ಬಿಜೆಪಿ ನಾಯಕ ಕಪಿಲ್ ಮಿಶ್ರಾ ವಿರುದ್ಧದ ಎಫ್‌ಐಆರ್‌ನಲ್ಲಿ ಅಸಮರ್ಪಕ ತನಿಖೆ: ದಿಲ್ಲಿ ಪೋಲಿಸರಿಗೆ ಕೋರ್ಟ್ ತರಾಟೆ
ಕಪಿಲ್ ಮಿಶ್ರಾ (Photo: PTI)
ಹೊಸದಿಲ್ಲಿ: ಕೋಮುದ್ವೇಷದ ಟ್ವೀಟ್‌ಗಳನ್ನು ಮಾಡಿದ್ದಕ್ಕಾಗಿ 2020ರಲ್ಲಿ ಬಿಜೆಪಿ ನಾಯಕ ಕಪಿಲ್ ಮಿಶ್ರಾ ವಿರುದ್ಧ ದಾಖಲಾಗಿದ್ದ ಪ್ರಕರಣದಲ್ಲಿ ಅಸಮರ್ಪಕ ತನಿಖೆಗಾಗಿ ದಿಲ್ಲಿಯ ರೌಸ್ ಅವೆನ್ಯೂ ನ್ಯಾಯಾಲಯವು ಪೋಲಿಸರನ್ನು ತರಾಟೆಗೆತ್ತಿಕೊಂಡಿದೆ. ದಿಲ್ಲಿಯ ಶಾಹೀನ್ ಬಾಗ್‌ನಲ್ಲಿ ಆಪ್ ಮತ್ತು ಕಾಂಗ್ರೆಸ್ ಪಕ್ಷಗಳು ‘ಮಿನಿ ಪಾಕಿಸ್ತಾನ’ವನ್ನು ಸೃಷ್ಟಿಸಿವೆ ಮತ್ತು ಸದ್ಯವೇ ನಡೆಯಲಿರುವ ವಿಧಾನಸಭಾ ಚುನಾವಣೆಯು ‘ಭಾರತ ಮತ್ತು ಪಾಕಿಸ್ತಾನ’ ನಡುವಿನ ಸ್ಪರ್ಧೆಯಾಗಿರಲಿದೆ ಎಂದು ಮಿಶ್ರಾ ಟ್ವೀಟಿಸಿದ್ದರು.
ಸೋಮವಾರ ವಿಚಾರಣೆಯನ್ನು ಕೈಗೆತ್ತಿಕೊಂಡಿದ್ದ ಹೆಚ್ಚುವರಿ ಸಿಜೆಎಂ ವೈಭವ ಚೌರಾಸಿಯಾ ಅವರು, ಮಿಶ್ರಾರ ಟ್ವಿಟರ್ ಖಾತೆಯಿಂದ ಸಾಕ್ಷ್ಯಗಳನ್ನು ಸಂಗ್ರಹಿಸಲು ನ್ಯಾಯಾಲಯವು ಕಳೆದ ವರ್ಷದ ಮಾರ್ಚ್‌ನಿಂದಲೂ ನಡೆಸಿದ್ದ ಪ್ರಯತ್ನ ವ್ಯರ್ಥವಾಗಿದೆ. ಟ್ವಿಟರ್(ಈಗ ಎಕ್ಸ್ ಕಾರ್ಪ್)ನಿಂದ ವರದಿಯನ್ನು ಪಡೆಯಲು ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ವರ್ದಿ ಡಿಸಿಪಿ ಎ.8ರಂದು ಭರವಸೆ ನೀಡಿದ್ದರು ಎನ್ನುವುದನ್ನು ಗಮನಕ್ಕೆ ತೆಗೆದುಕೊಂಡರು.
ಪ್ರಕರಣವು ಕಳೆದ ವರ್ಷದ ಮಾರ್ಚ್‌ನಿಂದಲೂ ಬಾಕಿಯಿದೆ ಎಂದು ಬೆಟ್ಟು ಮಾಡಿದ ನ್ಯಾಯಾಧೀಶರು, ದಿಲ್ಲಿ ಪೋಲಿಸರು ತನಿಖೆಯಲ್ಲಿ ವಿಫಲರಾಗಿದ್ದರೆ ಅಥವಾ ಯಾವುದೇ ಅಡಚಣೆಯಿದ್ದರೆ ಅದನ್ನು ನ್ಯಾಯಾಲಯಕ್ಕೆ ವರದಿ ಮಾಡಬೇಕು ಎಂದು ತಿಳಿಸಿದರು.
ಮುಂದಿನ ತನಿಖೆಯ ಬಗ್ಗೆ ನಿರ್ದೇಶನಗಳನ್ನು ಅನುಸರಿಸಲು ತನಿಖಾ ಸಂಸ್ಥೆಯ ಪರವಾಗಿ ಯಾರೂ ಹಾಜರಿಲ್ಲ. ಈ ನ್ಯಾಯಾಲಯದ ನಿರ್ದೇಶನಗಳ ಬಗ್ಗೆ ತನಿಖಾ ಸಂಸ್ಥೆಯ ನಿರ್ಲಕ್ಷ್ಯ ಧೋರಣೆಗಾಗಿ ಯಾವುದೇ ಕಟು ಟೀಕೆಯನ್ನು ಮಾಡುವ ಮುನ್ನ ಅದರ ಅಸಮರ್ಪಕ ವಿವರಣೆಗಾಗಿ ಈ ನ್ಯಾಯಾಲಯವು ಇದನ್ನು ವರ್ದಿ ಪೋಲಿಸ್ ಆಯುಕ್ತರ ಗಮನಕ್ಕೆ ತರುವುದು ಅಗತ್ಯವಾಗಿದೆ ಎಂದು ನ್ಯಾಯಾಲಯವು ತಿಳಿಸಿತು.
ಇತರ ಯಾವುದೇ ಸಚಿವಾಲಯದ ನೆರವು ಅಗತ್ಯವಾದರೆ ದಿಲ್ಲಿ ಪೋಲಿಸರು ಅದನ್ನು ಪಡೆದುಕೊಳ್ಳಬಹುದು ಎಂದು ಅದು ತಿಳಿಸಿತು.
ಪ್ರಕರಣದ ಮುಂದಿನ ವಿಚಾರಣೆಯು ಜು.7ರಂದು ನಡೆಯಲಿದೆ.