ಕಾಶ್ಮೀರ: ಭಯೋತ್ಪಾದಕರ ಗುಂಡಿಗೆ ಪೋಲಿಸ್ ಬಲಿ; ಮೂರು ದಿನಗಳಲ್ಲಿ ಮೂರನೇ ಉದ್ದೇಶಿತ ಹತ್ಯೆ
ಸಾಂದರ್ಭಿಕ ಚಿತ್ರ | Photo: PTI
ಶ್ರೀನಗರ: ಜಮ್ಮು-ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಕರಲ್ಪೋರ ಗ್ರಾಮದಲ್ಲಿ ಮಂಗಳವಾರ ಪೋಲಿಸ್ ಕಾನ್ಸ್ಟೇಬಲ್ ಓರ್ವರನ್ನು ಭಯೋತ್ಪಾದಕರು ಅವರ ಮನೆಯಲ್ಲಿಯೇ ಗುಂಡಿಟ್ಟು ಕೊಂದಿದ್ದಾರೆ. ಇದು ಕಳೆದ ಮೂರು ದಿನಗಳಲ್ಲಿ ಕಾಶ್ಮೀರ ಕಣಿವೆಯಲ್ಲಿ ನಡೆದ ಮೂರನೇ ಉದ್ದೇಶಿತ ಹತ್ಯೆಯಾಗಿದೆ.
ತೀವ್ರವಾಗಿ ಗಾಯಗೊಂಡಿದ್ದ ಗುಲಾಂ ಮುಹಮ್ಮದ್ ದಾರ್ ಅವರನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲಾಗಿತ್ತಾದರೂ ದಾರಿಮಧ್ಯೆಯೇ ಕೊನೆಯುಸಿರೆಳೆದರು.
ಪ್ರದೇಶವನ್ನು ನಿರ್ಬಂಧಿಸಲಾಗಿದ್ದು, ಭಯೋತ್ಪಾದಕರಿಗಾಗಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ಜಮ್ಮು-ಕಾಶ್ಮೀರ ಪೋಲಿಸರು ತಿಳಿಸಿದರು.
ರವಿವಾರ ಶ್ರೀನಗರದಲ್ಲಿ ಕ್ರಿಕೆಟ್ ಆಡುತ್ತಿದ್ದ ಪೊಲೀಸ್ ಅಧಿಕಾರಿ ಮಸ್ರೂರ್ ಅಹ್ಮದ್ ವಾನಿ ಅವರನ್ನು ಗುಂಡಿಟ್ಟು ಹತ್ಯೆ ಮಾಡಲಾಗಿದ್ದರೆ, ಸೋಮವಾರ ಪುಲ್ವಾಮಾದಲ್ಲಿ ವಲಸೆ ಕಾರ್ಮಿಕನೋರ್ವ ಉಗ್ರರ ಗುಂಡಿಗೆ ಬಲಿಯಾಗಿದ್ದ.