ಸಂವಿಧಾನವನ್ನು ದುರ್ಬಲಗೊಳಿಸುವ ಯಾವುದೇ ಪ್ರಯತ್ನವನ್ನು ಬಲವಾಗಿ ವಿರೋಧಿಸುತ್ತೇವೆ : ಕಾಂಗ್ರೆಸ್
PC: PTI
ಹೊಸದಿಲ್ಲಿ: ಸಂವಿಧಾನದ ಪೀಠಿಕೆಯಿಂದ 'ಸಮಾಜವಾದಿ', 'ಜಾತ್ಯತೀತ' ಪದಗಳನ್ನು ಕೈಬಿಡುವಂತೆ ಆಗ್ರಹಿಸಿದ ಆರೆಸ್ಸೆಸ್ ವಿರುದ್ಧ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ. ಆರೆಸ್ಸೆಸ್, ಬಿಜೆಪಿ ಸಂವಿಧಾನ ವಿರೋಧಿ, ಸಂವಿಧಾನವನ್ನು ದುರ್ಬಲಗೊಳಿಸುವ ಯಾವುದೇ ಕ್ರಮವನ್ನು ಬಲವಾಗಿ ವಿರೋಧಿಸುವುದಾಗಿ ಹೇಳಿದೆ.
ದಿಲ್ಲಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರೆಸ್ಸೆಸ್) ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಸಂವಿಧಾನದ ಪೀಠಿಕೆಯಲ್ಲಿರುವ "ಸಮಾಜವಾದಿ" ಮತ್ತು "ಜಾತ್ಯತೀತ" ಪದಗಳನ್ನು ಕೈಬಿಡಬೇಕು ಎಂದು ಹೇಳಿದ್ದರು.
ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್, ಬಿಜೆಪಿ-ಆರೆಸ್ಸೆಸ್ ಪಿತೂರಿ ಯಶಸ್ವಿಯಾಗಲು ಎಂದಿಗೂ ಬಿಡುವುದಿಲ್ಲ. ಅಂತಹ ಯಾವುದೇ ಕ್ರಮವನ್ನು ಕಾಂಗ್ರೆಸ್ ವಿರೋಧಿಸುತ್ತದೆ ಎಂದು ಹೇಳಿದೆ.
ʼಆರೆಸ್ಸೆಸ್-ಬಿಜೆಪಿಯ ಚಿಂತನೆ ಸಂವಿಧಾನ ವಿರೋಧಿಯಾಗಿದೆ. ಈಗ ಆರೆಸ್ಸೆಸ್ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಸಂವಿಧಾನದ ಪೀಠಿಕೆಯಲ್ಲಿ ಬದಲಾವಣೆ ತರಬೇಕು, 'ಸಮಾಜವಾದಿ' ಮತ್ತು 'ಜಾತ್ಯತೀತ' ಪದಗಳನ್ನು ತೆಗೆದುಹಾಕಬೇಕು ಎಂದು ಹೇಳುತ್ತಾರೆ. ಇದು ಆರೆಸ್ಸೆಸ್-ಬಿಜೆಪಿ ಯಾವಾಗಲೂ ರೂಪಿಸುತ್ತಿರುವ ಬಾಬಾ ಸಾಹೇಬ್ ಅವರ ಸಂವಿಧಾನವನ್ನು ಅಳಿಸುವ ಪಿತೂರಿಯಾಗಿದೆ. ಸಂವಿಧಾನ ಜಾರಿಗೆ ತಂದಾಗ, ಆರೆಸ್ಸೆಸ್ ಅದನ್ನು ವಿರೋಧಿಸಿತ್ತು, ಸಂವಿಧಾನವನ್ನು ಸುಟ್ಟುಹಾಕಿತ್ತು. ಲೋಕಸಭಾ ಚುನಾವಣೆಯಲ್ಲಿ ಸಂವಿಧಾನವನ್ನು ಬದಲಾಯಿಸಲು ನಮಗೆ ಸಂಸತ್ತಿನಲ್ಲಿ 400ಕ್ಕೂ ಹೆಚ್ಚು ಸ್ಥಾನಗಳು ಬೇಕು ಎಂದು ಬಿಜೆಪಿ ನಾಯಕರು ಬಹಿರಂಗವಾಗಿ ಹೇಳುತ್ತಿದ್ದರು. ಕೊನೆಗೂ, ಜನ ಅವರಿಗೆ ಪಾಠ ಕಲಿಸಿದರು. ಈಗ ಮತ್ತೊಮ್ಮೆ ಅವರು ಪಿತೂರಿಯಲ್ಲಿ ತೊಡಗಿದ್ದಾರೆ. ಆದರೆ, ಕಾಂಗ್ರೆಸ್ ಯಾವುದೇ ಬೆಲೆ ತೆತ್ತಾದರೂ ಅವರ ಉದ್ದೇಶಗಳನ್ನು ಯಶಸ್ವಿಯಾಗಲು ಬಿಡುವುದಿಲ್ಲʼ ಎಂದು ಹೇಳಿದೆ.