ನರೇಗಾ ಯೋಜನೆ ನಿಧಿ ದುರ್ಬಳಕೆ ಹಗರಣ: ಗುಜರಾತ್ ಸಚಿವರ ಮತ್ತೋರ್ವ ಪುತ್ರನ ಬಂಧನ
ಬಚ್ಚುಭಾಯಿ ಖಬಾಡ್ (Photo: X.com/@bachubhaikhabad)
ಹೊಸದಿಲ್ಲಿ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಲ್ಲಿ (MGNREGS) ನಡೆದಿದೆಯೆನ್ನಲಾದ 71 ಕೋಟಿ ರೂ. ಮೊತ್ತದ ನಿಧಿ ದುರ್ಬಳಕೆ ಹಗರಣದ ಸಂಬಂಧ ಗುಜರಾತ್ ಸಚಿವ ಬಚ್ಚುಭಾಯಿ ಖಬಾಡ್ ರ ಹಿರಿಯ ಪುತ್ರ ಬಲ್ವಂತ್ ಬಂಧನವಾದ ಕೆಲವೇ ದಿನಗಳ ಅಂತರದಲ್ಲಿ, ಗುಜರಾತ್ ಪೊಲೀಸರು ಅವರ ಎರಡನೆ ಪುತ್ರ ಕಿರಣ್ ನನ್ನು ಇದೇ ಪ್ರಕರಣದಲ್ಲಿ ಸೋಮವಾರ ಬಂಧಿಸಿದ್ದಾರೆ ಎಂದು ವರದಿಯಾಗಿದೆ.
“ಸೋಮವಾರ ಸಚಿವ ಬಚ್ಚುಭಾಯಿ ಖಬಾಡ್ ರ ಕಿರಿಯ ಪುತ್ರ ಹಾಗೂ ಮಾಜಿ ತಾಲ್ಲೂಕು ಅಭಿವೃದ್ಧಿ ಅಧಿಕಾರಿ ಕಿರಣ್ ಹಾಗೂ ಇಬ್ಬರು ಸಹಾಯಕ ಯೋಜನಾಧಿಕಾರಿಗಳನ್ನು ಪೊಲೀಸರು ಬಂಧಿಸಿದ್ದಾರೆ” ಎಂದು PTI ಸುದ್ದಿ ಸಂಸ್ಥೆ ವರದಿ ಮಾಡಿದೆ.
ಆರೋಪಿಗಳು ಯೋಜನೆಯೊಂದರ ವಂಚನೆಯಲ್ಲಿ ಭಾಗಿಯಾಗಿದ್ದು, ವಿವಿಧ ಗುತ್ತಿಗೆ ಸಂಸ್ಥೆಗಳು ತಮಗೆ ವಹಿಸಲಾಗಿದ್ದ ಕಾಮಗಾರಿಗಳು ಪೂರ್ಣಗೊಳಿಸದಿದ್ದರೂ ಅಥವಾ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಪೂರೈಸಬೇಕಿದ್ದ ಅಗತ್ಯ ವಸ್ತುಗಳನ್ನು ಪೂರೈಸದಿದ್ದರೂ, ಸರಕಾರದಿಂದ ಹಣ ಸ್ವೀಕರಿಸಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಲ್ವಂತ್ ಹಾಗೂ ಕಿರಣ್, ಗುಜರಾತ್ ನಲ್ಲಿ ನಡೆಯುತ್ತಿರುವ ನರೇಗಾ ಯೋಜನೆಯಡಿಯ ಕಾಮಗಾರಿಗಳಲ್ಲಿ ನಡೆದಿರುವ ಹಗರಣದಲ್ಲಿ ಆರೋಪಕ್ಕೀಡಾಗಿರುವ ಇಂತಹ ಸಂಸ್ಥೆಗಳ ಮಾಲಕರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಹಗರಣದಲ್ಲಿ ಬಂಧನಕ್ಕೊಳಗಾಗಿರುವ ಈ ಇಬ್ಬರೂ ಆರೋಪಿಗಳು ಗುಜರಾತ್ ಪಂಚಾಯತ್ ಮತ್ತು ಕೃಷಿ ಸಚಿವ ಬಚ್ಚುಭಾಯಿ ಖಬಾಡ್ ರ ಪುತ್ರರಾಗಿದ್ದಾರೆ.
ಮೂಲಸೌಕರ್ಯ ಯೋಜನೆಗಳಾದ ರಸ್ತೆಗಳು, ತೆರೆದ ಬಾವಿಗಳು ಹಾಗೂ ಕಲ್ಲಿನ ತಡೆಗೋಡೆಗಳ ನಿರ್ಮಾಣಕ್ಕೆಂದು ಹಣ ಪಾವತಿಯಾಗಿದ್ದರೂ, ಜಿಲ್ಲಾ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಅಧಿಕಾರಿಗಳ ಕ್ಷೇತ್ರ ಪರಿಶೀಲನೆಯ ವೇಳೆ ಇವ್ಯಾವುವೂ ವಾಸ್ತವವಾಗಿ ನಿರ್ಮಾಣವಾಗದೆ ಇರುವುದು ಕಂಡು ಬಂದ ನಂತರ, ತನಿಖೆಯನ್ನು ಕೈಗೆತ್ತಿಕೊಳ್ಳಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.
ಇದರೊಂದಿಗೆ, ಈ ಸಂಸ್ಥೆಗಳು ಸರಕಾರಿ ಗುತ್ತಿಗೆಗಳನ್ನು ಪಡೆಯಲು ಅರ್ಹವಾಗಿರಲಿಲ್ಲ ಹಾಗೂ ಅಧಿಕೃತ ಟೆಂಡರ್ ಪ್ರಕ್ರಿಯೆಯಲ್ಲಿ ಈ ಸಂಸ್ಥೆಗಳು ಭಾಗಿಯಾಗಿರದಿದ್ದರೂ, ಇವುಗಳಿಗೆ ಹಣ ಪಾವತಿ ಮಾಡಿರುವುದು ಪತ್ತೆಯಾಗಿದೆ ಎಂದೂ ಹೇಳಲಾಗಿದೆ.
ಇದಕ್ಕೂ ಮುನ್ನ, ಬಲ್ವಂತ್ ನನ್ನು ದಹೋಡ್ ನಲ್ಲಿ ಪೊಲೀಸರು ಸೆರೆ ಹಿಡಿದಿದ್ದರು. ಪೊಲೀಸರ ಪ್ರಕಾರ, ವಿವಿಧ ಕಾಮಗಾರಿಗಳನ್ನು ಗುತ್ತಿಗೆ ಪಡೆದಿದ್ದ ಸಂಸ್ಥೆಗಳು ತಮ್ಮ ಯೋಜನೆಗಳನ್ನು ಸಂಪೂರ್ಣಗೊಳಿಸದಿದ್ದರೂ, ಸರಕಾರದಿಂದ ಹಣ ಸ್ವೀಕರಿಸಿದ್ದು, ಇದಕ್ಕಾಗಿ ಈ ಸಂಸ್ಥೆಗಳು ನಕಲಿ ಬಿಲ್ ಗಳನ್ನು ಸರಕಾರಕ್ಕೆ ಸಲ್ಲಿಸಿವೆ ಎಂದು ಹೇಳಲಾಗಿದೆ.
ಈ ಸಂಸ್ಥೆಗಳ ಮಾಲಕರ ಪೈಕಿ ಬಲ್ವಂತ್ ಕೂಡಾ ಒಬ್ಬನಾಗಿದ್ದು, ಆದಿವಾಸಿಗಳ ಪ್ರಾಬಲ್ಯ ಹೊಂದಿರುವ ದಹೋಡ್ ಜಿಲ್ಲೆಯಡಿಯ ದೇವಭಾಗ್ ಬರಿಯಾ ಹಾಗೂ ಧನಪುರ್ ತಾಲೂಕುಗಳಲ್ಲಿ ಅಕ್ರಮವೆಸಗಿದ ಆರೋಪ ಎದುರಿಸುತ್ತಿದ್ದಾನೆ.