ಕೋವಿಡ್-19 ಲಸಿಕೆ ಅಡ್ಡ ಪರಿಣಾಮ | ಕೇಂದ್ರದಿಂದ ಪರಿಹಾರ ನಿರಾಕರಣೆ: ನೀತಿ ರೂಪಿಸುವ ಕುರಿತು ಪ್ರತಿಕ್ರಿಯೆ ಕೋರಿದ ಸುಪ್ರೀಂ ಕೋರ್ಟ್
ಸಾಂದರ್ಭಿಕ ಚಿತ್ರ | Reuters
ಹೊಸ ದಿಲ್ಲಿ: ಕೋವಿಡ್-19 ಲಸಿಕೆಯಿಂದ ಆಗುತ್ತಿರುವ ಸಾವುಗಳು ಸೇರಿದಂತೆ ವ್ಯತಿರಿಕ್ತ ಪರಿಣಾಮಗಳಿಗೆ ಪರಿಹಾರ ಒದಗಿಸುವ ಯಾವುದೇ ಯೋಜನೆಗಳಿಲ್ಲ ಎಂದು ಸುಪ್ರೀಂ ಕೋರ್ಟ್ ಗೆ ಕೇಂದ್ರ ಸರಕಾರ ಮಾಹಿತಿ ನೀಡಿದ್ದು, ಅಂತಹ ನೀತಿಯನ್ನು ರೂಪಿಸಲು ಸಾಧ್ಯವೇ ಎಂಬ ಕುರಿತು ಪ್ರತಿಕ್ರಿಯಿಸುವಂತೆ ಮಂಗಳವಾರ ಕೇಂದ್ರ ಸರಕಾರಕ್ಕೆ ಸುಪ್ರೀಂ ಕೋರ್ಟ್ ಸೂಚಿಸಿದೆ.
ಕೇಂದ್ರ ಸರಕಾರದ ಪರ ಹಾಜರಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯ ಭಾಟಿ, ಕೋವಿಡ್-19 ಸಾಂಕ್ರಾಮಿಕವನ್ನು ಪ್ರಾಕೃತಿಕ ವಿಕೋಪ ಎಂದು ಘೋಷಿಸಲಾಗಿದ್ದು, ತದನಂತರ ಜಾರಿಗೊಳಿಸಲಾಗಿದ್ದ ಸೋಂಕು ಪ್ರತಿರೋಧಕ ಕಾರ್ಯಕ್ರಮದಿಂದ ಸೃಷ್ಟಿಯಾಗಿರುವ ಸಾವುಗಳು ಸೇರಿದಂತೆ ಅಡ್ಡ ಪರಿಣಾಮಗಳನ್ನು ಈ ಘೋಷಣೆಯಡಿ ಸೇರ್ಪಡೆ ಮಾಡಲಾಗಿಲ್ಲ ಹಾಗೂ ಇಂತಹ ಪ್ರಕರಣಗಳಲ್ಲಿ ಪರಿಹಾರ ನೀಡುವ ಯಾವುದೇ ಯೋಜನೆ ಅಸ್ತಿತ್ವದಲ್ಲಿಲ್ಲ ಎಂದು ನ್ಯಾ. ವಿಕ್ರಮ್ ನಾಥ್ ಹಾಗೂ ನ್ಯಾ. ಸಂದೀಪ್ ಮೆಹ್ತಾರನ್ನೊಳಗೊಂಡಿದ್ದ ನ್ಯಾಯಪೀಠಕ್ಕೆ ಮಾಹಿತಿ ನೀಡಿದರು.
ಆದರೆ, ಕೋವಿಡ್-19 ಸಾವುಗಳು ಹಾಗೂ ಲಸಿಕೆ ಸಂಬಂಧಿತ ಸಾವುಗಳನ್ನು ಪ್ರತ್ಯೇಕವಾಗಿ ನೋಡಬಾರದು ಎಂದು ನ್ಯಾಯಪೀಠ ಅಭಿಪ್ರಾಯ ಪಟ್ಟಿತು.
“ಅಂತಿಮವಾಗಿ ಲಸಿಕೆ ಅಭಿಯಾನವು ಸಾಂಕ್ರಾಮಿಕಕ್ಕೆ ನೀಡಿದ ಪ್ರತಿಕ್ರಿಯೆಯಾಗಿತ್ತು. ಅವು ಅಂತರ್ ಸಂಬಂಧ ಹೊಂದಿರಲಿಲ್ಲ ಎಂದು ನೀವು ಹೇಳಲು ಸಾಧ್ಯವಿಲ್ಲ” ಎಂದು ನ್ಯಾಯಪೀಠ ಹೇಳಿತು.
ಪ್ರಾಕೃತಿಕ ವಿಕೋಪ ನಿರ್ವಹಣೆ ಕಾಯ್ದೆಯಡಿ, ಕೋವಿಡ್-19 ಲಸಿಕೆ ಅಭಿಯಾನದ ಬಳಿಕ ಕಂಡು ಬಂದ ಸೋಂಕು ಪ್ರತಿರೋಧಕ ಕಾರ್ಯಕ್ರಮ ನಂತರದ ಪರಿಣಾಮ(AEFI)ಗಳನ್ನು ನಿರ್ವಹಿಸಲು ಯಾವುದೇ ನೀತಿಗಳು ಅಸ್ತಿತ್ವದಲ್ಲಿಲ್ಲ ಎಂದು ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯ ಭಾಟಿ ನ್ಯಾಯಾಲಯಕ್ಕೆ ತಿಳಿಸಿದರು.
“ಕೋವಿಡ್-19 ಅನ್ನು ಪ್ರಾಕೃತಿಕ ವಿಕೋಪ ಎಂದು ಘೋಷಿಸಲಾಗಿತ್ತು. ಆದರೆ, ಲಸಿಕೆ ಅಭಿಯಾನವನ್ನು ವೈದ್ಯಕೀಯ ಶಿಷ್ಟಾಚಾರದನ್ವಯ ಕೈಗೊಳ್ಳಲಾಗಿತ್ತು. ಸೋಂಕು ಪ್ರತಿರೋಧಕ ಕಾರ್ಯಕ್ರಮದ ನಂತರದ ಪರಿಣಾಮಗಳ ವ್ಯವಸ್ಥೆಯು ಸಾವೇನಾದರೂ ಲಸಿಕೆಯೊಂದಿಗೆ ನೇರ ಸಂಬಂಧ ಹೊಂದಿದೆಯೆ ಎಂಬ ಕುರಿತು ಮೌಲ್ಯಮಾಪನ ಮಾಡುತ್ತದೆ” ಎಂದು ಅವರು ಹೇಳಿದರು.
ನಂತರ, ನ್ಯಾಯಾಲಯದ ಸಲಹೆ ಕುರಿತು ಪ್ರತಿಕ್ರಿಯೆ ಸಲ್ಲಿಸಲು ಅವರು ಮೂರು ವಾರಗಳ ಕಾಲಾವಕಾಶ ಕೋರಿದರು. ಈ ಕೋರಿಕೆಯನ್ನು ಸ್ವೀಕರಿಸಿದ ನ್ಯಾಯಾಲಯ, ಕೇರಳ ಹೈಕೋರ್ಟ್ ಆದೇಶದ ವಿರುದ್ಧ ಕೇಂದ್ರ ಸರಕಾರ ಸಲ್ಲಿಸಿರುವ ಮೇಲ್ಮನವಿಯ ವಿಚಾರಣೆಯನ್ನು ಮಾರ್ಚ್ 18ಕ್ಕೆ ಮುಂದೂಡಿತು.
ನನ್ನ ಪತಿ ಕೋವಿಡ್ ಲಸಿಕೆಯ ಅಡ್ಡ ಪರಿಣಾಮಗಳಿಂದ ಮೃತಪಟ್ಟಿದ್ದಾರೆ ಎಂದು ಆರೋಪಿಸಿ, ಸಯೀದಾ ಕೆ.ಎ. ಎಂಬವರು ಪರಿಹಾರ ಕೋರಿ ಕೇರಳ ಹೈಕೋರ್ಟ್ ಮೆಟ್ಟಿಲೇರಿದ್ದರು. ಸೋಂಕು ಪ್ರತಿರೋಧಕ ಕಾರ್ಯಕ್ರಮದ ನಂತರದ ಪರಿಣಾಮಗಳನ್ನು ನಿರ್ವಹಿಸಲು ಯಾವುದೇ ನಿರ್ದಿಷ್ಟ ನೀತಿಗಳು ಅಸ್ತಿತ್ವದಲ್ಲಿಲ್ಲ ಎಂದು ಅವರು ತಮ್ಮ ಅರ್ಜಿಯಲ್ಲಿ ಆರೋಪಿಸಿದ್ದರು.
ಅರ್ಜಿಯ ವಿಚಾರಣೆ ನಡೆಸಿದ್ದ ಕೇರಳ ಹೈಕೋರ್ಟ್, ಕೋವಿಡ್-19 ಲಸಿಕೆಯ ನಂತರದ ಅಡ್ಡ ಪರಿಣಾಮಗಳಿಂದ ಆಗಿರುವ ಸಾವಿನ ಪ್ರಕರಣಗಳನ್ನು ಗುರುತಿಸಿ, ಮೃತಪಟ್ಟವರ ಸಂಬಂಧಿಕರಿಗೆ ಪರಿಹಾರ ಪಾವತಿಸಲು ನೀತಿಯೊಂದನ್ನು ರೂಪಿಸುವಂತೆ ರಾಷ್ಟ್ರೀಯ ವಿಕೋಪ ನಿರ್ವಹಣಾ ಪ್ರಾಧಿಕಾರಕ್ಕೆ ಆದೇಶಿಸಿತ್ತು.
ಈ ಆದೇಶದ ವಿರುದ್ಧ ಕೇಂದ್ರ ಸರಕಾರ ಸಲ್ಲಿಸಿದ್ದ ಮೇಲ್ಮನವಿಯನ್ನು ಮಾನ್ಯ ಮಾಡಿದ್ದ ಸುಪ್ರೀಂ ಕೋರ್ಟ್, ಕೇರಳ ಹೈಕೋರ್ಟ್ ನ ಈ ಆದೇಶಕ್ಕೆ 2023ರಲ್ಲಿ ತಡೆ ನೀಡಿತ್ತು. ಕೋವಿಡ್-19 ಲಸಿಕೆಗಳ ಪೈಕಿ ಒಂದು ಲಸಿಕೆಯನ್ನು ತಯಾರಿಸಿದ್ದ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಕೂಡಾ ಈ ಸಂಬಂಧ ವರ್ಗಾವಣೆ ಅರ್ಜಿಯನ್ನು ಸಲ್ಲಿಸಿತ್ತು.