ದಲಿತ ಬಾಲಕನ ಮೃತದೇಹ ತರಗತಿಯಲ್ಲಿ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಪತ್ತೆ
ಸಾಂದರ್ಭಿಕ ಚಿತ್ರ
ಜೈಪುರ: ರಾಜಸ್ಥಾನದ ಕೊಟ್‌ಪುತಲಿ-ಬಹರೋರ್ ಜಿಲ್ಲೆಯ ಪ್ರಾಗ್‌ಪುರದಲ್ಲಿರುವ ಜವಾಹರ್ ನವೋದಯ ಶಾಲೆಯ 10ನೇ ತರಗತಿಯ ದಲಿತ ಬಾಲಕನ ಮೃತದೇಹ ತರಗತಿ ಕೊಠಡಿಯಲ್ಲಿ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.
ಈ ಘಟನೆ ಬುಧವಾರ ಸಂಭವಿಸಿದೆ ಎಂದು ಅವರು ತಿಳಿಸಿದ್ದಾರೆ.
ಇಬ್ಬರು ಶಿಕ್ಷಕರು ಬಾಲಕನ ಹತ್ಯೆಗೈದಿದ್ದಾರೆ. ಅನಂತರ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಂತೆ ಕಾಣಲು ಮೃತದೇಹವನ್ನು ನೇತು ಹಾಕಿದ್ದಾರೆ ಎಂದು ಬಾಲಕನ ಕುಟುಂಬ ಆರೋಪಿಸಿದೆ. ಇಬ್ಬರು ಶಿಕ್ಷಕರನ್ನು ಬಂಧಿಸುವಂತೆ ಆಗ್ರಹಿಸಿ ಕುಟುಂಬ ಧರಣಿ ನಡೆಸಿದೆ ಎಂದು ಅವರು ತಿಳಿಸಿದ್ದಾರೆ.
ಇಬ್ಬರು ಶಿಕ್ಷಕರು ಬಾಲಕನಿಗೆ ಕಿರುಕುಳ ನೀಡಿದ್ದಾರೆ ಎಂದು ಬಾಲಕನ ಕುಟುಂಬ ಆರೋಪಿಸಿದೆ ಎಂದು ಕೊಟ್‌ಪುತಲಿ-ಬಹರೋರ್ ಪೊಲೀಸ್ ಅಧೀಕ್ಷಕ ರಂಜಿತ್ ಶರ್ಮಾ ಹೇಳಿದ್ದಾರೆ.
ಬಾಲಕನ ಕುಟುಂಬದ ಸದಸ್ಯರು ಧರಣಿ ನಡೆಸಿದ ಕಾರಣಕ್ಕೆ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲು ಸಾಧ್ಯವಾಗಿರಲಿಲ್ಲ. ಅನಂತರ ಅವರನ್ನು ಸಮಾಧಾನ ಪಡಿಸಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು ಎಂದು ಅವರು ತಿಳಿಸಿದ್ದಾರೆ.
ಶಿಕ್ಷಕರ ವಿರುದ್ಧ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆದರೆ, ಇದುವರೆಗೆ ಯಾರನ್ನೂ ಬಂಧಿಸಿಲ್ಲ ಎಂದು ಅವರು ತಿಳಿಸಿದ್ದಾರೆ.