ಹಠಮಾರಿ ದೋರಣೆ ಬಿಟ್ಟು ಸಂಸತ್ತಿನ ವಿಶೇಷ ಅಧಿವೇಶನ ಕರೆಯಿರಿ: ಪ್ರಧಾನಿಗೆ ಕಾಂಗ್ರೆಸ್ ಆಗ್ರಹ
ಪ್ರಧಾನಿ ನರೇಂದ್ರ ಮೋದಿ, ಜೈರಾಮ್ ರಮೇಶ್ | PTI
ಹೊಸದಿಲ್ಲಿ: ಭಾರತ ಮತ್ತು ಪಾಕಿಸ್ತಾನವನ್ನು ಅಮೆರಿಕ ಒಂದೇ ತಟ್ಟೆಯಲ್ಲಿಟ್ಟು ಅಳೆದಿದೆ ಎಂದು ಆರೋಪಿಸಿರುವ ಕಾಂಗ್ರೆಸ್, ಪಹಲ್ಗಾಮ್ ದಾಳಿ ಹಾಗೂ ನಂತರದ 'ಆಪರೇಷನ್ ಸಿಂಧೂರ್' ಕಾರ್ಯಾಚರಣೆ ಕುರಿತು ಚರ್ಚಿಸಲು ಸರ್ವಪಕ್ಷಗಳ ಸಭೆ ಹಾಗೂ ಸಂಸತ್ತಿನ ವಿಶೇಷ ಅಧಿವೇಶನ ಕರೆಯಿರಿ ಎಂದು ಪ್ರಧಾನಿ ನರೇಂದ್ರ ಮೋದಿಯನ್ನು ಆಗ್ರಹಿಸಿದೆ.
ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಮ್ ರಮೇಶ್, "ಅಮೆರಿಕದ ಸೇನಾ ದಿನಾಚರಣೆಯ ಹಿನ್ನೆಲೆಯಲ್ಲಿ ಜೂನ್ 14ರಂದು ವಾಷಿಂಗ್ಟನ್ ಡಿಸಿಯಲ್ಲಿ ಆಯೋಜಿಸಲಾಗಿರುವ ಕಾರ್ಯಕ್ರಮಕ್ಕೆ ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್ ಅಸೀಂ ಮುನೀರ್ ಅವರನ್ನು ಆಮಂತ್ರಿಸಲಾಗಿದೆ ಎಂದು ವರದಿಯಾಗಿದೆ. ಈ ಸುದ್ದಿ ರಾಜತಾಂತ್ರಿಕ ಹಾಗೂ ಕಾರ್ಯತಂತ್ರದ ದೃಷ್ಟಿಯಿಂದ ಭಾರತಕ್ಕಾಗಿರುವ ಬಹು ದೊಡ್ಡ ಹಿನ್ನೆಯಾಗಿದೆ" ಎಂದು ಟೀಕಿಸಿದ್ದಾರೆ.
"ಇತ್ತೀಚೆಗೆ ಅಮೆರಿಕದ ಸೆಂಟ್ರಲ್ ಕಮಾಂಡ್ ಮುಖ್ಯಸ್ಥರು, 'ಭಯೋತ್ಪಾದನೆ ವಿರುದ್ಧದ ಜಾಗತಿಕ ಹೋರಾಟದಲ್ಲಿ ಪಾಕಿಸ್ತಾನ ಪ್ರಮುಖ ಪಾತ್ರ ವಹಿಸುತ್ತಿದೆ' ಎಂದು ಹೇಳಿದ್ದಾರೆ. ಟ್ರಂಪ್ ಸರಕಾರ ನಿರಂತರವಾಗಿ ಇಂತಹ ಹೇಳಿಕೆಗಳನ್ನು ನೀಡುತ್ತಿದ್ದು, ಅಮೆರಿಕ ಉಭಯ ದೇಶಗಳನ್ನೂ ಓಲೈಸುವ ಕೆಲಸದಲ್ಲಿ ನಿರತವಾಗಿದೆ ಎಂದು ಇದರಿಂದ ಅರ್ಥೈಸಬಹುದಾಗಿದೆ" ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮೋದಿ ಸರಕಾರ 'ಆಪರೇಷನ್ ಸಿಂಧೂರ್' ಕಾರ್ಯಾಚರಣೆ ಇನ್ನೂ ಮುಂದುವರಿದಿದೆ ಎಂದು ಹೇಳುತ್ತಿದೆ. ಇಂತಹ ಹೊತ್ತಿನಲ್ಲಿ ಪಾಕಿಸ್ತಾನದ ಸೇನಾ ಮುಖ್ಯಸ್ಥರು ಅಮೆರಿಕ ಸೇನಾ ದಿನದಂದು ಅತಿಥಿಯಾಗಿ ಭಾಗವಹಿಸುತ್ತಿರುವುದು ಕಳವಳಕಾರಿ ಬೆಳವಣಿಗೆಯಾಗಿದೆ ಎಂದೂ ಅವರು ಆತಂಕ ವ್ಯಕ್ತಪಡಿಸಿದ್ದಾರೆ.
'ಆಪರೇಷನ್ ಸಿಂಧೂರ್' ಕಾರ್ಯಾಚರಣೆ ಹಾಗೂ ಭಯೋತ್ಪಾದನೆ ಕುರಿತ ಭಾರತದ ನಿಲುವನ್ನು ಜಾಗತಿಕ ಸಮುದಾಯಗಳಿಗೆ ಮನವರಿಕೆ ಮಾಡಿಕೊಡಲು ಅಮೆರಿಕ ಸೇರಿದಂತ ವಿವಿಧ ದೇಶಗಳಿಗೆ ಪ್ರವಾಸ ತೆರಳಿದ್ದ ಸರ್ವಪಕ್ಷಗಳ ನಿಯೋಗಗಳ ಸದಸ್ಯರನ್ನು ಪ್ರಧಾನಿ ಮೋದಿ ಸ್ವಾಗತಿಸುತ್ತಿರುವ ಹೊತ್ತಿನಲ್ಲೇ ಅಮೆರಿಕದಿಂದ ಇಂತಹ ಹೇಳಿಕೆಗಳು ಹೊರ ಬೀಳುತ್ತಿವೆ. ಇದು ಭಾರತದ ರಾಜತಾಂತ್ರಿಕ ನಿಲುವನ್ನು ಮತ್ತಷ್ಟು ಇಕ್ಕಟ್ಟಿಗೆ ಸಿಲುಕಿಸಲಿದೆ ಎಂದು ಅವರು ಎಚ್ಚರಿಸಿದ್ದಾರೆ.