×
Ad

ಅಕ್ರಮ ಕೆಮ್ಮಿನ ಸಿರಪ್ ಪ್ರಕರಣ | ಮೂರು ರಾಜ್ಯಗಳ 25 ಸ್ಥಳಗಳಲ್ಲಿ ED ದಾಳಿ

Update: 2025-12-12 20:06 IST

ಸಾಂದರ್ಭಿಕ ಚಿತ್ರ | Photo Credit : freepik

ಹೊಸದಿಲ್ಲಿ,ಡಿ.12: ಕೋಡಿನ್ ಆಧಾರಿತ ಕೆಮ್ಮಿನ ಸಿರಪ್‌ನ ತಯಾರಿಕೆ ಮತ್ತು ಮಾರಾಟದ ಬೃಹತ್ ಅಕ್ರಮ ಜಾಲಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು (Ed) ಶುಕ್ರವಾರ ಉತ್ತರ ಪ್ರದೇಶ,bಜಾರ್ಖಂಡ್ ಮತ್ತು ಗುಜರಾತ್ ರಾಜ್ಯಗಳ ಆರು ನಗರಗಳಲ್ಲಿಯ 25 ಸ್ಥಳಗಳ ಮೇಲೆ ಏಕಕಾಲದಲ್ಲಿ ದಾಳಿಗಳನ್ನು ನಡೆಸಿದೆ ಎಂದು ಅಧಿಕಾರಿಗಳು ತಿಳಿಸಿದರು.

ಲಕ್ನೋದಲ್ಲಿ ಅಮಾನತುಗೊಂಡಿರುವ ಪೋಲಿಸ್ ಕಾನ್‌ಸ್ಟೇಬಲ್ ಮತ್ತು ಇತರ ನಾಲ್ವರ ನಿವಾಸಗಳ ಮೇಲೆ ದಾಳಿಗಳನ್ನು ನಡೆಸಲಾಗಿದೆ. ಇದೇ ವೇಳೆ ದುಬೈನಿಂದ ಈ ಜಾಲವನ್ನು ನಿರ್ವಹಿಸುತ್ತಿದ್ದಾನೆ ಎನ್ನಲಾಗಿರುವ ಪ್ರಮುಖ ರೂವಾರಿ ಶುಭಂ ಜೈಸ್ವಾಲ್‌ ಗೆ ಸೇರಿದ ವಾರಣಾಸಿಯಲ್ಲಿನ ಎರಡು ಮನೆಗಳ ಮೇಲೂ ದಾಳಿಗಳು ನಡೆದಿವೆ. ರಾಂಚಿ ಮತ್ತು ಅಹ್ಮದಾಬಾದ್‌ನಲ್ಲಿ ಅಬಟ್ ಫಾರ್ಮಾಸ್ಯುಟಿಕಲ್ಸ್,ಇತರ ಹಲವಾರು ಸಂಸ್ಥೆಗಳು ಮತ್ತು ಎರಡು ಪ್ರಮುಖ ಔಷಧಿ ತಯಾರಿಕೆ ಕಂಪನಿಗಳ ಕಚೇರಿಗಳ ಮೇಲೂ ದಾಳಿಗಳನ್ನು ನಡೆಸಲಾಗಿದೆ. ಸಹಾರನ್‌ ಪುರ ಮತ್ತು ಘಾಝಿಯಾಬಾದ್‌ನಲ್ಲೂ ದಾಳಿಗಳು ನಡೆದಿವೆ. ದಾಳಿ ಸಂದರ್ಭ ಹಲವಾರು ದಾಖಲೆಗಳು, ಮೊಬೈಲ್ ಫೋನ್‌ಗಳು ಮತ್ತು ಹಲವಾರು ಕಡತಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

2024,ಫೆಬ್ರವರಿಯಲ್ಲಿ ಲಕ್ನೋದಲ್ಲಿ ಭಾರೀ ಪ್ರಮಾಣದಲ್ಲಿ ಕಾನೂನುಬಾಹಿರ ಫೆನ್ಸೆಡಿಲ್ ಕೆಮ್ಮಿನ ಸಿರಪ್‌ನ್ನು ವಶಪಡಿಸಿಕೊಂಡಾಗ ಈ ಅಕ್ರಮ ಜಾಲವು ಮೊದಲ ಬಾರಿಗೆ ಬೆಳಕಿಗೆ ಬಂದಿತ್ತು.

ಉತ್ತರ ಪ್ರದೇಶ ವಿಶೇಷ ಕಾರ್ಯಪಡೆಯು ತನಿಖೆಯ ಸಂದರ್ಭ ವಿಭೋರ ರಾಣಾ ಮತ್ತು ವಿಶಾಲ ರಾಣಾ ಎನ್ನುವವರನ್ನು ಬಂಧಿಸಿದ್ದು,ವಿಚಾರಣೆ ಸಮಯದಲ್ಲಿ ಬೃಹತ್ ಜಾಲದ ಸ್ವರೂಪವನ್ನು ಅವರು ಬಹಿರಂಗಗೊಳಿಸಿದ್ದರು. ಈ ವೇಳೆ ವಾರಣಾಸಿ ನಿವಾಸಿ ಶುಭಂ ಜೈಸ್ವಾಲ್ ಹೆಸರು ಮೊದಲ ಬಾರಿಗೆ ಬೆಳಕಿಗೆ ಬಂದಿತ್ತು.

ತನಿಖೆ ಮುಂದುವರಿದಂತೆ ನ.27ರಂದು ಉ.ಪ್ರ.ಪೋಲಿಸ್ ಕಾನ್‌ಸ್ಟೇಬಲ್ ಅಲೋಕ ಸಿಂಗ್ ಮತ್ತು ಡಿ.2ರಂದು ಅಮಿತ್ ‘ಟಾಟಾ’ರನ್ನು ಬಂಧಿಸಿದ ಬಳಿಕ ಅಕ್ರಮ ದಂಧೆಯ ಪೂರ್ಣ ಪ್ರಮಾಣ ಬಹಿರಂಗಗೊಂಡಿತ್ತು.

ಡಿ.1ರಂದು ED ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ (ಪಿಎಂಎಲ್‌ಎ) ಪ್ರಕರಣವನ್ನು ದಾಖಲಿಸಿಕೊಂಡಿತ್ತು.

ಕಳೆದ ಐದು ದಿನಗಳಿಂದ ED ಜೈಸ್ವಾಲ್, ಸಿಂಗ್, ವಿಭೋರ ರಾಣಾ, ವಿಶಾಲ ರಾಣಾ, ಅಮಿತ್ ಟಾಟಾ ಸೇರಿದಂತೆ 20ಕ್ಕೂ ಅಧಿಕ ಆರೋಪಿಗಳಿಗೆ ಸಂಬಂಧಿಸಿದ 80ಕ್ಕೂ ಹೆಚ್ಚಿನ ಸಂಸ್ಥೆಗಳ ವಿವರಗಳನ್ನು ಪರಿಶೀಲಿಸುತ್ತಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News