×
Ad

ವೈದ್ಯಕೀಯ ನೆರವು ಪಡೆದ ದಲ್ಲೆವಾಲ್ | 121 ರೈತರ ಆಮರಣಾಂತ ಉಪವಾಸ ಅಂತ್ಯ

Update: 2025-01-19 20:54 IST

ಜಗಜಿತ್ ಸಿಂಗ್ ದಲ್ಲೆವಾಲ್ | PC : PTI  

ಹೊಸದಿಲ್ಲಿ : ಹಿರಿಯ ರೈತ ನಾಯಕ ಜಗಜಿತ್ ಸಿಂಗ್ ದಲ್ಲೆವಾಲ್ ಅವರು ವೈದ್ಯಕೀಯ ನೆರವು ಸ್ವೀಕರಿಸಿದ ಬಳಿಕ 121 ರೈತರ ಗುಂಪು ಅವರನ್ನು ಬೆಂಬಲಿಸಿ ಖನೌರಿಯ ಪ್ರತಿಭಟನಾ ಸ್ಥಳದಲ್ಲಿ ನಡೆಸುತ್ತಿದ್ದ ತಮ್ಮ ಆಮರಣಾಂತ ಉಪವಾಸವನ್ನು ರವಿವಾರ ಅಂತ್ಯಗೊಳಿಸಿದರು.

ಡಿಐಜಿ ಮಂದೀಪ ಸಿಂಗ್ ಸಿಧು ಮತ್ತು ಪಟಿಯಾಳಾ ಎಸ್‌ಎಸ್‌ಪಿ ನಾನಕ ಸಿಂಗ್ ಅವರ ಉಪಸ್ಥಿತಿಯಲ್ಲಿ ಜ್ಯೂಸ್ ಹೀರುವ ಮೂಲಕ ರೈತರು ತಮ್ಮ ಉಪವಾಸವನ್ನು ಕೊನೆಗೊಳಿಸಿದರು.

ರೈತರ ಬೇಡಿಕೆಗಳ ಈಡೇರಿಕೆಗಾಗಿ ಸರಕಾರದ ಮೇಲೆ ಒತ್ತಡ ಹೇರಲು ನ.26ರಿಂದ ಉಪವಾಸ ಮುಷ್ಕರವನ್ನು ನಡೆಸುತ್ತಿರುವ ದಲ್ಲೆವಾಲ್(70) ವೈದ್ಯಕೀಯ ನೆರವನ್ನು ನಿರಾಕರಿಸುತ್ತಲೇ ಬಂದಿದ್ದರು. ರೈತರ ಬೇಡಿಕೆಗಳನ್ನು ಪರಿಹರಿಸಲು ಫೆ.14ರಂದು ಮಾತುಕತೆಗೆ ಕೇಂದ್ರದ ಆಹ್ವಾನದ ಹಿನ್ನೆಲೆಯಲ್ಲಿ ಶನಿವಾರ ವೈದ್ಯಕೀಯ ಚಿಕಿತ್ಸೆ ಪಡೆಯಲು ಒಪ್ಪಿಕೊಂಡಿದ್ದರು.

ದಲ್ಲೆವಾಲ್ ಹಾಗೂ ಸಂಯುಕ್ತ ಕಿಸಾನ್ ಮೋರ್ಚಾ(ರಾಜಕೀಯೇತರ) ಮತ್ತು ಕಿಸಾನ್ ಮಜ್ದೂರ್ ಮೋರ್ಚಾದ ಪ್ರತಿನಿಧಿಗಳೊಂದಿಗೆ ಕೇಂದ್ರ ಕೃಷಿ ಸಚಿವಾಲಯದ ಜಂಟಿ ಕಾರ್ಯದರ್ಶಿ ಪ್ರಿಯಾ ರಂಜನ್ ಅವರ ನೇತೃತ್ವದ ಉನ್ನತ ಮಟ್ಟದ ಕೇಂದ್ರ ನಿಯೋಗವು ಶನಿವಾರ ಸಭೆ ನಡೆಸಿತ್ತು. ಸಭೆಯಲ್ಲಿ ಫೆ.14ರಂದು ಚಂಡಿಗಡದಲ್ಲಿ ಮಾತುಕತೆಗಳನ್ನು ಪುನರಾರಂಭಿಸಲು ನಿಯೋಗವು ಆಹ್ವಾನಿಸಿತ್ತು.

ಪ್ರಸ್ತಾವಿತ ಮಾತುಕತೆಗಳ ಘೋಷಣೆಯ ಬಳಿಕ ದಲ್ಲೆವಾಲ್ ವೈದ್ಯಕೀಯ ನೆರವು ಪಡೆಯಲು ಒಪ್ಪಿಕೊಂಡಿದ್ದು,ಅವರಿಗೆ ಇಂಟ್ರಾವೆನಸ್ ಡ್ರಿಪ್ ನೀಡಲಾಗಿತ್ತು.

ಆದರೆ ರೈತ ನಾಯಕರು ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಗೆ ಕಾನೂನಾತ್ಮಕ ಖಾತರಿಯನ್ನು ಒದಗಿಸುವವರೆಗೂ ದಲ್ಲೆವಾಲ್ ತನ್ನ ಅನಿರ್ದಿಷ್ಟಾವಧಿ ಉಪವಾಸವನ್ನು ನಿಲ್ಲಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News