×
Ad

"ಯುಡಿಎಫ್ ಅಧಿಕಾರಕ್ಕೆ ಬಂದರೆ ಜಮಾಅತೆ ಇಸ್ಲಾಮಿಗೆ ಗೃಹ ಖಾತೆ": ಸಿಪಿಐ(ಎಂ) ನಾಯಕ ಎ.ಕೆ. ಬಾಲನ್ ಹೇಳಿಕೆಗೆ ಎಲ್‌ಡಿಎಫ್ ನಲ್ಲೇ ವಿರೋಧ

ಬಾಲನ್‌ಗೆ ಲೀಗಲ್ ನೋಟಿಸ್ ಕಳುಹಿಸಿದ ಜಮಾಅತೆ ಇಸ್ಲಾಮಿ ಸಂಘಟನೆ

Update: 2026-01-08 13:37 IST

ಎ.ಕೆ. ಬಾಲನ್ (Photo credit: manoramaonline.com)

ತಿರುವನಂತಪುರಂ: ಜಮಾಅತೆ ಇಸ್ಲಾಮಿ ವಿರುದ್ಧ ಹಿರಿಯ ಸಿಪಿಐ(ಎಂ) ನಾಯಕ, ಮಾಜಿ ಕಾನೂನು ಸಚಿವ ಎ.ಕೆ. ಬಾಲನ್ ನೀಡಿರುವ ಹೇಳಿಕೆ ಕೇರಳದಲ್ಲಿ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ಕಾಂಗ್ರೆಸ್ ಹೇಳಿಕೆಯನ್ನು "ಅಪಾಯಕಾರಿ ಮತ್ತು ಕೋಮುವಾದಿ" ಎಂದು ಕರೆದಿದೆ.

ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್) ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಅಧಿಕಾರಕ್ಕೆ ಬಂದರೆ ಜಮಾಅತೆ ಇಸ್ಲಾಮಿ ಗೃಹ ವ್ಯವಹಾರಗಳ ಖಾತೆಯನ್ನು ನಿರ್ವಹಿಸುತ್ತದೆ ಮತ್ತು ಮರಾದ್ ಗಲಭೆಯಂತಹ ಕೆಲವು ಕೋಮು ಗಲಭೆಗಳು ಪುನರಾವರ್ತನೆಯಾಗಬಹುದು. ಜಮಾಅತೆ ಇಸ್ಲಾಮಿಗಿಂತ ಮುಸ್ಲಿಂ ಲೀಗ್ ಹೆಚ್ಚಿನ ಕೋಮುವಾದಿ ಪ್ರವೃತಿ ಹೊಂದಿದೆ ಎಂದು ಎ.ಕೆ. ಬಾಲನ್ ಹೇಳಿದ್ದರು.

ಈ ಹೇಳಿಕೆಗೆ ಸಂಬಂಧಿಸಿ ಜಮಾಅತೆ ಇಸ್ಲಾಮಿ ಸಂಘಟನೆ ಎ.ಕೆ. ಬಾಲನ್ ಅವರಿಗೆ ಲೀಗಲ್ ನೋಟಿಸ್ ಕಳುಹಿಸಿದೆ.

ಈ ಹೇಳಿಕೆಯನ್ನು ವಿರೋಧ ಪಕ್ಷದ ನಾಯಕ ವಿ.ಡಿ. ಸತೀಶನ್ ತೀವ್ರವಾಗಿ ಖಂಡಿಸಿದ್ದಾರೆ. ಈ ಹೇಳಿಕೆಗಳನ್ನು "ಅಪಾಯಕಾರಿ ಮತ್ತು ಕೋಮುವಾದಿ" ಎಂದು ಟೀಕಿಸಿದ್ದಾರೆ.

ಸ್ಥಳೀಯ ಸಂಸ್ಥೆಗಳ ಚುನಾವಣೆಯ ಸಮಯದಲ್ಲಿ ಹಲವಾರು ವಾರ್ಡ್‌ಗಳಲ್ಲಿ ಅಲ್ಪಸಂಖ್ಯಾತರ ಮತಗಳ ಕ್ರೋಢೀಕರಣವು ಎಡರಂಗಕ್ಕೆ ದೊಡ್ಡ ಹಿನ್ನಡೆಯಾಗಿದೆ ಎಂದು ಸಿಪಿಎಂ ರಾಜ್ಯ ಕಾರ್ಯದರ್ಶಿ ಎಂ.ವಿ. ಗೋವಿಂದನ್ ಮತ್ತು ಸಿಪಿಐ ರಾಜ್ಯ ಕಾರ್ಯದರ್ಶಿ ಬಿನೋಯ್ ವಿಶ್ವಂ ಈ ಹಿಂದೆ ಹೇಳಿದ್ದರು. ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಅಲ್ಪಸಂಖ್ಯಾತ ಸಮುದಾಯಗಳನ್ನು ಮತ್ತೆ ಒಗ್ಗೂಡಿಸಲು ಪ್ರಯತ್ನಗಳನ್ನು ತ್ವರಿತಗೊಳಿಸಲಾಗುವುದು ಎಂದು ಅವರು ಹೇಳಿದ್ದರು. ಈ ಸಂದರ್ಭದಲ್ಲಿ ಎ.ಕೆ. ಬಾಲನ್ ನೀಡಿರುವ ಹೇಳಿಕೆ ವಿವಾದವನ್ನು ಸೃಷ್ಟಿಸಿದೆ. ಇಂದು ಮತ್ತು ನಾಳೆ ನಡೆಯಲಿರುವ ಸಿಪಿಐ ಕಾರ್ಯಕಾರಿಣಿ ಸಭೆಗಳಲ್ಲಿ ಈ ವಿಷಯದ ಬಗ್ಗೆ ಚರ್ಚೆ ನಡೆಯಲಿದೆ ಎಂದು ವರದಿಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News