ದಲ್ಲೇವಾಲ್ ಗೆ ವೈದ್ಯಕೀಯ ನೆರವನ್ನು ಸ್ಥಗಿತಗೊಳಿಸಿದ ವೈದ್ಯರು: ರೈತ ಸಂಘಟನೆಗಳು
ಜಗಜೀತ್ ಸಿಂಗ್ ದಲ್ಲೇವಾಲ್ | PTI
ಚಂಡೀಗಢ: ಡ್ರಿಪ್ ಹಾಕಲು ರಕ್ತನಾಳ ಪತ್ತೆಯಾಗದ ಹಿನ್ನೆಲೆಯಲ್ಲಿ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ರೈತ ನಾಯಕ ಜಗಜೀತ್ ಸಿಂಗ್ ದಲ್ಲೇವಾಲ್ ರಿಗೆ ಒದಗಿಸಲಾಗುತ್ತಿದ್ದ ವೈದ್ಯಕೀಯ ನೆರವನ್ನು ಕಳೆದ ಆರು ದಿನಗಳಿಂದ ವೈದ್ಯರು ಸ್ಥಗಿತಗೊಳಿಸಿದ್ದಾರೆ ಎಂದು ಎರಡು ಪ್ರಮುಖ ರೈತ ಸಂಘಟನೆಗಳು ಹೇಳಿವೆ.
ಈ ಕುರಿತು ಜಂಟಿ ಹೇಳಿಕೆ ಬಿಡುಗಡೆ ಮಾಡಿರುವ ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯೇತರ) ಹಾಗೂ ಕಿಸಾನ್ ಮಝ್ದೂರ್ ಮೋರ್ಚಾ ಸಂಘಟನೆಗಳು, “ದಲ್ಲೇವಾಲ್ ರ ರಕ್ತನಾಳಗಳು ಕಟ್ಟಿಕೊಂಡಿರುವುದರಿಂದ, ಡ್ರಿಪ್ ಹಾಕಲು ಅವರ ರಕ್ತನಾಳಗಳನ್ನು ಪತ್ತೆ ಹಚ್ಚಲು ವೈದ್ಯರು ವಿಫಲಗೊಂಡಿದ್ದು, ಕಳೆದ ಆರು ದಿನಗಳಿಂದ ಅವರಿಗೆ ಒದಗಿಸಲಾಗುತ್ತಿದ್ದ ವೈದ್ಯಕೀಯ ನೆರವನ್ನು ಸ್ಥಗಿತಗೊಳಿಸಲಾಗಿದೆ” ಎಂದು ಹೇಳಿವೆ.
ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯೇತರ) ಸಂಘಟನೆಯ ಸಂಚಾಲಕರಾದ ದಲ್ಲೇವಾಲ್, ಬೆಳೆಗಳಿಗೆ ಶಾಸನಬದ್ಧ ಕನಿಷ್ಠ ಬೆಂಬಲ ಬೆಲೆ ಹಾಗೂ ಇನ್ನಿತರ ಬೇಡಿಕೆಗಳಿಗಾಗಿ ಆಗ್ರಹಿಸಿ ಖನೌರಿ ಗಡಿಯಲ್ಲಿ ಕಳೆದ ವರ್ಷದ ನವೆಂಬರ್ 26ರಿಂದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ.