ಗುಜರಾತ್ | ದಲಿತ ಯುವಕನ ಮೇಲೆ ಹಲ್ಲೆ ನಡೆಸಿ, ದರೋಡೆ; ಕಳೆದ 21 ದಿನಗಳಲ್ಲಿ ಮೂರನೆಯ ಪ್ರಕರಣ
ಸಾಂದರ್ಭಿಕ ಚಿತ್ರ | PC : PTI
ಜುನಾಗಢ: ದಲಿತ ಯುವಕನೊಬ್ಬನನ್ನು ಸೆರೆ ಹಿಡಿದು, ಆತನ ಮೇಲೆ ಹಲ್ಲೆ ನಡೆಸಿ, ಆತನನ್ನು ದರೋಡೆ ಮಾಡಿರುವ ಘಟನೆ ಗುಜರಾತ್ ನ ಜುನಾಘಢದಲ್ಲಿ ಆಗಸ್ಟ್ 16ರಂದು ನಡೆದಿದೆ. ಇದು ಕಳೆದ 21 ದಿನಗಳಲ್ಲಿ ನಡೆದಿರುವ ಇಂತಹ ಮೂರನೆಯ ದಾಳಿಯಾಗಿದೆ.
ಸಂತ್ರಸ್ತ ಯುವಕನು ತನ್ನ ಗೆಳೆಯನನ್ನು ಭೇಟಿ ಮಾಡಲು ತೆರಳಿದ್ದಾಗ ಈ ಘಟನೆ ನಡೆದಿದೆ. ಬಾಲಕನೊಬ್ಬನು ತನ್ನ ಸಹೋದರನನ್ನು ಯಾರೋ ಕರೆದೊಯ್ದಿದ್ದಾರೆ ಎಂದು ತಪ್ಪು ಮಾಹಿತಿ ನೀಡಿದ್ದು, ಆತನನ್ನು ಸಂತ್ರಸ್ತ ಯುವಕ ಹಾಗೂ ಆತನ ಸ್ನೇಹಿತ ಹಿಂಬಾಲಿಸಿದ್ದಾರೆ. ಕೊನೆಗೆ ಸ್ವಾಮಿ ವಿವೇಕಾನಂದ ಶಾಲಾ ಮೈದಾನದಲ್ಲಿ ಮೂವರು ದುಷ್ಕರ್ಮಿಗಳಿಂದ ದಾಳಿಗೊಳಗಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ದಾಳಿಕೋರರಲ್ಲಿ ಓರ್ವ ಹಿತೇಶ್ ಎಂದು ಗುರುತಿಸಲಾಗಿದ್ದು, ಆರೋಪಿಗಳು ಸಂತ್ರಸ್ತನಿಗೆ ಜಾತಿ ನಿಂದನೆ ಮಾಡಿ, ಆತನ ಮೇಲೆ ಬೆಲ್ಟ್ ಹಾಗೂ ದೊಣ್ಣೆಗಳಿಂದ ಹಲ್ಲೆ ನಡೆಸಿದ್ದಾರೆ. ಬಳಿಕ ಆತನ ಬಳಿಯಿದ್ದ ಮೊಬೈಲ್ ಫೋನ್ ಅನ್ನು ಕಿತ್ತುಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.
ಈ ದಾಳಿಯಲ್ಲಿ ಗಾಯಗೊಂಡಿರುವ ಸಂತ್ರಸ್ತ ಯುವಕನಿಗೆ ಜುನಾಗಢದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಈ ಸಂಬಂಧ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್ ಗಳಡಿ ಜುನಾಗಢ ಎ ವಲಯದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ಪತ್ತೆ ಹಚ್ಚಲು ಪ್ರತ್ಯೇಕ ತಂಡಗಳನ್ನು ರಚಿಸಲಾಗಿದೆ. ಈ ಸಂಬಂಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಜುನಾಗಢ ಉಪ ಪೊಲೀಸ್ ವರಿಷ್ಠಾಧಿಕಾರಿ ಹಿತೇಶ್ ಧಂಧಾಲಿಯ ಭರವಸೆ ನೀಡಿದ್ದಾರೆ.