×
Ad

ಉತ್ತರಾಖಂಡ | ಜನರಿಗೆ 3.37 ಕೋಟಿ ರೂ.ಗಳನ್ನು ವಂಚಿಸಿದ್ದ ಸೈಬರ್‌ ಗ್ಯಾಂಗ್ ಭೇದಿಸಿದ ಪೋಲಿಸರು

Update: 2025-11-17 20:23 IST

ಸಾಂದರ್ಭಿಕ ಚಿತ್ರ | Photo Credit : PTI 

 

ನೈನಿತಾಲ್,ನ.17: ಜನರ ಫೋನ್‌ಗಳನ್ನು ಹ್ಯಾಕ್ ಮಾಡಿ ಅವರ ಬ್ಯಾಂಕ್ ಖಾತೆಗಳಿಂದ ಹಣವನ್ನು ಲಪಟಾಯಿಸುತ್ತಿದ್ದ ಆರೋಪದಲ್ಲಿ ಪ್ರಮುಖ ಅಂತರರಾಜ್ಯ ಸೈಬರ್ ಅಪರಾಧ ಜಾಲದ ನಾಲ್ವರನ್ನು ಉತ್ತರಾಖಂಡ ಪೋಲಿಸರು ಬಂಧಿಸಿದ್ದಾರೆ.

ಸಂತ್ರಸ್ತರ ಫೋನ್‌ಗಳನ್ನು ಪ್ರವೇಶಿಸಲು ಈ ಗ್ಯಾಂಗ್ ಸಾಮಾಜಿಕ ಮಾಧ್ಯಮಗಳಲ್ಲಿ ಲಿಂಕ್‌ ಗಳನ್ನು ಕಳುಹಿಸುತ್ತಿತ್ತು ಮತ್ತು ತಮ್ಮ ಗುರುತುಗಳನ್ನು ಮರೆಮಾಚಲು ನಕಲಿ ಖಾತೆಗಳಿಗೆ ಹಣವನ್ನು ವರ್ಗಾಯಿಸಿಕೊಳ್ಳುತ್ತಿತ್ತು ಎಂದು ಪೋಲಿಸರು ತಿಳಿಸಿದರು.

ಪ್ರಾಥಮಿಕ ತನಿಖೆಯಲ್ಲಿ 3.37 ಕೋಟಿ ರೂ.ಗಳ ಅನುಮಾನಾಸ್ಪದ ವಹಿವಾಟು ಪತ್ತೆಯಾಗಿದೆ.

ಶನಿವಾರ ವಾಹನ ತಪಾಸಣೆ ಸಂದರ್ಭದಲ್ಲಿ ದೋ ಗಾಂವ್‌ ನ ಭೇಡಿಯಾಪಖಡ್ ಎಂಬಲ್ಲಿ ಕಾರೊಂದನ್ನು ತಡೆದು ನಿಲ್ಲಿಸಿದ್ದ ಪೋಲಿಸರು ಅದರಲ್ಲಿ 11 ಫೋನ್‌ ಗಳು,ಒಂಭತ್ತು ಸಿಮ್ ಕಾರ್ಡ್‌ಗಳು,ಹಲವಾರು ಆಧಾರ್ ಮತ್ತು ಪಾನ್ ಕಾರ್ಡ್‌ ಗಳು,ಚೆಕ್ ಪುಸ್ತಕಗಳು,ಕ್ಯೂಆರ್ ಕೋಡ್‌ ಗಳು ಮತ್ತು ಅನೇಕ ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡ್‌ ಗಳನ್ನು ಪತ್ತೆ ಹಚ್ಚಿದ್ದರು. ಕಾರಿನಲ್ಲಿ ನಾಲ್ವರು ಅನುಮಾನಾಸ್ಪದ ವ್ಯಕ್ತಿಗಳಿದ್ದು, ಅವರನ್ನು ವಿಚಾರಣೆಗೊಳಪಡಿಸಿದಾಗ ತಾವು ಸಂತ್ರಸ್ತ ವ್ಯಕ್ತಿಗಳ ಫೋನ್‌ ಗಳಿಗೆ ಕನ್ನ ಹಾಕಲು ಸಾಮಾಜಿಕ ಮಾಧ್ಯಮಗಳ ಮೂಲಕ ಎಪಿಕೆ ಫೈಲ್‌ಗಳನ್ನು ಕಳುಹಿಸುತ್ತಿದ್ದನ್ನು ಒಪ್ಪಿಕೊಂಡಿದ್ದಾರೆ.

ರಾಜಸ್ಥಾನದ ಆಲ್ವಾರ್ ನಿವಾಸಿ ಶುಭಂ ಗುಪ್ತಾ, ಉತ್ತರ ಪ್ರದೇಶದ ಬುಲಂದಶಹರ್‌ ನ ಪಿಯೂಷ್ ಗೋಯಲ್ ಮತ್ತು ಘಾಜಿಯಾಬಾದ್‌ನ ರಿಷಭ್ ಕುಮಾರ್‌ ಹಾಗೂ ಹರ್ಯಾಣದ ಗುರುಗ್ರಾಮ ನಿವಾಸಿ ಮೋಹಿತ್ ರಾಠಿ ಬಂಧಿತ ಆರೋಪಿಗಳಾಗಿದ್ದಾರೆ ಎಂದು ಪೋಲಿಸರು ತಿಳಿಸಿದರು.

ಆರೋಪಿಗಳು ಬಳಸಿದ್ದ ಹಲವಾರು ದುಬಾರಿ ಬೆಲೆಗಳ ಸ್ಮಾರ್ಟ್‌ಫೋನ್‌ಗಳು ಮತ್ತು ಕಾರನ್ನೂ ವಶಪಡಿಸಿಕೊಳ್ಳಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News