ಜೈಲಿನ ಪೇಫೋನ್ ಸೌಲಭ್ಯದಲ್ಲಿ ಪಕ್ಷಪಾತದ ಆರೋಪ; ಪ್ರತಿಕ್ರಿಯೆ ನೀಡಲು ರಾಜ್ಯ ಸರಕಾರಕ್ಕೆ ಬಾಂಬೆ ಹೈಕೋರ್ಟ್ ಸೂಚನೆ
ಬಾಂಬೆ ಹೈಕೋರ್ಟ್ | Photo: PTI
ಮುಂಬೈ : ಮಹಾರಾಷ್ಟ್ರದ ಕೊಲ್ಲಾಪುರ ಕೇಂದ್ರ ಕಾರಾಗೃಹದಲ್ಲಿ ಬಂಧಿತರಾಗಿರುವ ಅಪರಾಧಿಯೊಬ್ಬರು ಸಲ್ಲಿಸಿರುವ ಅರ್ಜಿಗೆ ಪ್ರತಿಕ್ರಿಯೆ ನೀಡುವಂತೆ ಬಾಂಬೆ ಹೈಕೋರ್ಟ್ ಮಹಾರಾಷ್ಟ್ರ ಸರ್ಕಾರಕ್ಕೆ ಸೂಚನೆ ನೀಡಿದೆ ಎಂದು indiatoday ವರದಿ ಮಾಡಿದೆ.
ಭಯೋತ್ಪಾದನೆ, ದೇಶವಿರೋಧಿ ಚಟುವಟಿಕೆಗಳು, ನಕ್ಸಲಿಸಂ ಅಥವಾ ದರೋಡೆಕೋರರ ಚಟುವಟಿಕೆಗಳಲ್ಲಿ ತೊಡಗಿರುವ ವ್ಯಕ್ತಿಗಳು ಕಾರಾಗೃಹಗಳಲ್ಲಿ ಪೇ ಫೋನ್ ಸೌಲಭ್ಯಗಳನ್ನು ಬಳಸುವಂತಿಲ್ಲ ಎಂಬ 2019 ರ ಅಧಿಸೂಚನೆಯನ್ನು ರದ್ದುಗೊಳಿಸುವಂತೆ ಅರ್ಜಿಯು ಕೋರಿದೆ.
ಕೊಲ್ಲಾಪುರ ಜೈಲಿನಲ್ಲಿ 400 ಕ್ಕೂ ಹೆಚ್ಚು ಕೈದಿಗಳು ಕುಟುಂಬ, ವಕೀಲರು ಮತ್ತು ಇತರರೊಂದಿಗೆ ಸಂವಹನ ನಡೆಸಲು ಪೇ ಫೋನ್ ಸೌಲಭ್ಯಗಳನ್ನು ಅವಲಂಬಿಸಿದ್ದಾರೆ ಎಂದು ಅರ್ಜಿದಾರರು ಪ್ರತಿಪಾದಿಸಿದ್ದಾರೆ. ಆದಾಗ್ಯೂ, ಈ ಸೌಲಭ್ಯವು ಕೆಲವು ವ್ಯಕ್ತಿಗಳಿಗೆ ಲಭ್ಯವಿಲ್ಲ.
ಪೇ ಫೋನ್ ಸೌಲಭ್ಯಗಳ ಮೂಲಕ ಕುಟುಂಬ ಸದಸ್ಯರು ಅಥವಾ ವಕೀಲರೊಂದಿಗೆ ಸಂಭಾಷಣೆಗಾಗಿ ಕೈದಿಗಳಿಗೆ ತಿಂಗಳಿಗೆ ಎರಡು ಬಾರಿ 10 ನಿಮಿಷಗಳನ್ನು ನೀಡಲಾಗುತ್ತದೆ. ಜೈಲಿನಲ್ಲಿರುವ ವಿದೇಶಿ ಪ್ರಜೆಗಳಿಗೆ ತಿಂಗಳಿಗೆ ಎರಡು ಬಾರಿ 15 ನಿಮಿಷಗಳ ವೀಡಿಯೊ ಕರೆ ಸೌಲಭ್ಯವನ್ನು ಒದಗಿಸಲಾಗಿದೆ.
ನ್ಯಾಯಮೂರ್ತಿಗಳಾದ ಅಜಯ್ ಗಡ್ಕರಿ ಮತ್ತು ಶ್ಯಾಮ್ ಚಂದಕ್ ಅವರು ರಾಜ್ಯದ ಪ್ರತಿನಿಧಿ ಹೆಚ್ಚುವರಿ ಪಬ್ಲಿಕ್ ಪ್ರಾಸಿಕ್ಯೂಟರ್ ವಿ.ಬಿ.ಕೊಂಡದೇಶಮುಖ್ ಅವರಿಗೆ ಆರು ವಾರಗಳಲ್ಲಿ ಸಂಕ್ಷಪ್ತ ಉತ್ತರ ಸಲ್ಲಿಸುವಂತೆ ಸೂಚಿಸಿದರು. ನ್ಯಾಯಾಲಯವು ಫೆಬ್ರವರಿ 2024 ರಲ್ಲಿ ವಿಷಯವನ್ನು ಮರುಪರಿಶೀಲಿಸಲಿದೆ.
ಅಪರಾಧಿ ಸಲೀಂ ಅಬ್ದುಲ್ ರಜಾಕ್ ಬೇಗ್ ಜೈಲಿನಿಂದ ನ್ಯಾಯಾಲಯಕ್ಕೆ ಈ ಕುರಿತು ಕಳವಳ ತಿಳಿಸಿದ್ದಾನೆ. ಹಿಂದಿನ ವಿಚಾರಣೆಯ ಸಮಯದಲ್ಲಿ, ಕಾನೂನು ನೆರವು ಸಮಿತಿಯಿಂದ ಬೇಗ್ ಗೆ ವಕೀಲರಾಗಿ ನೇಮಕಗೊಂಡ ವಕೀಲ ಜಾಹ್ನವಿ ಕಾರ್ಣಿಕ್ ಅವರು ಈ ವಿಷಯವನ್ನು ಪ್ರಸ್ತಾಪಿಸಿದರು. ಜಿಲ್ಲೆಯ ಹೊರಗಿನಿಂದ ಬಂದಿರುವ ಕೊಲ್ಹಾಪುರ ಜೈಲಿನಲ್ಲಿರುವ 400 ಕ್ಕೂ ಹೆಚ್ಚು ಕೈದಿಗಳು ಕುಟುಂಬ ಸದಸ್ಯರು, ವಕೀಲರು ಮತ್ತು ಇತರರೊಂದಿಗೆ ಸಂವಹನ ನಡೆಸಲು ಪೇ ಫೋನ್ ಸೌಲಭ್ಯಗಳನ್ನು ಅವಲಂಭಿಸಿದ್ದಾರೆ ಎಂದು ಕಾರ್ಣಿಕ್ ಉಲ್ಲೇಖಿಸಿದರು.
ಈಗಾಗಲೇ ಬೇಗ್ ಗೆ ಪೇ ಫೋನ್ ಸೌಲಭ್ಯ ನೀಡಲಾಗಿದೆ. ಆದರೂ, ವ್ಯವಸ್ಥೆ ತಾರತಮ್ಯದಿಂದ ಕೂಡಿದೆ ಎಂದು ಕಾರ್ನಿಕ್ ವಾದಿಸಿದರು. ಎಲ್ಲಾ ಫೋನ್ ಕರೆಗಳನ್ನು ರೆಕಾರ್ಡ್ ಮಾಡಲಾಗುತ್ತದೆ ಮತ್ತು ಯಾವುದೇ ಕೈದಿಗಳು ಮಾಡುವ ಕರೆಗಳ ಸಮಯದಲ್ಲಿ ಜೈಲು ಅಧಿಕಾರಿಗಳು ಭದ್ರತೆಯನ್ನು ಖಾತ್ರಿಪಡಿಸುತ್ತಾರೆ ಎಂದು ಅವರು ಒತ್ತಿ ಹೇಳಿದರು.
1998 ರಲ್ಲಿ ಮುಂಬೈನಲ್ಲಿ ಭೂಗತ ಪಾತಕಿ ಅರುಣ್ ಗೌಳಿಯ ಬಲಗೈ ಬಂಟ ಸುಧಾಕರ್ ಲೋನ್ ಅವರನ್ನು ಕೊಲೆ ಮಾಡಿದ ಆರೋಪದ ಮೇಲೆ ಬೇಗ್ 22 ವರ್ಷಗಳ ಕಾಲ ಸೆರೆವಾಸದಲ್ಲಿದ್ದಾರೆ. ಅವರು ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದಾರೆ.