ನ್ಯಾಯಾಲಯದಲ್ಲೇ ಮತ ಎಣಿಕೆ ಮಾಡಿ ನ್ಯಾಯಾಧೀಶರಿಂದಲೇ ಫಲಿತಾಂಶ ಘೋಷಣೆ!
ಹೊಸದಿಲ್ಲಿ: ಇಂದು (ಮಂಗಳವಾರ) ಸುಪ್ರೀಂಕೋರ್ಟ್ ಇತಿಹಾಸ ನಿರ್ಮಿಸಿತು. ಚಂಡೀಗಢ ಮೇಯರ್ ಚುನಾವಣೆಯ ಕೊನೆಯ ಹಂತದ ಕುರಿತು ನ್ಯಾಯಾಲಯದ ಸಭಾಂಗಣದಲ್ಲಿ ಅದೇಶಿಸಿತಲ್ಲದೆ, ಮತ ಎಣಿಕೆಗೂ ಸಾಕ್ಷಿಯಾಯಿತು. ಕೊನೆಗೆ, ಆಮ್ ಆದ್ಮಿ ಪಕ್ಷದ ಕುಲ್‌ದೀಪ್ ಕುಮಾರ್ ಅವರನ್ನು ಮೇಯರ್ ಎಂದು ನ್ಯಾಯಾಧೀಶರು ಘೋಷಿಸಿದರು.
ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ನ್ಯಾಯಪೀಠವು ಇಂದು ಬೆಳಗ್ಗೆ ಮತ ಪತ್ರಗಳನ್ನು ಪರಿಶೀಲಿಸಿತಲ್ಲದೆ, ಅವುಗಳ ಪೈಕಿ ಎಂಟು ಮತಪತ್ರಗಳನ್ನು ವಿರೂಪಗೊಳಿಸಿ ಅನೂರ್ಜಿತಗೊಳಿಸಿದ್ದ ಚುನಾವಣಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡಿತು. ನಂತರದ ಚುನಾವಣಾ ಪ್ರಕ್ರಿಯೆಯನ್ನು ಚುನಾವಣಾ ಆಯೋಗಕ್ಕೆ ಒಪ್ಪಿಸಲು ನಿರಾಕರಿಸಿತು.
ಇದರೊಂದಿಗೆ ಹೊಸದಾಗಿ ಚುನಾವಣೆ ನಡೆಸಲು ಆದೇಶಿಸಬೇಕು ಎಂಬ ಬಿಜೆಪಿಯ ಮನವಿಯನ್ನೂ ನ್ಯಾಯಾಲಯವು ತಿರಸ್ಕರಿಸಿತು.
"ಪ್ರಜಾಸತ್ತಾತ್ಮಕ ಪ್ರಕ್ರಿಯೆಯು ಇಂತಹ ಹಸ್ತಕ್ಷೇಪಗಳಿಲ್ಲದಂತೆ ನೋಡಿಕೊಳ್ಳುವುದು ಈ ನ್ಯಾಯಾಲಯದ ಕರ್ತವ್ಯವಾಗಿದೆ" ಎಂದು ನ್ಯಾಯಾಧೀಶರು ಹೇಳಿದರು.
"ಹೀಗಾಗಿ, ಇಂತಹ ವಿರಳ ಸನ್ನಿವೇಶಗಳಲ್ಲಿ ನ್ಯಾಯಾಲಯವು ಮಧ್ಯಪ್ರವೇಶಿಸಿ, ಮೂಲಭೂತ ಪ್ರಜಾಸತ್ತಾತ್ಮಕ ಜನಮತವನ್ನು ನಾವು ಖಾತರಿಗೊಳಿಸಬೇಕಿದೆ" ಎಂದೂ ನ್ಯಾಯಪೀಠವು ಹೇಳಿತು.
ಮತ ಎಣಿಕೆಯ ನಂತರ, "ಅರ್ಜಿದಾರರು ಚಂಡೀಗಢ ಮಹಾನಗರ ಪಾಲಿಕೆಯ ಮೇಯರ್ ಆಗಿ ಅರ್ಹವಾಗಿ ಚುನಾಯಿತರಾಗಿದ್ದಾರೆ" ಎಂದು ಚುನಾವಣಾ ಪ್ರಕ್ರಿಯೆಯಲ್ಲಿನ ಅಕ್ರಮಗಳ ಕುರಿತು ವಿಚಾರಣೆಗೆ ಆದೇಶಿಸುವುದಕ್ಕೂ ಮುನ್ನ ನ್ಯಾಯಾಲಯವು ತೀರ್ಪು ನೀಡಿತು.