×
Ad

ಕಾಂಗ್ರೆಸ್ ತೊರೆದ ಮಿಲಿಂದ್ ದಿಯೋರಾ; ಶಿಂಧೆ ನೇತೃತ್ವದ ಶಿವಸೇನೆ ಸೇರ್ಪಡೆಯಾಗುವ ಸಾಧ್ಯತೆ

Update: 2024-01-14 10:37 IST

ಮಿಲಿಂದ್ ದಿಯೋರಾ (PTI)

ಮುಂಬೈ: ಕಾಂಗ್ರೆಸ್ ಪಕ್ಷದ ನಾಯಕ ಹಾಗೂ ಮಾಜಿ ಕೇಂದ್ರ ಸಚಿವ ಮಿಲಿಂದ್ ದಿಯೋರಾ ತಾವು ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜಿನಾಮೆ ನೀಡಿರುವುದಾಗಿ ಪ್ರಕಟಿಸಿದ್ದಾರೆ.

ಈ ಕುರಿತು ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ದಕ್ಷಿಣ ಮುಂಬೈನ ಮಾಜಿ ಸಂಸದರೂ ಆದ ಮಿಲಿಂದ್ ದಿಯೋರಾ, “ನನ್ನ ರಾಜಕೀಯ ಜೀವನದ ಮಹತ್ವದ ಅಧ್ಯಾಯವೊಂದು ಇಂದು ಕೊನೆಯಾಗುತ್ತಿದೆ. ನಾನು ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ನನ್ನ ರಾಜಿನಾಮೆ ನೀಡಿದ್ದು, ಕಾಂಗ್ರೆಸ್ ಪಕ್ಷದೊಂದಿಗಿನ ನನ್ನ ಕುಟುಂಬದ 55 ವರ್ಷಗಳ ಸಂಬಂಧವನ್ನು ಅಂತ್ಯಗೊಳಿಸುತ್ತಿದ್ದೇನೆ. ಹಲವಾರು ವರ್ಷಗಳಿಂದ ನನಗೆ ಬೆಂಬಲ ನೀಡಿದ ಕಾಂಗ್ರೆಸ್ ಪಕ್ಷದ ಎಲ್ಲ ನಾಯಕರು, ಸಹದ್ಯೋಗಿಗಳು ಹಾಗೂ ಕಾರ್ಯಕರ್ತರಿಗೆ ನಾನು ಆಭಾರಿಯಾಗಿದ್ದೇನೆ” ಎಂದು ಬರೆದುಕೊಂಡಿದ್ದಾರೆ.

ಕಳೆದ ಹಲವು ದಿನಗಳಿಂದ ಮಿಲಿಂದ್ ದಿಯೋರಾ, ಏಕನಾಥ್ ಶಿಂದೆ ನೇತೃತ್ವದ ಶಿವಸೇನೆಯನ್ನು ಸೇರ್ಪಡೆಯಾಗಲಿದ್ದಾರೆ ಎಂಬ ವದಂತಿಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿವೆ.

ಇತ್ತೀಚೆಗೆ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಜಂಟಿ ಖಜಾಂಚಿಯಾಗಿ ನೇಮಕವಾಗಿದ್ದ ಮಿಲಿಂದ್ ದಿಯೋರಾ, ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ಬಣವು ದಕ್ಷಿಣ ಮುಂಬೈ ಲೋಕಸಭಾ ಕ್ಷೇತ್ರಕ್ಕೆ ತನ್ನ ಹಕ್ಕು ಪ್ರತಿಪಾದಿಸುತ್ತಿರುವುದರಿಂದ ಅಸಮಾಧಾನಗೊಂಡಿದ್ದರು.

ಇದೀಗ ಉದ್ಧವ್ ಠಾಕ್ರೆ ಬಣದಲ್ಲಿರುವ ಅರವಿಂದ್ ಸಾವಂತ್ 2014 ಹಾಗೂ 2019ರ ಸಾರ್ವತ್ರಿಕ ಚುನಾವಣೆಯಲ್ಲಿ ಮಿಲಿಂದ್ ದಿಯೋರಾ ಅವರನ್ನು ಪರಾಭವಗೊಳಿಸಿದ್ದರು.

ಮಿಲಿಂದ್ ದಿಯೋರಾ ಒಮ್ಮೆ ಮುಂಬೈ ಕಾಂಗ್ರೆಸ್ ಮುಖ್ಯಸ್ಥರೂ ಆಗಿದ್ದರು. ಅವರು ಕಾಂಗ್ರೆಸ್ ಪಕ್ಷದ ಗಣ್ಯ ನಾಯಕ ದಿವಂಗತ ಮುರಳಿ ದಿಯೋರಾ ಅವರ ಪುತ್ರರಾಗಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News