ಕೇಂದ್ರದಿಂದ ಕರ್ನಾಟಕಕ್ಕೆ 22,476 ಕೋಟಿ ರೂ.ಬಾಕಿ!
ರಾಜ್ಯಸಭಾ ಸದಸ್ಯ ಜಿ.ಸಿ.ಚಂದ್ರಶೇಖರ | Photo Credit : sansad tv
ಹೊಸದಿಲ್ಲಿ,ಡಿ.13: ಕೇಂದ್ರ ಸರಕಾರವು ಪ್ರಸಕ್ತ ವರ್ಷದ ಕರ್ನಾಟಕದ ತೆರಿಗೆ ಹಂಚಿಕೆಯಾಗಿ 51,700 ಕೋಟಿ ರೂ.ಗಳನ್ನು ಕಂತುಗಳಲ್ಲಿ ಬಿಡುಗಡೆ ಮಾಡಿದೆ. ಈ ವಿತ್ತವರ್ಷದಲ್ಲಿ ಕೇಂದ್ರ ಪ್ರಾಯೋಜಿತ ಯೋಜನೆಗಳಿಗಾಗಿ 16,000 ಕೋಟಿ ರೂ.ಗಳನ್ನು ನೀಡುವುದಾಗಿ ಕೇಂದ್ರವು ಭರವಸೆ ಕೊಟ್ಟಿತ್ತಾದರೂ ಈವರೆಗೆ ಕೇವಲ 7000 ಕೋ.ರೂ.ಗಳನ್ನು ಬಿಡುಗಡೆ ಮಾಡಲಾಗಿದ್ದು,ಇನ್ನೂ 9,000 ಕೋ.ರೂ.ಗಳನ್ನು ಬಾಕಿಯುಳಿಸಿಕೊಂಡಿದೆ.
ಬಾಕಿಯಿರುವ ಹಣವನ್ನು ಶೀಘ್ರ ಬಿಡುಗಡೆ ಮಾಡುವಂತೆ ಕೋರಿ ಕರ್ನಾಟಕ ಸರಕಾರವು ಕೇಂದ್ರಕ್ಕೆ ಪತ್ರವನ್ನು ಬರೆದಿದೆ. ಜೊತೆಗೆ ಜಲಜೀವನ ಯೋಜನೆಯಡಿ ಕೇಂದ್ರದ ಪಾಲು 4,574 ಕೋಟಿ ರೂ.ಕೂಡ ರಾಜ್ಯಕ್ಕೆ ಬಾಕಿಯಿದೆ.
15ನೇ ಹಣಕಾಸು ಆಯೋಗವು ಕರ್ನಾಟಕಕ್ಕೆ ಶಿಫಾರಸು ಮಾಡಿದ್ದ ಆರೋಗ್ಯ ಅನುದಾನವನ್ನು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಕಳೆದೆರಡು ವರ್ಷಗಳಲ್ಲಿ ಬಿಡುಗಡೆ ಮಾಡಿಲ್ಲ. ಆಯೋಗವು 2021-22ರಿಂದ 2025-26ರವರೆಗಿನ ಅವಧಿಗೆ ರಾಜ್ಯಕ್ಕೆ 2,928 ಕೋ.ರೂ.ಗಳನ್ನು ಹಂಚಿಕೆ ಮಾಡಿತ್ತು. ಈ ಪೈಕಿ ಕೇವಲ 1,497 ಕೋ.ರೂ.ಗಳನ್ನು ಈವರೆಗೆ ಬಿಡುಗಡೆ ಮಾಡಲಾಗಿದ್ದು, 2024-25 ಮತ್ತು 2025-26ರ ವರ್ಷಗಳಿಗೆ ಯಾವುದೇ ಹಣವನ್ನು ಬಿಡುಗಡೆ ಮಾಡಲಾಗಿಲ್ಲ.
ಶುಕ್ರವಾರ ಲೋಕಸಭೆಯಲ್ಲಿ ದಕ್ಷಿಣ ಕನ್ನಡ ಸಂಸದ ಬ್ರಿಜೇಶ ಚೌಟ ಅವರ ಪ್ರಶ್ನೆಗೆ ನೀಡಿದ ಲಿಖಿತ ಉತ್ತರದಲ್ಲಿ ಆರೋಗ್ಯ ಮತ್ತು ಕುಟುಂಬ ಖಾತೆಯ ರಾಜ್ಯಸಚಿವ ಪ್ರತಾಪರಾವ್ ಜಾಧವ ಅವರು ಈ ಮಾಹಿತಿಯನ್ನು ಒದಗಿಸಿದ್ದಾರೆ. ಕಳೆದ ಐದು ವರ್ಷಗಳಲ್ಲಿ ಕರ್ನಾಟಕಕ್ಕೆ ಬಿಡುಗಡೆಯಾದ ಒಟ್ಟು ಹಣ ಮತ್ತು ರಾಜ್ಯವು ಖರ್ಚು ಮಾಡಿದ ಮೊತ್ತದ ವಿವರಗಳನ್ನು ಸಂಸದರು ಕೋರಿದ್ದರು.
ಜಲಜೀವನ ಮಿಷನ್ ಅಡಿ ಕರ್ನಾಟಕಕ್ಕೆ ಬಾಕಿಯಿರುವ ಹಣವನ್ನು ಬಳಕೆ ಪ್ರಮಾಣಪತ್ರಗಳನ್ನು ಸಲ್ಲಿಸಿದ ಬಳಿಕವೇ ಬಿಡುಗಡೆ ಮಾಡಲಾಗುವುದು ಎಂದು ಕೇಂದ್ರ ಜಲಶಕ್ತಿ ಸಚಿವ ಸಿ.ಆರ್.ಪಾಟೀಲ ಸ್ಪಷ್ಟಪಡಿಸಿದ್ದಾರೆ. ಲೋಕಸಭೆಯಲ್ಲಿ ಬಳ್ಳಾರಿ ಸಂಸದ ಇ.ತುಕಾರಾಮ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ‘ಕರ್ನಾಟಕ ಸೇರಿದಂತೆ ಹಲವಾರು ರಾಜ್ಯಗಳು ಈಗಾಗಲೇ ಬಿಡುಗಡೆಗೊಂಡ ಹಣಕ್ಕೆ ಬಳಕೆ ಪ್ರಮಾಣ ಪತ್ರಗಳನ್ನು ಸಲ್ಲಿಸಿಲ್ಲ. ಬಳಕೆ ಪ್ರಮಾಣಪತ್ರಗಳನ್ನು ಸಲ್ಲಿಸದಿದ್ದರೆ ಇನ್ನಷ್ಟು ಹಣವನ್ನು ಬಿಡುಗಡೆ ಮಾಡಲಾಗುವುದಿಲ್ಲ ಎಂದು ನಾವು ಕರ್ನಾಟಕದ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳಿಗೆ ಪತ್ರಗಳ ಮೂಲಕ ತಿಳಿಸಿದ್ದೇವೆ ’ಎಂದು ಹೇಳಿದರು. ಜಲಜೀವನ ಮಿಷನ್ ಅಡಿ ಹಣಕಾಸು ಬಿಡುಗಡೆಗೆ ಸಂಬಂಧಿಸಿದಂತೆ ಮುಂದಿನ ವಾರ ಮತ್ತೊಂದು ಸಭೆ ನಡೆಯಲಿದೆ ಎಂದರು.
ಈ ವೇಳೆ ತುಕಾರಾಮ,ಈ ಯೋಜನೆಯಡಿ ಕರ್ನಾಟಕವು ಗಮನಾರ್ಹ ಪ್ರಗತಿಯನ್ನು ಸಾಧಿಸಿದೆ,ಆದರೆ ಕೇಂದ್ರವು ಸುಮಾರು 13,500 ಕೋಟಿ ರೂ.ಗಳನ್ನು ತಡೆಹಿಡಿದಿದೆ ಎಂದು ಆರೋಪಿಸಿದರು. ಬಾಕಿ ಇರುವ ಹಣವನ್ನು ಶೀಘ್ರವೇ ಬಿಡುಗಡೆ ಮಾಡುವಂತೆ ಅವರು ಕೇಂದ್ರ ಸರಕಾರವನ್ನು ಆಗ್ರಹಿಸಿದರು.
ಕರ್ನಾಟಕದಲ್ಲಿ ಅನುಷ್ಠಾನಗೊಳ್ಳುತ್ತಿರುವ ಕೇಂದ್ರ ಪ್ರಾಯೋಜಿತ ಯೋಜನೆಗಳಿಗೆ ಈ ವರ್ಷ 56,549 ಕೋಟಿ ರೂ.ಗಳನ್ನು ಕೇಂದ್ರ ಸರಕಾರವು ಹಂಚಿಕೆ ಮಾಡಿತ್ತು,ಆದರೆ ಡಿ.6ರವರೆಗೆ ಕೇವಲ 34,703 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದ್ದು,22,476 ಕೋ.ರೂ.ಗಳನ್ನು ಬಾಕಿಯುಳಿಸಿಕೊಂಡಿದೆ ಎಂದು ರಾಜ್ಯಸಭಾ ಸದಸ್ಯ ಜಿ.ಸಿ.ಚಂದ್ರಶೇಖರ ಅವರು ತಿಳಿಸಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಕರ್ನಾಟಕಕ್ಕೆ ಆಗಿರುವ ಅನ್ಯಾಯವನ್ನು ಸಂಸತ್ತಿನಲ್ಲಿ ಪ್ರಸ್ತಾವಿಸುವಂತೆ ಆಗ್ರಹಿಸಿ ರಾಜ್ಯ ಸರಕಾರವು ಎಲ್ಲ ಸಂಸದರಿಗೆ ಪತ್ರಗಳನ್ನು ಬರೆದಿದೆ ಎಂದು ತಿಳಿಸಿದರು. ಕೇಂದ್ರದ ತಾರತಮ್ಯ ನೀತಿಯ ವಿರುದ್ಧ ತಾನು ಮಂಗಳವಾರ ರಾಜ್ಯಸಭೆಯಲ್ಲಿ ಧ್ವನಿಯೆತ್ತುವುದಾಗಿ ಅವರು ಹೇಳಿದರು.
ಆಯುಷ್ಮಾನ ಭಾರತ ಯೋಜನೆಯಡಿ 2020ರಲ್ಲಿ ಕರ್ನಾಟಕದಲ್ಲಿ ಸುಮಾರು ಎಂಟು ಲಕ್ಷ ಫಲಾನುಭವಿಗಳಿದ್ದು,ಅವರ ಸಂಖ್ಯೆ ಈಗ 34 ಲಕ್ಷಕ್ಕೆ ಏರಿಕೆಯಾಗಿದೆ. ಆದರೆ ಕೇಂದ್ರದ ಕೊಡುಗೆ ಕೇವಲ 2,500 ಕೋ.ರೂ.ಗಳಷ್ಟಿದ್ದು,ರಾಜ್ಯ ಸರಕಾರವು 7,400 ಕೋ.ರೂ.ಗಳನ್ನು ವೆಚ್ಚ ಮಾಡಿದೆ. ಯೋಜನೆಯ ವೆಚ್ಚದ ಶೇ.60ರಷ್ಟು ಪಾಲನ್ನು ಕೇಂದ್ರವು ಭರಿಸಬೇಕಿತ್ತು,ಆದರೆ ಅದು ಪ್ರಸ್ತುತ ಕೇವಲ ಶೇ.25ರಷ್ಟು ಪಾಲನ್ನು ನೀಡುತ್ತಿದೆ ಎಂದು ಅವರು ಆರೋಪಿಸಿದರು.