ಉತ್ತರಪ್ರದೇಶ | ದಲಿತ ಕುಟುಂಬದ ವಿವಾಹ ಸಮಾರಂಭದಲ್ಲಿ ಡಿಜೆ ನುಡಿಸದಂತೆ ಅಡ್ಡಿ : ಪ್ರಕರಣ ದಾಖಲು
ಸಾಂದರ್ಭಿಕ ಚಿತ್ರ (Credit: Grok)
ಮಥುರಾ : ಉತ್ತರಪ್ರದೇಶದ ಮಥುರಾದ ನೌಝೀಲ್ ಪೊಲೀಸ್ ಠಾಣೆ ವ್ಯಾಪ್ತಿಯ ಭೂರೇಕಾ ಗ್ರಾಮದಲ್ಲಿ ದಲಿತ ಕುಟುಂಬವೊಂದರ ವಿವಾಹ ಸಮಾರಂಭದ ಮೆರವಣಿಗೆಯಲ್ಲಿ ಡಿಜೆ ನುಡಿಸುವುದಕ್ಕೆ ಜಾಟ್ ಸಮುದಾಯದ ಜನರು ಅಡ್ಡಿಪಡಿಸಿರುವ ಬಗ್ಗೆ ವರದಿಯಾಗಿದೆ.
ಈ ವೇಳೆ ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು. ಬುಧವಾರ ರಾತ್ರಿ ಮಥುರಾದ ನೌಝೀಲ್ ಪೊಲೀಸ್ ಠಾಣೆಯಲ್ಲಿ ಈ ಕುರಿತು ಕೃಷ್ಣ, ಮನೀಶ್ ಕುಮಾರ್, ಅಂಕುರ್ ಮತ್ತು 20 ರಿಂದ 25 ಅಪರಿಚಿತ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಭಾರತೀಯ ನ್ಯಾಯ ಸಂಹಿತಾ ಸೆಕ್ಷನ್ 191(2)(ಗಲಭೆ), 191(3) (ಗಲಭೆಗೆ ಕಾನೂನುಬಾಹಿರ ಸಭೆ), 190 (ಕಾನೂನುಬಾಹಿರ ಸಭೆ), 115(2) (ಸ್ವಯಂಪ್ರೇರಣೆಯಿಂದ ನೋವುಂಟುಮಾಡುವುದು), 118(1) (ಸ್ವಯಂಪ್ರೇರಣೆಯಿಂದ ಅಪಾಯಕಾರಿ ಆಯುಧದಿಂದ ಗಾಯಗೊಳಿಸುವುದು), ಸೆಕ್ಷನ್ 126(2), ಸೆಕ್ಷನ್ 76, ಸೆಕ್ಷನ್ 333, 324(4), 352, 351 ಮತ್ತು ಎಸ್ಸಿ ಎಸ್ಟಿ ಕಾಯಿದೆಯಡಿ ಪ್ರಕರಣ ದಾಖಲಿಸಲಾಗಿದೆ.
ಪೊಲೀಸ್ ಅಧಿಕಾರಿ ಗುಂಜನ್ ಸಿಂಗ್ ಮಾತನಾಡಿ, ವಧುವಿನ ಚಿಕ್ಕಪ್ಪ ಪೂರಣ್ ಸಿಂಗ್ ನೀಡಿದ ದೂರಿನ ಮೇರೆಗೆ ನೌಝೀಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಈ ಕುರಿತು ಹೆಚ್ಚಿನ ತನಿಖೆಯನ್ನು ನಡೆಸಿ ಮುಂದಿನ ಕ್ರಮವನ್ನು ಕೈಗೊಳ್ಳುವುದಾಗಿ ತಿಳಿಸಿದರು.