×
Ad

ಅಕ್ರಮ ಸಂಬಂಧ ಆರೋಪ: ದಲಿತ ಮಹಿಳೆಯನ್ನು ಅರೆಬೆತ್ತಲುಗೊಳಿಸಿ ಹಲ್ಲೆ; ನಾಲ್ವರ ಬಂಧನ

Update: 2023-07-28 08:13 IST

ರಾಂಚಿ: ಅಕ್ರಮ ಸಂಬಂಧದ ಆರೋಪದಲ್ಲಿ 26 ವರ್ಷ ವಯಸ್ಸಿನ ದಲಿತ ಮಹಿಳೆಯೊಬ್ಬರನ್ನು ಚೆನ್ನಾಗಿ ಥಳಿಸಿ, ಅರೆಬೆತ್ತಲುಗೊಳಿಸಿ ಹಲವು ಗಂಟೆಗಳ ಕಾಲ ಮರಕ್ಕೆ ಕಟ್ಟಿಹಾಕಿದ ಘಟನೆ ಜಾರ್ಖಂಡ್‍ನ ಸರಿಯಾದಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ.

ಜಿಲ್ಲಾಕೇಂದ್ರ ಗಿರಿಧ್‍ನಿಂದ ಸುಮಾರು 70 ಕಿಲೋಮೀಟರ್ ದೂರದ ಹಳ್ಳಿಯಲ್ಲಿ ಈ ಅಮಾನವೀಯ ಘಟನೆ ಬುಧವಾರ ರಾತ್ರಿ ನಡೆದಿದೆ. ಈ ಬಗ್ಗೆ ಮಾಹಿತಿ ಸಿಕ್ಕಿದ ತಕ್ಷಣ ಧಾವಿಸಿದ ಪೊಲೀಸರು ಗುರುವಾರ ಬೆಳಿಗ್ಗೆ ಮಹಿಳೆಯನ್ನು ರಕ್ಷಿಸಿದರು ಎಂದು ತಿಳಿದು ಬಂದಿದೆ.

"ರಾತ್ರಿ 11 ಗಂಟೆಯ ವೇಳೆಗೆ ಮನೆಯಿಂದ ಹೊರಗೆ ಬರುವಂತೆ ತನ್ನ ಮೊಬೈಲ್‍ಗೆ ಕರೆ ಬಂದಿತ್ತು.  ಮನೆಯಿಂದ ಹೊರಬಂದು ನೋಡಿದಾಗ ಇಬ್ಬರು ಯುವಕರು ಸ್ಕೂಟಿಯಲ್ಲಿ ಕಾಯುತ್ತಿದ್ದರು. ನನ್ನನ್ನು ಬಲವಂತವಾಗಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಹಲ್ಲೆ ನಡೆಸಿದರು. ಅಮಾನುಷವಾಗಿ ಥಳಿಸಿ ಬಟ್ಟೆಯನ್ನು ಹರಿದು ಮರಕ್ಕೆ ಕಟ್ಟಿ ಹಾಕಿದರು. ಅರೆನಗ್ನ ಸ್ಥಿತಿಯಲ್ಲಿ ನಾನು ಇಡೀ ರಾತ್ರಿ ಅಲ್ಲೇ ಕಳೆಯಬೇಕಾಯಿತು. ಬೆಳಿಗ್ಗೆ ನನ್ನ ಸ್ಥಿತಿಯನ್ನು ನೋಡಿದ ಜನರೊಂದಿಗೆ ನನ್ನನ್ನು ಬಿಡಿಸುವಂತೆ ಮನವಿ ಮಾಡಿಕೊಂಡೆ. ಆದರೆ ಪೊಲೀಸರಿಗೆ ಮಾಹಿತಿ ನೀಡುವುದಾಗಿ ಹೇಳಿದರೇ ವಿನಃ ಯಾರೂ ನೆರವಿಗೆ ಬರಲಿಲ್ಲ. ಬಟ್ಟೆಯನ್ನು ಸಂಪೂರ್ಣವಾಗಿ ಹರಿದು ಹಾಕಿದ್ದರಿಂದ ಬೇರೆಯವರ ಸೀರೆ ಉಡಿಸಿ ಬಳಿಕ ಆಸ್ಪತ್ರೆಗೆ ಕರೆದೊಯ್ಯಲಾಯಿತು" ಎಂದು ಮಹಿಳೆ ದೂರಿದ್ದಾರೆ.

 ಘಟನೆಗೆ ಸಂಬಂಧಿಸಿ ನಾಲ್ಕು ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News