"ತನಿಖೆಗೆ ಸಂಪೂರ್ಣ ಸಹಕಾರ ನೀಡುತ್ತೇವೆ": ಏರ್ ಇಂಡಿಯಾ ವಿಮಾನ ದುರಂತ ಕುರಿತ ಎಎಐಬಿ ವರದಿ ಬೆನ್ನಲ್ಲೇ ಬೋಯಿಂಗ್ ಸಂಸ್ಥೆ ಮೊದಲ ಪ್ರತಿಕ್ರಿಯೆ
Photo credit: PTI
ಹೊಸದಿಲ್ಲಿ : ಏರ್ ಇಂಡಿಯಾ ವಿಮಾನ ದುರಂತದ ಕುರಿತು ʼವಿಮಾನ ಅಪಘಾತ ತನಿಖಾ ಬ್ಯೂರೋʼ (AAIB) ಪ್ರಾಥಮಿಕ ವರದಿಯನ್ನು ಬಿಡುಗಡೆ ಮಾಡಿದ ನಂತರ ವಿಮಾನ ತಯಾರಿಕಾ ಸಂಸ್ಥೆ ಬೋಯಿಂಗ್ ಮೊದಲ ಹೇಳಿಕೆಯನ್ನು ಬಿಡುಗಡೆ ಮಾಡಿದೆ.
ʼಏರ್ ಇಂಡಿಯಾ ವಿಮಾನ ದುರಂತದಲ್ಲಿ ಮೃತ ಪ್ರಯಾಣಿಕರ, ಸಿಬ್ಬಂದಿಗಳ ಪ್ರೀತಿಪಾತ್ರರು ಮತ್ತು ಅಹ್ಮದಾಬಾದ್‌ನಲ್ಲಿ ನಡೆದ ಈ ಘಟನೆಯಿಂದ ಪರಿಣಾಮ ಬೀರಿರುವ ಎಲ್ಲರ ಜೊತೆಗೆ ನಾವಿದ್ದೇವೆ. ತನಿಖೆಗೆ ಸಹಕಾರವನ್ನು ನೀಡುತ್ತೇವೆ ಮತ್ತು ನಮ್ಮ ಗ್ರಾಹಕರಿಗೆ ನಾವು ಬೆಂಬಲಿಸುತ್ತೇವೆʼ ಎಂದು ಬೋಯಿಂಗ್ ಸಂಸ್ಥೆ ತಿಳಿಸಿದೆ.
ಈ ಕುರಿತು ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿರುವ ಬೋಯಿಂಗ್ ಮುಖ್ಯಸ್ಥ ಕೆಲ್ಲಿ ಆರ್ಟ್‌ಬರ್ಗ್, ತನಿಖೆಗೆ ಸಂಪೂರ್ಣವಾಗಿ ಸಹಕಾರ ನೀಡುತ್ತೇವೆ. ವಿಮಾನ ದುರಂತದಲ್ಲಿ ಪ್ರೀತಿ ಪಾತ್ರರನ್ನು ಕಳೆದುಕೊಂಡ ಕುಟುಂಬದವರೊಂದಿಗೆ ನಾವಿದ್ದೇವೆ. ಏರ್ ಇಂಡಿಯಾ ಮುಖ್ಯಸ್ಥ ಎನ್. ಚಂದ್ರಶೇಖರನ್ ಅವರೊಂದಿಗೆ ಮಾತುಕತೆ ನಡೆಸಿ ಸಂಪೂರ್ಣ ಬೆಂಬಲ ನೀಡುವುದಾಗಿ ತಿಳಿಸಿದ್ದೇವೆ ಎಂದು ಹೇಳಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಏರ್ ಇಂಡಿಯಾ, AAIB ಬಿಡುಗಡೆ ಮಾಡಿದ ಪ್ರಾಥಮಿಕ ವರದಿಯನ್ನು ನಾವು ಸ್ವೀಕರಿಸುತ್ತೇವೆ. AAIB ಮತ್ತು ಇತರ ಅಧಿಕಾರಿಗಳೊಂದಿಗೆ ತನಿಖೆಗೆ ಸಂಪೂರ್ಣವಾಗಿ ಸಹಕರಿಸುವುದನ್ನು ಮುಂದುವರಿಸುತ್ತೇವೆ ಎಂದು ಹೇಳಿದೆ.