯೋತ್ಪಾದನೆಯಲ್ಲಿ ಪಾಕಿಸ್ತಾನ ಕೈವಾಡದ ಬಗ್ಗೆ ಭಾರತಗಳಿಗೆ ಕಳುಹಿಸಲಾಗುತ್ತಿರುವ ಸರ್ವಪಕ್ಷ ನಿಯೋಗದ ನೇತೃತ್ವವನ್ನು ಕಾಂಗ್ರೆಸ್‌ ಹಿರಿಯ ನಾಯಕ, ಸಂಸದ ಶಶಿ ತರೂರ್‌ ವಹಿಸುತ್ತಿದ್ದಾರೆ. ಆದರೆ, ಇದೇ ಕಾರ್ಯಕ್ಕಾಗಿ ಕಾಂಗ್ರೆಸ್‌ ಪಕ್ಷದ ನಾಮನಿರ್ದೇಶಿತರ ಪಟ್ಟಿಯಲ್ಲಿ ತರೂರ್‌ ಹೆಸರು ಇಲ್ಲದಿರುವುದು ಚರ್ಚೆಗೆ ಕಾರಣವಾಗಿದೆ.

ಕೇಂದ್ರ ಸಚಿವ ಕಿರಣ್ ರಿಜಿಜು ಅವರು ಮೇ 16 ರ ಬೆಳಿಗ್ಗೆ ಪಾಕಿಸ್ತಾನದಲ್ಲಿ ಹುಟ್ಟಿಕೊಂಡ ಭಯೋತ್ಪಾದನೆಯ ಬಗ್ಗೆ ಭಾರತದ ನಿಲುವನ್ನು ವ್ಯಕ್ತಪಡಿಸಲು ವಿದೇಶಗಳಿಗೆ ಕಳುಹಿಸಲಾಗುತ್ತಿರುವ ನಿಯೋಗಗಳಲ್ಲಿ ಸೇರ್ಪಡೆಗಾಗಿ ಕಾಂಗ್ರೆಸ್‌ ನ ನಾಲ್ಕು ಹೆಸರುಗಳನ್ನು ಸೂಚಿಸುವಂತೆ ವಿನಂತಿಸಿದ್ದರು.

ಅದೇ ದಿನ ಮಧ್ಯಾಹ್ನದ ಹೊತ್ತಿಗೆ, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಕಾಂಗ್ರೆಸ್ ಪರವಾಗಿ ನಾಲ್ಕು ಹೆಸರುಗಳನ್ನು ನೀಡಿದ್ದರು. ಆದರೆ, ಅದರಲ್ಲಿ ತರೂರ್‌ ಅವರ ಹೆಸರು ಇರಲಿಲ್ಲ.

ಕಾಂಗ್ರೆಸ್ ಶಿಫಾರಸು ಪಟ್ಟಿಯಲ್ಲಿ ಮಾಜಿ ಕ್ಯಾಬಿನೆಟ್ ಸಚಿವ ಆನಂದ್ ಶರ್ಮಾ, ಲೋಕಸಭೆಯಲ್ಲಿ ಪಕ್ಷದ ಉಪನಾಯಕ ಗೌರವ್ ಗೊಗೊಯ್, ರಾಜ್ಯಸಭಾ ಸಂಸದ ಡಾ. ಸೈಯದ್ ನಾಸಿರ್ ಹುಸೇನ್ ಮತ್ತು ಲೋಕಸಭಾ ಸಂಸದ ರಾಜಾ ಬ್ರಾರ್ ಅವರ ಹೆಸರಿದೆ.

ಆದರೆ, ತರೂರ್ ಅವರು ಸರ್ವಪಕ್ಷ ನಿಯೋಗದ ನೇತೃತ್ವ ವಹಿಸಲಿದ್ದಾರೆ ಎಂದು ಸಂಸದೀಯ ವ್ಯವಹಾರಗಳ ಸಚಿವಾಲಯ ಘೋಷಿಸಿದೆ. ಬಿಜೆಪಿ ನಾಯಕರಾದ ರವಿಶಂಕರ್ ಪ್ರಸಾದ್ ಮತ್ತು ಬೈಜಯಂತ್ ಪಾಂಡಾ, ಜನತಾದಳ (ಯುನೈಟೆಡ್) ಸಂಸದ ಸಂಜಯ್ ಕುಮಾರ್ ಝಾ, ಡಿಎಂಕೆಯ ಕನಿಮೋಳಿ ಕರುಣಾನಿಧಿ, ಎನ್‌ಸಿಪಿ (ಶರದ್ ಪವಾರ್ ಬಣ) ನಾಯಕಿ ಸುಪ್ರಿಯಾ ಸುಳೆ ಮತ್ತು ಶಿವಸೇನೆ (ಶಿಂದೆ ಬಣ) ಸಂಸದ ಶ್ರೀಕಾಂತ್ ಶಿಂಧೆ ಸೇರಿದಂತೆ ಇತರ ಸದಸ್ಯರನ್ನು ಹೆಸರಿಸಲಾಗಿದೆ.

ಕಾಂಗ್ರೆಸ್‌ ನೀಡಿರುವ ಪಟ್ಟಿಯನ್ನು ಬಿಜೆಪಿ ಪ್ರಶ್ನಿಸಿದೆ.

"ರಾಜತಾಂತ್ರಿಕ ಸಭೆಗಳಲ್ಲಿ ಭಾರತವನ್ನು ಪ್ರತಿನಿಧಿಸುವ ಕಾಂಗ್ರೆಸ್ ಪಕ್ಷದ ಆಯ್ಕೆಗಳು ಕುತೂಹಲಕಾರಿ ಮಾತ್ರವಲ್ಲ - ಅವು ಆಳವಾಗಿ ಪ್ರಶ್ನಾರ್ಹವಾಗಿವೆ" ಎಂದು ಬಿಜೆಪಿ ವಕ್ತಾರ ಅಮಿತ್ ಮಾಳವೀಯ X ನಲ್ಲಿ ಬರೆದಿದ್ದಾರೆ.

ಏಳು ಸದಸ್ಯರ ನಿಯೋಗವು ಮೇ 23 ರಿಂದ 10 ದಿನಗಳ ರಾಜತಾಂತ್ರಿಕ ಕಾರ್ಯಾಚರಣೆಯನ್ನು ಕೈಗೊಳ್ಳಲಿದ್ದು, ವಾಷಿಂಗ್ಟನ್, ಲಂಡನ್, ಅಬುಧಾಬಿ, ಪ್ರಿಟೋರಿಯಾ ಮತ್ತು ಟೋಕಿಯೊದಂತಹ ಪ್ರಮುಖ ರಾಜಧಾನಿಗಳಿಗೆ ಭೇಟಿ ನೀಡಲಿದೆ. ಪ್ರತಿಯೊಂದು ತಂಡವು ಭಯೋತ್ಪಾದನೆಯ ಬಗ್ಗೆ ಭಾರತದ "ಶೂನ್ಯ ಸಹಿಷ್ಣುತೆ" ನೀತಿಯನ್ನು ಪ್ರಸ್ತುತಪಡಿಸುವ ಮತ್ತು ಎಪ್ರಿಲ್ 22 ರಂದು 26 ಜನರ ಸಾವಿಗೆ ಕಾರಣವಾದ ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತಿಕ್ರಿಯೆಯಾಗಿ ಪ್ರಾರಂಭಿಸಲಾದ ಮಿಲಿಟರಿ ಕಾರ್ಯಾಚರಣೆಯಾದ ಆಪರೇಷನ್ ಸಿಂದೂರ್ ಅಡಿಯಲ್ಲಿ ಇತ್ತೀಚಿನ ಬೆಳವಣಿಗೆಗಳು ಬಗ್ಗೆ ಗಮನ ಸೆಳೆಯಲಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ತರೂರ್‌, “ಇತ್ತೀಚಿನ ಘಟನೆಗಳ ಕುರಿತು ನಮ್ಮ ದೇಶದ ದೃಷ್ಟಿಕೋನವನ್ನು ಪ್ರಸ್ತುತಪಡಿಸಲು, ಐದು ಪ್ರಮುಖ ರಾಜಧಾನಿಗಳಿಗೆ ಸರ್ವಪಕ್ಷ ನಿಯೋಗವನ್ನು ಮುನ್ನಡೆಸಲು ಭಾರತ ಸರ್ಕಾರದಿಂದ ಆಹ್ವಾನ ಬಂದಿರುವುದು ನನಗೆ ಗೌರವ ತಂದಿದೆ” ಎಂದಿದ್ದಾರೆ.

ಪಹಲ್ಗಾಮ್‌ ದಾಳಿಯ ಬಳಿಕ ತರೂರ್‌ ನೀಡುತ್ತಿರುವ ಹೇಳಿಕೆಯಿಂದ ಕಾಂಗ್ರೆಸ್‌ ಅಂತರ ಕಾಪಾಡಿಕೊಂಡು ಬರುತ್ತಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News