×
Ad

ವಿಮಾನ ನಿಲ್ದಾಣಗಳಲ್ಲಿ ಕೋವಿಡ್ ಪರೀಕ್ಷೆ ಕಡ್ಡಾಯ ಇಲ್ಲ

Update: 2023-12-21 22:35 IST

Photo: PTI 

ಹೊಸದಿಲ್ಲಿ: ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರಿಗೆ ಕೋವಿಡ್ ಪರೀಕ್ಷೆಯನ್ನು ಕಡ್ಡಾಯಗೊಳಿಸುವ ಯಾವುದೇ ಯೋಜನೆ ಇಲ್ಲ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಗುರುವಾರ ತಿಳಿಸಿದೆ.

ದೇಶದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿರುವ ಹಾಗೂ ಕೋವಿಡ್ನ ಜೆಎನ್.1 ಉಪ ಪ್ರಬೇಧ ಪತ್ತೆಯಾದ ಹೊರತಾಗಿಯೂ ಸೋಂಕಿತರಲ್ಲಿ ಶೇ. 93ರಷ್ಟು ಜನರು ಮನೆ ಆಧಾರಿತ ಚಿಕಿತ್ಸೆಯನ್ನು ಆಯ್ಕೆ ಮಾಡಿಕೊಳ್ಳುತ್ತಿರುವುದರಿಂದ ತತ್ಕ್ಷಣ ಆತಂಕಪಡುವ ಯಾವುದೇ ಕಾರಣ ಇಲ್ಲ ಎಂದು ಅದು ಹೇಳಿದೆ.

ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆಯಲ್ಲಿ ಯಾವುದೇ ರೀತಿಯ ಹೆಚ್ಚಳ ಕಂಡು ಬಂದಿಲ್ಲ. ಇತರ ಅನಾರೋಗ್ಯದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗುವ ಕೆಲವರಲ್ಲಿ ಕೋವಿಡ್ ಸೋಂಕು ಕಂಡು ಬಂದಿದೆ ಎಂದು ಅದು ತಿಳಿಸಿದೆ.

ದೇಶದಲ್ಲಿ ಕಳೆದ ಎರಡು ವಾರಗಳಲ್ಲಿ ಕೋವಿಡ್ ನಿಂದ 22 ಜನರು ಸಾವನ್ನಪ್ಪಿದ್ದಾರೆ.

ಭಾರತದಲ್ಲಿ ಗುರುವಾರ 584 ಹೊಸ ಕೋವಿಡ್ ಸೋಂಕಿನ ಪ್ರಕರಣಗಳು ದಾಖಲಾಗಿವೆ. ಸಕ್ರಿಯ ಪ್ರಕರಣಗಳ ಸಂಖ್ಯೆ ಬುಧವಾರ 2,311 ಇದ್ದುದು ಗುರುವಾರ 2,669ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ದತ್ತಾಂಶ ತಿಳಿಸಿದೆ.

ಬುಧವಾರ 6 ಮಂದಿ ಸಾವನ್ನಪ್ಪುವುದರೊಂದಿಗೆ ಮೃತಪಟ್ಟವರ ಒಟ್ಟು ಸಂಖ್ಯೆ 5,33,327ಕ್ಕೆ ಏರಿಕೆಯಾಗಿದೆ. ಕೇರಳದಲ್ಲಿ 3, ಕರ್ನಾಟಕದಲ್ಲಿ 2 ಹಾಗೂ ಪಂಜಾಬ್ನಲ್ಲಿ 3 ಮಂದಿ ಕೋವಿಡ್ ನಿಂದ ಮೃತಪಟ್ಟಿದ್ದಾರೆ ಎಂದು ದತ್ತಾಂಶ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News