×
Ad

ಕಾನೂನು ಮಾನ್ಯ ಎಮ್‌ಎಸ್‌ಪಿ, ರೂ. 6,000 ಪಿಂಚಣಿ | ಹರ್ಯಾಣಕ್ಕೆ 7 ಗ್ಯಾರಂಟಿಗಳನ್ನು ಘೋಷಿಸಿದ ಕಾಂಗ್ರೆಸ್

Update: 2024-09-18 21:34 IST

PC ; PTI 

ಚಂಡೀಗಢ : ಹರ್ಯಾಣ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವಂತೆಯೇ, ಕಾಂಗ್ರೆಸ್ ಪಕ್ಷವು ಬುಧವಾರ ಕನಿಷ್ಠ ಬೆಂಬಲ ಬೆಲೆ (ಎಮ್‌ಎಸ್‌ಪಿ)ಗೆ ಕಾನೂನು ಮಾನ್ಯತೆ ಮತ್ತು ಜಾತಿ ಗಣತಿ ಸೇರಿದಂತೆ ಏಳು ಪ್ರಮುಖ ಗ್ಯಾರಂಟಿಗಳನ್ನು ಘೋಷಿಸಿದೆ.

ಪಕ್ಷವು ತನ್ನ ಸಾಮಾಜಿಕ ಭದ್ರತಾ ಯೋಜನೆಯ ಭಾಗವಾಗಿ, ಹಿರಿಯರು, ವಿಕಲಚೇತನರು ಮತ್ತು ವಿಧವೆಯರಿಗೆ 6,000 ರೂಪಾಯಿ ಮಾಸಿಕ ಪಿಂಚಣಿ ನೀಡುವ ಖಾತರಿಯನ್ನೂ ನೀಡಿದೆ. ಅದೂ ಅಲ್ಲದೆ, ಸರಕಾರಿ ಉದ್ಯೋಗಿಗಳನ್ನು ಆಕರ್ಷಿಸುವ ಕ್ರಮವಾಗಿ, ಹಳೆಯ ಪಿಂಚಣಿ ಯೋಜನೆಯನ್ನು ಮರುಸ್ಥಾಪಿಸುವುದಾಗಿಯೂ ಹೇಳಿದೆ.

ಜೊತೆಗೆ, ಮನೆಗಳಿಗೆ 300 ಯೂನಿಟ್‌ಗಳಷ್ಟು ಉಚಿತ ವಿದ್ಯುತ್ ಮತ್ತು 25 ಲಕ್ಷ ರೂಪಾಯಿವರೆಗಿನ ವೆಚ್ಚದ ಉಚಿತ ವೈದ್ಯಕೀಯ ಚಿಕಿತ್ಸೆ ನೀಡುವ ಖಾತರಿಯನ್ನೂ ಕಾಂಗ್ರೆಸ್ ನೀಡಿದೆ.

ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿ, ದೇಶಾದ್ಯಂತ ರೈತರ ದೀರ್ಘಕಾಲೀನ ಬೇಡಿಕೆಯಾಗಿರುವ ಕನಿಷ್ಠ ಬೆಂಬಲ ಬೆಲೆಯನ್ನು ಜಾರಿತೆ ತರುವ ದೊಡ್ಡ ಭರವಸೆಯನ್ನು ಕಾಂಗ್ರೆಸ್ ನೀಡಿದೆ. ಜಾತಿ ಸಮೀಕ್ಷೆ ನಡೆಸುವುದಾಗಿ ಮತ್ತು ಕೆನೆಪದರದ ಆದಾಯ ಮಿತಿಯನ್ನು 6 ಲಕ್ಷ ರೂ.ನಿಂದ 10 ಲಕ್ಷ ರೂ.ವರೆಗೆ ಹೆಚ್ಚಿಸುವುದಾಗಿಯೂ ಅದು ಹೇಳಿದೆ.

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್, ಹರ್ಯಾಣದ ಮಾಜಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡ, ಹರ್ಯಾಣ ಕಾಂಗ್ರೆಸ್ ಮುಖ್ಯಸ್ಥ ಉದಯ ಭಾನ್ ಮತ್ತು ಪಕ್ಷದ ಹಿರಿಯ ನಾಯಕರು ಚುನಾವಣಾ ಪ್ರಣಾಳಿಕೆ ಬಿಡುಗಡೆ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಮಾಧ್ಯಮವನ್ನು ಉದ್ದೇಶಿಸಿ ಮಾತನಾಡಿದ ಖರ್ಗೆ, ‘‘ಈ ಭರವಸೆಗಳನ್ನು ನಾವು ಜಾರಿಗೊಳಿಸುತ್ತೇವೆ, ಅದಕ್ಕಾಗಿಯೇ ನಾವು ಅದಕ್ಕೆ ‘ಸಾತ್ ವಾದೇ, ಪಕ್ಕೇ ಇರಾದೆ’ ಎಂಬ ಹೆಸರಿಟ್ಟಿದ್ದೇವೆ’’ ಎಂದು ಹೇಳಿದರು.

‘‘ಈ ಏಳು ಗ್ಯಾರಂಟಿಗಳಿಗೆ ಹೆಚ್ಚುವರಿಯಾಗಿ, ನಮ್ಮ 53 ಪುಟಗಳ ಪ್ರಣಾಳಿಕೆಯನ್ನು ಬಳಿಕ ಚಂಡೀಗಢದಲ್ಲಿ ವಿವರಿಸಲಾಗುವುದು’’ ಎಂದರು.

ಹರ್ಯಾಣದ 90 ಸದಸ್ಯ ಬಲದ ವಿಧಾನಸಭೆಗೆ ಅಕ್ಟೋಬರ್ 5ರಂದು ಮತದಾನ ನಡೆಯುವುದು. ಅಕ್ಟೋಬರ್ 8ರಂದು ಮತ ಎಣಿಕೆ ನಡೆಯಲಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News