‘ಏಕತಾ ಪ್ರತಿಮೆಯಲ್ಲಿ ಬಿರುಕು’ ಪೋಸ್ಟ್‌ಗಾಗಿ ಅಪರಿಚಿತ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲು
PC : apah.org.in
ಕೆವಾಡಿಯಾ(ಗುಜರಾತ್): ‘ನರ್ಮದಾ ಜಿಲ್ಲೆಯ ಕೆವಾಡಿಯಾದಲ್ಲಿಯ ಏಕತಾ ಪ್ರತಿಮೆಯಲ್ಲಿ ಬಿರುಕುಗಳು ಕಾಣಿಸಿಕೊಳ್ಳುತ್ತಿದ್ದು,ಅದು ಯಾವುದೇ ಸಮಯದಲ್ಲಾದರೂ ಬೀಳಬಹುದು‘ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡಿರುವ ಅಪರಿಚಿತ ವ್ಯಕ್ತಿಯ ವಿರುದ್ಧ ಗುಜರಾತ್ ಪೋಲಿಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.
ಸ್ವತಂತ್ರ ಭಾರತದ ಮೊದಲ ಗೃಹಸಚಿವ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಗೌರವಾರ್ಥ ನಿರ್ಮಿಸಲಾಗಿರುವ 182 ಮೀ.ಎತ್ತರದ ಏಕತಾ ಪ್ರತಿಮೆ ಪ್ರಮುಖ ಪ್ರವಾಸಿ ಆಕರ್ಷಣೆಯಾಗಿದೆ. ಪ್ರಧಾನಿ ನರೇಂದ್ರ ಮೋದಿಯವರು ಅಕ್ಟೋಬರ್ 2018ರಲ್ಲಿ ಇದನ್ನು ಲೋಕಾರ್ಪಣೆ ಮಾಡಿದ್ದರು.
ಹಿಂದಿ ಭಾಷೆಯಲ್ಲಿ ಆಕ್ಷೇಪಾರ್ಹ ಪೋಸ್ಟ್ ಅನ್ನು ಸೆ.8ರಂದು ಬೆಳಿಗ್ಗೆ 9:52ಕ್ಕೆ RaGa4India ಹ್ಯಾಂಡಲ್‌ನಿಂದ ಮಾಡಲಾಗಿತ್ತು ಎಂದು ಪೋಲಿಸರು ತಿಳಿಸಿದ್ದಾರೆ.
ಪೋಸ್ಟ್ ಪ್ರತಿಮೆ ಸಂಕೀರ್ಣದ ಹಳೆಯ ಚಿತ್ರವನ್ನೂ ಹೊಂದಿದ್ದು,ನಿರ್ಮಾಣ ಸಮಯದಲ್ಲಿ ಈ ಚಿತ್ರವನ್ನು ತೆಗೆದಿರುವಂತಿದೆ.
ಎಕ್ಸ್ ಬಳಕೆದಾರ ಪೋಸ್ಟನ್ನು ಅಳಿಸಿರುವುದರಿಂದ ಅದೀಗ ವೀಕ್ಷಣೆಗೆ ಲಭ್ಯವಿಲ್ಲ.
ಏಕತಾ ಪ್ರತಿಮೆ ಪ್ರದೇಶಾಭಿವೃದ್ಧಿ ಮತ್ತು ಪ್ರವಾಸೋದ್ಯಮ ಆಡಳಿತ ಪ್ರಾಧಿಕಾರದ ಘಟಕ-1ರ ಡೆಪ್ಯೂಟಿ ಕಲೆಕ್ಟರ್ ಅಭಿಷೇಕ ರಂಜನ ಸಿನ್ಹಾರ ದೂರಿನ ಮೇರೆಗೆ ಪೋಲಿಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.
ಇಂತಹ ಸುಳ್ಳುಸುದ್ದಿಯನ್ನು ಹರಡುವ ಮೂಲಕ ಜನರಲ್ಲಿ ಭೀತಿಯನ್ನು ಮೂಡಿಸಲು ಮತ್ತು ಶಾಂತಿಯನ್ನು ಕದಡುವ ಪ್ರಯತ್ನವನ್ನು ಮಾಡಲಾಗಿದೆ ಎಂದು ಸಿನ್ಹಾ ದೂರಿನಲ್ಲಿ ಆರೋಪಿಸಿದ್ದಾರೆ.