×
Ad

ಇಂಡಿಯಾ ಮೈತ್ರಿಕೂಟದ ಭವಿಷ್ಯದ ಬಗ್ಗೆ ಕಾಂಗ್ರೆಸ್ ಸ್ಪಷ್ಟಪಡಿಸಬೇಕು : ಸಂಜಯ್‌ ರಾವುತ್ ಆಗ್ರಹ

Update: 2025-01-10 19:31 IST

ಸಂಜಯ್‌ ರಾವುತ್ | PC ; PTI

ಹೊಸದಿಲ್ಲಿ : ಪ್ರತಿಪಕ್ಷ ಮೈತ್ರಿಕೂಟದಲ್ಲಿ ಸಮನ್ವಯದ ಕೊರತೆಯ ಬಗ್ಗೆ ಜಮ್ಮು ಕಾಶ್ಮೀರದ ಮುಖ್ಯಮಂತ್ರಿ ಉಮರ್ ಅಬ್ದುಲ್ಲಾ ಅವರ ಭಾವನೆಗಳನ್ನೇ ಶುಕ್ರವಾರ ಪ್ರತಿಧ್ವನಿಸಿದ ಶಿವಸೇನೆ(ಯುಬಿಟಿ) ನಾಯಕ ಸಂಜಯ್‌ ರಾವುತ್ ಅವರು,‘ಇಂಡಿಯಾ’ ಬಣದ ಕುರಿತು ಕಳವಳಗಳನ್ನು ವ್ಯಕ್ತಪಡಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ರಾವುತ್,‘ನಾವು ಒಟ್ಟಾಗಿ ಲೋಕಸಭಾ ಚುನಾವಣೆಯಲ್ಲಿ ಹೋರಾಡಿದ್ದೆವು ಮತ್ತು ಫಲಿತಾಂಶಗಳೂ ಸಹ ಉತ್ತಮವಾಗಿದ್ದವು. ಅದರ ಬಳಿಕ ಇಂಡಿಯಾ ಮೈತ್ರಿಕೂಟವನ್ನು ಜೀವಂತವಾಗಿರಿಸಲು ಒಟ್ಟಿಗೆ ಕುಳಿತು ಚರ್ಚಿಸಿ ಮುಂದಿನ ಮಾರ್ಗವನ್ನು ತೋರಿಸುವುದು ನಮ್ಮೆಲ್ಲರ, ವಿಶೇಷವಾಗಿ ದೊಡ್ಡ ಪಕ್ಷವಾಗಿರುವ ಕಾಂಗ್ರೆಸ್‌ನ ಜವಾಬ್ದಾರಿಯಾಗಿತ್ತು. ಆದರೆ ಲೋಕಸಭಾ ಚುನಾವಣೆಯ ಬಳಿಕ ಈವರೆಗೆ ಇಂತಹ ಒಂದೇ ಒಂದು ಸಭೆ ನಡೆದಿಲ್ಲ’ ಎಂದು ಹೇಳಿದರು.

ಇದು ಇಂಡಿಯಾ ಮೈತ್ರಿಕೂಟದ ಪಾಲಿಗೆ ಸರಿಯಲ್ಲ. ಇಂಡಿಯಾ ಮೈತ್ರಿಕೂಟ ಈಗ ಅಸ್ತಿತ್ವದಲ್ಲಿಲ್ಲ ಎಂದು ಉಮರ್ ಅಬ್ದುಲ್ಲಾ, ಮಮತಾ ಬ್ಯಾನರ್ಜಿ,ಅಖಿಲೇಶ್ ಯಾದವ್, ಅರವಿಂದ್ ಕೇಜ್ರಿವಾಲ್‌ರಂತಹ ನಾಯಕರು ಹೇಳುತ್ತಿದ್ದಾರೆ ಎಂದರು.

ಇಂಡಿಯಾ ಮೈತ್ರಿಕೂಟದ ಅಧೋಗತಿಗೆ ಕಾಂಗ್ರೆಸ್‌ನ್ನು ಹೊಣೆಯಾಗಿಸಿದ ರಾವುತ್, ಮೈತ್ರಿಕೂಟದಲ್ಲಿ ಸಮನ್ವಯ, ಚರ್ಚೆ ಮತ್ತು ಮಾತುಕತೆಗಳ ಕೊರತೆಯಿದೆ. ಪ್ರತಿಪಕ್ಷಗಳ ಮೈತ್ರಿಕೂಟದಲ್ಲಿ ಎಲ್ಲವೂ ಸರಿಯಿದೆಯೇ ಇಲ್ಲವೇ ಎಂಬ ಬಗ್ಗೆ ಜನರಲ್ಲಿ ಶಂಕೆಗಳಿವೆ. ಈ ಮೈತ್ರಿಕೂಟವು ಒಮ್ಮೆ ಒಡೆದರೆ ಇನ್ನೆಂದಿಗೂ ಇಂಡಿಯಾ ಬಣ ರಚನೆಯಾಗುವುದಿಲ್ಲ ಎಂದರು.

ಗುರುವಾರ ನ್ಯಾಷನಲ್ ಕಾನ್ಫರೆನ್ಸ್ ನಾಯಕ ಉಮರ್ ಅಬ್ದುಲ್ಲಾ ಅವರು ದಿಲ್ಲಿ ವಿಧಾನಸಭಾ ಚುನಾವಣೆಗೆ ಮುನ್ನ ಕಾಂಗ್ರೆಸ್ ಮತ್ತು ಆಪ್ ನಡುವಿನ ಜಟಾಪಟಿಯನ್ನು ಉಲ್ಲೇಖಿಸಿ ಪ್ರತಿಪಕ್ಷ ಮೈತ್ರಿಕೂಟದ ಕುರಿತು ಸ್ಪಷ್ಟನೆಗಾಗಿ ಕರೆ ನೀಡಿದ್ದರು. ಇಂಡಿಯಾ ಮೈತ್ರಿಕೂಟವನ್ನು ಲೋಕಸಭಾ ಚುನಾವಣೆಗಾಗಿ ಮಾತ್ರ ರಚಿಸಲಾಗಿದ್ದರೆ ಅದನ್ನು ವಿಸರ್ಜಿಸಬೇಕು ಮತ್ತು ಪ್ರತಿಪಕ್ಷಗಳು ಪ್ರತ್ಯೇಕವಾಗಿ ಕೆಲಸಗಳನ್ನು ಆರಂಭಿಸಬೇಕು ಎಂದು ಹೇಳಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News