ಇಂಡಿಗೊ ವೈಫಲ್ಯ: ಜೆಪಿಸಿ ತನಿಖೆಗೆ ಆಗ್ರಹಿಸಿ ಪ್ರಧಾನಿಗೆ ಸಿಪಿಎಂ ಸಂಸದ ಜಾನ್ ಬ್ರಿಟ್ಟಾಸ್ ಪತ್ರ
Credit: X/@JohnBrittas
ಹೊಸದಿಲ್ಲಿ,ಡಿ.7: ಇಂಡಿಗೊ ವೈಫಲ್ಯಕ್ಕೆ ಸಂಬಂಧಿಸಿದಂತೆ ರಾಜ್ಯಸಭೆಯಲ್ಲಿ ಸಿಪಿಎಂ ಸದನ ನಾಯಕ ಜಾನ್ ಬ್ರಿಟ್ಟಾಸ್ ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದಾರೆ. ನಿಯಂತ್ರಕ ವೈಫಲ್ಯಗಳು, ವಾಯುಯಾನ ಸಂಸ್ಥೆಯ ಸನ್ನದ್ಧತೆ, ಸುರಕ್ಷತಾ ನಿಯಮಗಳ ದುರ್ಬಲಗೊಳಿಸುವಿಕೆ ಮತ್ತು ವಿಮಾನಯಾನ ದರಗಳ ಏರಿಕೆ ಇತ್ಯಾದಿಗಳ ಕುರಿತು ತನಿಖೆಗಾಗಿ ಜಂಟಿ ಸಂಸದೀಯ ಸಮಿತಿ ಅಥವಾ ನ್ಯಾಯಾಂಗ ವಿಚಾರಣಾ ಆಯೋಗವನ್ನು(ಸಿಐಒ) ರಚಿಸುವಂತೆ ಅವರು ಪತ್ರದಲ್ಲಿ ಆಗ್ರಹಿಸಿದ್ದಾರೆ.
ಮಾರುಕಟ್ಟೆಯ ಮೇಲೆ ಅತಿಯಾದ ಪ್ರಾಬಲ್ಯವನ್ನು ಸಾಧಿಸಲು ಒಂದು ಅಥವಾ ಎರಡು ವಿಮಾನಯಾನ ಸಂಸ್ಥೆಗಳಿಗೆ ಅನುವು ಮಾಡಿಕೊಟ್ಟಿರುವ ಅಸ್ತಿತ್ವದಲ್ಲಿರುವ ನೀತಿ ಚೌಕಟ್ಟನ್ನು ಜೆಪಿಸಿ ಅಥವಾ ಸಿಐಒ ಪರಿಶೀಲಿಸಬೇಕು. ಜೊತೆಗೆ ಸಾಮೂಹಿಕ ವ್ಯತ್ಯಯಗಳ ಸಮಯದಲ್ಲಿ ಪ್ರಯಾಣಿಕರಿಗೆ ಸ್ವಯಂಚಾಲಿತ ಪರಿಹಾರ, ನ್ಯಾಯಯುತವಾಗಿ ನಡೆಸಿಕೊಳ್ಳುವಿಕೆ ಮತ್ತು ಪಾರದರ್ಶಕ ಬೆಲೆ ನಿಗದಿಯನ್ನು ಖಾತರಿಗೊಳಿಸುವ ಶಾಸನಬದ್ಧ ಪ್ರಯಾಣಿಕರ ಹಕ್ಕುಗಳ ಮಸೂದೆಯ ತುರ್ತು ಅಗತ್ಯವನ್ನೂ ಪರಿಶೀಲಿಸಬೇಕು ಎಂದು ಬ್ರಿಟ್ಟಾಸ್ ಹೇಳಿದ್ದಾರೆ.
ಇಂಡಿಗೋ ಸೇವೆಗಳ ಸಾಮೂಹಿಕ ರದ್ದತಿಯು ನಿಯಂತ್ರಕ ಸನ್ನದ್ಧತೆ,ಮಾರುಕಟ್ಟೆ ಮೇಲ್ವಿಚಾರಣೆ ಮತ್ತು ಗ್ರಾಹಕ ರಕ್ಷಣೆಯಲ್ಲಿನ ‘ತೀವ್ರ ರಚನಾತ್ಮಕ ವೈಫಲ್ಯಗಳನ್ನು’ ಬಹಿರಂಗಗೊಳಿಸಿದೆ. ಇದರಿಂದಾಗಿ ಸಾಮಾನ್ಯ ಪ್ರಯಾಣಿಕರು ತೀವ್ರ ಸಂಕಷ್ಟಕ್ಕೆ ಸಿಲಕುವಂತಾಗಿದೆ. ಒಂದು ವಿಮಾನಯಾನ ಸಂಸ್ಥೆಯು ಮಾರುಕಟ್ಟೆಯಲ್ಲಿ ಅಸಾಧಾರಣ ಪ್ರಾಬಲ್ಯವನ್ನು ಹೊಂದಿರುವಾಗ ಅದರ ವೈಫಲ್ಯವು ಇಡೀ ವ್ಯವಸ್ಥೆಯ ವೈಫಲ್ಯಕ್ಕೆ ಕಾರಣವಾಗುತ್ತದೆ ಎಂದು ಬ್ರಿಟ್ಟಾಸ್ ಪತ್ರದಲ್ಲಿ ಹೇಳಿದ್ದಾರೆ.
ಊಹಿಸಬಹುದಾಗಿದ್ದ ಒತ್ತಡದಡಿ ವ್ಯವಸ್ಥೆಯು ಕುಸಿದು ಬಿದ್ದ ಬಳಿಕ ಮೊದಲು ಜಾರಿಗೊಳಿಸಲಾಗಿದ್ದ ಸುರಕ್ಷತಾ ನಿಯಮಗಳನ್ನು ಅವಸರದಿಂದ ಸಡಿಲಿಸಿದ್ದು ಅಥವಾ ಹಿಂದೆಗೆದುಕೊಂಡಿದ್ದು ವಾಣಿಜ್ಯ ಲಾಭಕ್ಕಾಗಿ ಪ್ರಯಾಣಿಕರ ಸುರಕ್ಷತೆಯನ್ನು ಕಡೆಗಣಿಸಲಾಗಿದೆ ಎಂಬ ಕಳವಳಗಳನ್ನು ಹುಟ್ಟು ಹಾಕಿದೆ ಎಂದೂ ಬ್ರಿಟ್ಟಾಸ್ ಪತ್ರದಲ್ಲಿ ಹೇಳಿದ್ದಾರೆ.