ಕೋವಿಶೀಲ್ಡ್ ಸುರಕ್ಷಿತ; ಅದಕ್ಕೂ ಹೃದಯಾಘಾತಕ್ಕೂ ಸಂಬಂಧವಿಲ್ಲ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ
PC : X
ಪುಣೆ: ತನ್ನ ಕೊರೋನ ವೈರಸ್ ಲಸಿಕೆ ಕೋವಿಶೀಲ್ಡ್ ‘‘ಸುರಕ್ಷಿತವಾಗಿದೆ ಮತ್ತು ವೈಜ್ಞಾನಿಕವಾಗಿ ಅಂಗೀಕರಿಸಲ್ಪಟ್ಟಿದೆ’’ ಮತ್ತು ಹೃದಯಾಘಾತಗಳಿಗೂ ಅದಕ್ಕೂ ಸಂಬಂಧವಿಲ್ಲ ಎಂದು ಲಸಿಕೆಯ ತಯಾರಕ ಸಂಸ್ಥೆ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಹೇಳಿದೆ.
ಹಾಸನ ಜಿಲ್ಲೆಯಲ್ಲಿ ಹೃದಯಾಘಾತದಿಂದ ಸಂಭವಿಸಿದ ಸಾವುಗಳ ಸಂಖ್ಯೆಯಲ್ಲಿ ಭಾರೀ ಹೆಚ್ಚಳವಾಗಿರುವುದಕ್ಕೂ, ಕೋವಿಡ್-19 ಲಸಿಕೆಗಳಿಗೂ ನಂಟಿರಬಹುದು ಎಂಬ ಅನುಮಾನವನ್ನು ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ವ್ಯಕ್ತಪಡಿಸಿದ ಬಳಿಕ ಅದು ಈ ಸ್ಪಷ್ಟೀಕರಣ ನೀಡಿದೆ.
ಕೋವಿಡ್-19 ಲಸಿಕೆಗಳಿಗೂ ದಿಢೀರ್ ಸಾವುಗಳಿಗೂ ಸಂಬಂಧವಿಲ್ಲ ಎಂಬುದಾಗಿ ಕೇಂದ್ರ ಆರೋಗ್ಯ ಸಚಿವಾಲಯ ಇತ್ತೀಚೆಗೆ ನೀಡಿರುವ ಹೇಳಿಕೆಯನ್ನು ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಬೆಂಬಲಿಸಿದೆ. ಕೋವಿಡ್-19 ಲಸಿಕೆಗಳು ಮತ್ತು ಹೃದಯಾಘಾತ ಸಾವುಗಳ ನಡುವೆ ಸಂಬಂಧವಿಲ್ಲ ಎನ್ನುವುದನ್ನು ಐಸಿಎಮ್ಆರ್ ಮತ್ತು ಎಐಐಎಮ್ಎಸ್ ನಡೆಸಿರುವ ಬೃಹತ್ ಅಧ್ಯಯನಗಳು ದೃಢಪಡಿಸಿವೆ ಎಂದು ಸಚಿವಾಲಯ ಹೇಳಿದೆ.
‘‘ಇತ್ತೀಚಿನ ಕಳವಳಗಳ ಹಿನ್ನೆಲೆಯಲ್ಲಿ ನಾವು ಇದನ್ನು ಸ್ಪಷ್ಟಪಡಿಸುತ್ತೇವೆ: ಕೋವಿಡ್-19 ಲಸಿಕೆಗಳು ಮತ್ತು ದಿಢೀರ್ ಸಾವಿನ ನಡುವೆ ಸಂಬಂಧವಿಲ್ಲ ಎಂದು ಐಸಿಎಮ್ಆರ್ ಮತ್ತು ಎಐಐಎಮ್ಎಸ್ ನಡೆಸಿರುವ ಬೃಹತ್ ಅಧ್ಯಯನಗಳು ತಿಳಿಸಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಲಸಿಕೆಗಳು ಸುರಕ್ಷಿತ ಹಾಗೂ ವೈಜ್ಞಾನಿಕವಾಗಿ ಅಂಗೀಕರಿಸಲ್ಪಟ್ಟಿವೆ’’ ಎಂದು ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಹೇಳಿದೆ.
ಲಸಿಕೆಗಳನ್ನು ‘‘ಅವಸರದಿಂದ’’ ಅನುಮೋದಿಸಲಾಗಿದೆ ಹಾಗೂ ಇತ್ತೀಚೆಗೆ ಹಾಸನದಲ್ಲಿ ಸಂಭವಿಸಿದ ಹೃದಯಾಘಾತ ಸಾವುಗಳು ಮತ್ತು ಲಸಿಕಾ ಅಭಿಯಾನದ ನಡುವೆ ಸಂಬಂಧವಿರುವ ಸಾಧ್ಯತೆಯಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇತ್ತೀಚೆಗೆ ಹೇಳಿದ್ದರು.