ಛತ್ತೀಸ್ ಗಢ|ನಕ್ಸಲೀಯರು ಹುದುಗಿಸಿದ್ದ ಐಇಡಿ ಸ್ಫೋಟ: ಓರ್ವ ಪೊಲೀಸ್ ಮೃತ್ಯು, ಮೂವರಿಗೆ ಗಾಯ
Update: 2025-08-18 11:29 IST
ಸಾಂದರ್ಭಿಕ ಚಿತ್ರ (PTI)
ಬಿಜಾಪುರ್: ನಕ್ಸಲೀಯರು ನೆಲದಡಿಯಲ್ಲಿ ಹುದುಗಿಸಿದ್ದ ಸುಧಾರಿತ ಸ್ಫೋಟಕ ಸಾಧನ ಸ್ಫೋಟಗೊಂಡು ಛತ್ತೀಸ್ ಗಢ ಜಿಲ್ಲಾ ಮೀಸಲು ಪಡೆಯ ಓರ್ವ ಯೋಧ ಮೃತಪಟ್ಟು, ಮೂವರು ಪೊಲೀಸ್ ಸಿಬ್ಬಂದಿಗಳು ಗಾಯಗೊಂಡಿರುವ ಘಟನೆ ಸೋಮವಾರ ಬಿಜಾಪುರ್ ಜಿಲ್ಲೆಯಲ್ಲಿ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇಂದು ಬೆಳಗ್ಗೆ ನಕ್ಸಲ್ ನಿಗ್ರಹ ಕಾರ್ಯಾಚರಣೆಗೆಂದು ಛತ್ತೀಸ್ ಗಢ ಪೊಲೀಸ್ ಇಲಾಖೆಯ ಜಿಲ್ಲಾ ಮೀಸಲು ಪಡೆಯ ಸಿಬ್ಬಂದಿಗಳು ಇಂದ್ರಾವತಿ ರಾಷ್ಟ್ರೀಯ ಉದ್ಯಾನವನಕ್ಕೆ ತೆರಳಿದ್ದಾಗ ಈ ಸ್ಫೋಟ ಸಂಭವಿಸಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಮೃತ ಯೋಧನನ್ನು ಜಿಲ್ಲಾ ಮೀಸಲು ಪಡೆಯ ದಿನೇಶ್ ನಾಗ್ ಎಂದು ಗುರುತಿಸಲಾಗಿದ್ದು, ಉಳಿದ ಮೂವರು ಸಿಬ್ಬಂದಿಗಳಿಗೆ ಗಾಯವಾಗಿದೆ ಎಂದು ಅವರು ತಿಳಿಸಿದ್ದಾರೆ. ಗಾಯಗೊಂಡ ಸಿಬ್ಬಂದಿಗಳಿಗೆ ಪ್ರಾಥಮಿಕ ಚಿಕಿತ್ಸೆ ನೀಡಿದ ನಂತರ, ಅವರನ್ನು ಕಾಡಿನಿಂದ ಸ್ಥಳಾಂತರಿಸಲಾಗಿದೆ ಎಂದು ಅವರು ಹೇಳಿದ್ದಾರೆ.