×
Ad

20 ಮಕ್ಕಳು ಮೃತಪಟ್ಟ ಬಳಿಕ ಎಚ್ಚೆತ್ತ ಕೇಂದ್ರ ಸರಕಾರ : ಕೋಲ್ಡ್ರಿಫ್ ಸೇರಿದಂತೆ ಮೂರು ಕೆಮ್ಮಿನ ಸಿರಪ್‌ಗಳಿಗೆ ನಿಷೇಧ

Update: 2025-10-09 19:43 IST

Photo Credit: ANI

ಚೆನ್ನೈ,ಅ.9: ಕಳೆದೊಂದು ತಿಂಗಳಲ್ಲಿ ಕೆಮ್ಮಿನ ಸಿರಪ್ ಸೇವನೆಯಿಂದ 20 ಮಕ್ಕಳು ಮೃತಪಟ್ಟ ಬಳಿಕ ಇದೀಗ ಕೇಂದ್ರ ಸರಕಾರವು ಕೋಲ್ಡ್ರಿಫ್, ರೆಸ್ಪಿಫ್ರೆಷ್ ಟಿಆರ್ ಮತ್ತು ರಿಲೈಫ್ ಸೇರಿದಂತೆ ಮೂರು ಕೆಮ್ಮಿನ ಸಿರಪ್‌ಗಳನ್ನು ನಿಷೇಧಿಸಿದೆ.

ಈ ಎಲ್ಲಾ ಮಕ್ಕಳ ಸಾವುಗಳು ಕೋಲ್ಡ್ರಿಫ್ ಸಿರಪ್ ಸೇವನೆಯೊಂದಿಗೆ ತಳುಕು ಹಾಕಿಕೊಂಡಿವೆ ಎಂದು ಔಷಧಿ ನಿಯಂತ್ರಕ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿಗಳು ಗುರುವಾರ ತಿಳಿಸಿವೆ.

ಕೋಲ್ಡ್ರಿಫ್ ಆ್ಯಂಟಿಫ್ರೀಝ್‌ನಂತಹ ಕೈಗಾರಿಕಾ ಉತ್ಪನ್ನಗಳಲ್ಲಿ ಬಳಕೆಯಾಗುವ ಡೈಎಥಿಲೀನ್ ಗ್ಲೈಕಾಲ್‌ನ್ನು(ಡಿಇಜಿ) ಅತ್ಯಂತ ಅಪಾಯಕಾರಿ ಮಟ್ಟದಲ್ಲಿ ಒಳಗೊಂಡಿದೆ ಎನ್ನುವುದನ್ನು ಸರಕಾರಿ ಪ್ರಯೋಗಾಲಯಗಳ ಪರೀಕ್ಷೆಗಳು ತೋರಿಸಿವೆ. ಸಣ್ಣ ಪ್ರಮಾಣದಲ್ಲಿ ಡಿಇಜಿ ಸೇವನೆಯು ಸಹ ಮೂತ್ರಪಿಂಡಗಳು ಮತ್ತು ಯಕೃತ್ತಿಗೆ ಹಾನಿಯನ್ನುಂಟುಮಾಡುತ್ತದೆ ಹಾಗೂ ಗಂಭೀರ ಪ್ರಕರಣಗಳಲ್ಲಿ ಸಾವಿಗೆ ಕಾರಣವಾಗುತ್ತದೆ.

ನಿಷೇಧಿತ ಮೂರು ಸಿರಪ್‌ಗಳಲ್ಲಿ ಯಾವುದನ್ನೂ ರಫ್ತು ಮಾಡಲಾಗಿಲ್ಲ. ಹೀಗಾಗಿ ಸಮಸ್ಯೆಯು ಭಾರತಕ್ಕಷ್ಟೇ ಸೀಮಿತವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಆದಾಗ್ಯೂ, ವಿಶ್ವ ಆರೋಗ್ಯ ಸಂಸ್ಥೆಯು(ಡಬ್ಲ್ಯುಎಚ್‌ಒ) ನಕಲಿ ಅಥವಾ ಅನಿಯಂತ್ರಿತ ಸಿರಪ್‌ಗಳು ಕಾನೂನುಬಾಹಿರ ಅಥವಾ ಅನೌಪಚಾರಿಕ ಮಾರಾಟದ ಮೂಲಕ ಈಗಲೂ ಹರಡಬಹುದು ಎಂದು ಎಚ್ಚರಿಕೆ ನೀಡಿದೆ. ಈ ಸಿರಪ್‌ಗಳ ಬಳಕೆಯನ್ನು ತಪ್ಪಿಸುವಂತೆ ಮತ್ತು ಯಾವುದೇ ಅಡ್ಡ ಪರಿಣಾಮಗಳನ್ನು ತಕ್ಷಣ ವರದಿ ಮಾಡುವಂತೆ ಅದು ಜನರನ್ನು ಆಗ್ರಹಿಸಿದೆ.

ನಿಷೇಧಿತ ಕೆಮ್ಮಿನ ಸಿರಪ್‌ಗಳನ್ನು ತಯಾರಿಸಿದ್ದ ಘಟಕಗಳಲ್ಲಿ ಉತ್ಪಾದನೆಯನ್ನು ನಿಲ್ಲಿಸಿರುವ ಕೇಂದ್ರೀಯ ಔಷಧಿ ಗುಣಮಟ್ಟ ನಿಯಂತ್ರಣ ಸಂಸ್ಥೆಯು(ಸಿಡಿಎಸ್‌ಸಿಒ), ದೇಶಾದ್ಯಂತ ಇದೇ ರೀತಿಯ ಉತ್ಪನ್ನಗಳ ವ್ಯಾಪಕ ತಪಾಸಣೆಗೆ ಆದೇಶಿಸಿದೆ. ಅಂಗಡಿಗಳು ಮತ್ತು ಆಸ್ಪತ್ರೆಗಳಲ್ಲಿರುವ ದಾಸ್ತಾನುಗಳನ್ನು ತೆಗೆದುಹಾಕುವಂತೆ ರಾಜ್ಯಗಳ ಅಧಿಕಾರಿಗಳಿಗೆ ಸೂಚಿಸಲಾಗಿದೆ.

ಈ ದುರಂತವು ಇತರ ದೇಶಗಳಲ್ಲಿ ಕಲುಷಿತ ಕೆಮ್ಮಿನ ಸಿರಪ್‌ಗಳು ಮಕ್ಕಳ ಸಾವುಗಳಿಗೆ ಕಾರಣವಾಗಿದ್ದ ಹಿಂದಿನ ಘಟನೆಗಳಿಗೆ ಹೊಸ ಸೇರ್ಪಡೆಯಾಗಿದೆ. ಈ ಪ್ರಕರಣವು ಸಣ್ಣ ಔಷಧಿ ತಯಾರಕ ಕಂಪನಿಗಳಿಗಾಗಿ ಕಟ್ಟುನಿಟ್ಟಿನ ಗುಣಮಟ್ಟ ನಿಯಂತ್ರಣ ಮತ್ತು ಬಲವಾದ ಮೇಲ್ವಿಚಾರಣೆಯ ತುರ್ತು ಅಗತ್ಯವನ್ನು ತೋರಿಸಿದೆ ಎನ್ನುತ್ತಾರೆ ತಜ್ಞರು.

ಆರೋಗ್ಯಾಧಿಕಾರಿಗಳು ನಿಷೇಧಿತ ಸಿರಪ್‌ಗಳ ಬಳಕೆಯನ್ನು ತಕ್ಷಣವೇ ನಿಲ್ಲಿಸುವಂತೆ ಪೋಷಕರು ಮತ್ತು ವೈದ್ಯರಿಗೆ ಸೂಚಿಸಿದ್ದಾರೆ. ಕೆಮ್ಮಿನ ಸಿರಪ್ ಸೇವಿಸಿದ ಯಾವುದೇ ಮಗುವಿನಲ್ಲಿ ವಾಂತಿ, ಹೊಟ್ಟೆನೋವು ಅಥವಾ ಕಡಿಮೆ ಮೂತ್ರ ವಿಸರ್ಜನೆಯಂತಹ ಲಕ್ಷಣಗಳು ಕಂಡುಬಂದರೆ ಕೂಡಲೇ ವೈದ್ಯಕೀಯ ನೆರವು ಪಡೆಯುವಂತೆ ಅವರು ತಿಳಿಸಿದ್ದಾರೆ.

ದುರಂತದ ಕುರಿತು ತನಿಖೆಯು ಪ್ರಗತಿಯಲ್ಲಿದ್ದು, ವಿಷಕಾರಿ ಉತ್ಪನ್ನಗಳಿಗೆ ಕಾರಣರಾದವರ ವಿರುದ್ಧ ಕಠಿಣ ಕಾನೂನು ಕ್ರಮವನ್ನು ಕೈಗೊಳ್ಳುವುದಾಗಿ ಅಧಿಕಾರಿಗಳು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News