ಪಾಕ್ ಹ್ಯಾಕರ್ ಗಳಿಂದ ಭಾರತೀಯ ವೆಬ್‌ಸೈಟ್ ಗಳ ಮೇಲೆ 15 ಲಕ್ಷ ಸೈಬರ್ ದಾಳಿ!
ಸಾಂದರ್ಭಿಕ ಚಿತ್ರ | PC : freepik.com
ಮುಂಬೈ: ಏಳು ಅಡ್ವಾನ್ಸ್ಡ್ ಪರ್ಸಿಸ್ಟಂಟ್ ಥ್ರೆಟ್(ಎಪಿಟಿ) ಗುಂಪುಗಳಿಂದ ಭಾರತದಾದ್ಯಂತ ಪ್ರಮುಖ ಮೂಲಸೌಕರ್ಯ ವೆಬ್‌ಸೈಟ್ ಗಳನ್ನು ಗುರಿಯಾಗಿಸಿಕೊಂಡು ನಡೆದ 15 ಲಕ್ಷ ಕ್ಕೂ ಅಧಿಕ ಸೈಬರ್ ದಾಳಿಗಳನ್ನು ತಾವು ಪತ್ತೆ ಹಚ್ಚಿರುವುದಾಗಿ ಮಹಾರಾಷ್ಟ್ರ ಸೈಬರ್ ಅಧಿಕಾರಿಗಳು ತಿಳಿಸಿದ್ದಾರೆ.
ಈ ಗುಂಪುಗಳು ಮುಖ್ಯವಾಗಿ ಪಾಕಿಸ್ತಾನ, ಬಾಂಗ್ಲಾದೇಶ, ಇಂಡೋನೇಶ್ಯಾ ಮತ್ತು ಮಧ್ಯಪ್ರಾಚ್ಯದೊಂದಿಗೆ ಸಂಬಂಧವನ್ನು ಹೊಂದಿದ್ದು, ಎ.22ರ ಪಹಲ್ಗಾಮ್ ಭಯೋತ್ಪಾದಕ ಘಟನೆಯ ಬಳಿಕ ಈ ದಾಳಿಗಳು ತೀವ್ರಗೊಂಡಿವೆ.
ಹೆಚ್ಚಿನ ಪ್ರಮಾಣದಲ್ಲಿ ದಾಳಿಗಳು ನಡೆದಿದ್ದರೂ ಕೇವಲ 150 ದಾಳಿಗಳು ಯಶಸ್ವಿಯಾಗಿದ್ದವು. ಭಾರತ-ಪಾಕಿಸ್ತಾನ ನಡುವೆ ಕದನ ವಿರಾಮದ ಬಳಿಕವೂ ಸೈಬರ್ ದಾಳಿಗಳು ಮುಂದುವರಿದಿವೆ ಎಂದು ಅಧಿಕಾರಿಗಳನ್ನು ಉಲ್ಲೇಖಿಸಿ ಸುದ್ದಿಸಂಸ್ಥೆಯು ವರದಿ ಮಾಡಿದೆ.
ಕದನ ವಿರಾಮದ ಬಳಿಕ ಭಾರತದಲ್ಲಿನ ಸರಕಾರಿ ವೆಬ್‌ಸೈಟ್ ಗಳ ಮೇಲಿನ ಸೈಬರ್ ದಾಳಿಗಳು ಕಡಿಮೆಯಾಗಿವೆ. ಆದರೆ ಸಂಪೂರ್ಣವಾಗಿ ನಿಂತಿಲ್ಲ ಎನ್ನುವುದನ್ನು ತನಿಖೆಯು ತೋರಿಸಿದೆ. ಪಾಕಿಸ್ತಾನ, ಬಾಂಗ್ಲಾದೇಶ, ಇಂಡೋನೇಶ್ಯಾ, ಮೊರಾಕ್ಕೋ ಮತ್ತು ಕೊಲ್ಲಿ ದೇಶಗಳಿಂದ ಈ ದಾಳಿಗಳು ಮುಂದುವರಿದಿವೆ ಎಂದು ಅಧಿಕಾರಿಯೋರ್ವರು ತಿಳಿಸಿದ್ದಾರೆ.
ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ, ವಾಯುಯಾನ ವ್ಯವಸ್ಥೆಗಳು, ಮುನ್ಸಿಪಲ್ ನೆಟ್‌ವರ್ಕ್ ಗಳು ಅಥವಾ ಚುನಾವಣಾ ಆಯೋಗದ ವೆಬ್‌ಸೈಟ್ ಗಳಿಗೆ ಹ್ಯಾಕರ್ ಗಳು ಕನ್ನ ಹಾಕಿದ್ದಾರೆ ಎಂಬ ಹೇಳಿಕೆಗಳನ್ನು ಹಿರಿಯ ಮಹಾರಾಷ್ಟ್ರ ಸೈಬರ್ ಅಧಿಕಾರಿಯೋರ್ವರು ನಿರಾಕರಿಸಿದ್ದಾರೆ.
‘ರೋಡ್ ಆಫ್ ಸಿಂಧೂರ’ ಶೀರ್ಷಿಕೆಯ ಹೊಸ ವರದಿಯಲ್ಲಿ ಸರಣಿ ಸೈಬರ್ ದಾಳಿಗಳನ್ನು ಅಧಿಕಾರಿಗಳು ವಿವರಿಸಿದ್ದಾರೆ. ಡಿಜಿಪಿ ಮತ್ತು ರಾಜ್ಯ ಗುಪ್ತಚರ ಇಲಾಖೆ ಸೇರಿದಂತೆ ಪ್ರಮುಖ ಭದ್ರತಾ ಸಂಸ್ಥೆಗಳಿಗೆ ಸಲ್ಲಿಸಲಾಗಿರುವ ವರದಿಯು ದಾಳಿಯ ಪ್ರಮಾಣ ಮತ್ತು ವಿಧಾನಗಳನ್ನು ವಿವರಿಸಿದೆ.
ಎಡಿಜಿಪಿ ಯಶಸ್ವಿ ಯಾದವ್ ಅವರ ಪ್ರಕಾರ, ಮಾಲ್‌ವೇರ್ ವಿತರಣೆ,ಜಿಪಿಎಸ್ ವಂಚನೆ ಮತ್ತು ವೆಬ್‌ಸೈಟ್ ವಿರೂಪಗೊಳಿಸುವಿಕೆ ಇತ್ಯಾದಿಗಳು ದಾಳಿ ತಂತ್ರಗಳಲ್ಲಿ ಸೇರಿವೆ. ಅನೇಕ ದಾಳಿಗಳನ್ನು ನಿರ್ಬಂಧಿಸಲಾಗಿದ್ದರೂ ಕೆಲವು ಭಾರತದ ಪ್ರಮುಖ ಮೂಲಸೌಕರ್ಯವನ್ನು ಗುರಿಯಾಗಿಸಿಕೊಂಡಿದ್ದವು.
‘ರೋಡ್ ಆಫ್ ಸಿಂಧೂರ’ ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರದ ಸೈಬರ್ ಚಟುವಟಿಕೆಗಳನ್ನು ಪರಿಶೀಲಿಸಿದ್ದ ‘ಎಕೋಸ್ ಆಫ್ ಪಹಲ್ಗಾಮ್’ ಎಂಬ ಹಿಂದಿನ ವರದಿಯನ್ನು ಆಧರಿಸಿದೆ. ಹೊಸ ವರದಿಯು ಏಳು ಹ್ಯಾಕಿಂಗ್ ಗುಂಪುಗಳನ್ನು ಗುರುತಿಸಿದ್ದು, ಪಾಕಿಸ್ತಾನ ಸೈಬರ್ ಫೋರ್ಸ್, ಟೀಮ್ ಇನ್ಸೇನ್ ಪಿಕೆ, ಮಿಸ್ಟರಿಯಸ್ ಬಾಂಗ್ಲಾದೇಶ, ಇಂಡೋ ಹ್ಯಾಕ್ ಸೆಕ್, ಸೈಬರ್ ಗ್ರೂಪ್̧ ನ್ಯಾಷನಲ್ ಸೈಬರ್ ಕ್ರೂ ಇವುಗಳಲ್ಲಿ ಸೇರಿವೆ.
150 ಯಶಸ್ವಿ ಸೈಬರ್ ದಾಳಿಗಳಲ್ಲಿ ಕುಲ್ಗಾಂವ್ ಬದ್ಲಾಪುರ ನಗರಸಭೆಯ ವೆಬ್ ಸೈಟ್ ಮತ್ತು ಜಲಂಧರದ ಡಿಫೆನ್ಸ್ ನರ್ಸಿಂಗ್ ಕಾಲೇಜಿನ ವೆಬ್‌ಸೈಟ್ ವಿರೂಪಗೊಳಿಸಿದ್ದು ಸೇರಿವೆ ಎಂದು ಅಧಿಕಾರಿಗಳು ತಿಳಿಸಿದರು.
ಭಾರತದ ಬ್ಯಾಂಕಿಂಗ್ ವ್ಯವಸ್ಥೆಯನ್ನು ಹ್ಯಾಕ್ ಮಾಡಲಾಗಿದ್ದು, ವಿದ್ಯುತ್ ವ್ಯತ್ಯಯಗಳನ್ನುಂಟು ಮಾಡಲಾಗಿದೆ ಎಂದು ಈ ಸೈಬರ್ ದಾಳಿ ಗುಂಪುಗಳು ಸುಳ್ಳು ಸುದ್ದಿಯನ್ನು ಹರಡಿದ್ದವು. ಮಹಾರಾಷ್ಟ್ರ ಸೈಬರ್ 5,000ಕ್ಕೂ ಅಧಿಕ ಸುಳ್ಳುಸುದ್ದಿಗಳ ತುಣುಕುಗಳನ್ನು ತೆಗೆದುಹಾಕಿದೆ ಮತ್ತು 80 ತಪ್ಪುಮಾಹಿತಿ ಮೂಲಗಳನ್ನು ತೆಗೆಯುವಂತೆ ಸಂಬಂಧಿತ ಸಂಸ್ಥೆಗಳಿಗೆ ಸೂಚಿಸಿದೆ. ಅಧಿಕೃತ ಮೂಲಗಳ ಮೂಲಕ ಮಾತ್ರ ಮಾಹಿತಿಯನ್ನು ಪರಿಶೀಲಿಸುವಂತೆ ಅದು ಸಾರ್ವಜನಿಕರನ್ನು ಆಗ್ರಹಿಸಿದೆ.
ಭಾರತದ ವಿದ್ಯುತ್ ಜಾಲದ ಮೇಲೆ ಸೈಬರ್ ದಾಳಿ, ಉಪಗ್ರಹ ಜಾಮಿಂಗ್, ಉತ್ತರ ಕಮಾಂಡ್‌ನ ಕಾರ್ಯಾಚರಣೆಗೆ ಅಡ್ಡಿ ಮತ್ತು ಬ್ರಹ್ಮೋಸ್ ಕ್ಷಿಪಣಿ ಸಂಗ್ರಹಾಗಾರದ ಮೇಲೆ ದಾಳಿ ಇವೂ ಈ ಸೈಬರ್ ದಾಳಿ ಗುಂಪುಗಳು ಹರಡಿದ್ದ ಕಟ್ಟುಕಥೆಗಳಲ್ಲಿ ಸೇರಿವೆ ಎಂದು ಎಡಿಜಿಪಿ ಯಾದವ್ ತಿಳಿಸಿದರು.