ನೆರೆಯಲ್ಲಿ ದತ್ತಾಂಶಗಳು ನಷ್ಟ: ಪಾಕ್ ಪ್ರಜೆಗಳ ಕುರಿತು ವರದಿ ಸಲ್ಲಿಸಲು ಜಮ್ಮುಕಾಶ್ಮೀರ ಸರಕಾರಕ್ಕೆ ಸಮಯ ನೀಡಿದ ಸುಪ್ರೀಂ
ಸುಪ್ರೀಂ | PTI
ಹೊಸದಿಲ್ಲಿ: ಸರ್ವೋಚ್ಚ ನ್ಯಾಯಾಲಯವು ಜಮ್ಮುಕಾಶ್ಮೀರ ಸಾರ್ವಜನಿಕ ಸುರಕ್ಷತಾ ಕಾಯ್ದೆ,1978ರ ನಿಬಂಧನೆಗಳಡಿ ಬಂಧಿತ ಪಾಕಿಸ್ತಾನಿ ಪ್ರಜೆಗಳ ಸಂಖ್ಯೆಯ ಕುರಿತು ತನಗೆ ತಿಳಿಸಲು ಜಮ್ಮುಕಾಶ್ಮೀರ ಸರಕಾರಕ್ಕೆ ಹೆಚ್ಚಿನ ಸಮಯಾವಕಾಶವನ್ನು ನೀಡಿ ಶುಕ್ರವಾರ ಆದೇಶಿಸಿದೆ.
ಇಂತಹ ಕೈದಿಗಳಿಗೆ ಸಂಬಂಧಿಸಿದ ದತ್ತಾಂಶಗಳು ನೆರೆಯ ಸಂದರ್ಭದಲ್ಲಿ ಕಳೆದುಹೋಗಿವೆ ಎಂದು ಅಧಿಕಾರಿಗಳು ತಿಳಿಸಿದ ಬಳಿಕ ಇನ್ನೂ ಆರು ವಾರಗಳ ಸಮಯಾವಕಾಶವನ್ನು ನೀಡಿದ ನ್ಯಾಯಾಧೀಶರಾದ ಎ.ಎಸ್.ಓಕಾ ಮತ್ತು ಉಜ್ಜಲ ಭುಯಾನ್ ಅವರ ಪೀಠವು ಮುಂದಿನ ವಿಚಾರಣೆಯನ್ನು ಜು.25ಕ್ಕೆ ನಿಗದಿಗೊಳಿಸಿತು.
ದಿವಂಗತ ಹಿರಿಯ ವಕೀಲ ಹಾಗೂ ಜಮ್ಮುಕಾಶ್ಮೀರ ನ್ಯಾಷನಲ್ ಪ್ಯಾಂಥರ್ಸ್ ಪಾರ್ಟಿಯ ನಾಯಕ ಭೀಮ ಸಿಂಗ್ ಅವರು 1978ರ ಜಮ್ಮುಕಾಶ್ಮೀರ ಸಾರ್ವಜನಿಕ ಸುರಕ್ಷತಾ ಕಾಯ್ದೆಯಡಿ ಬಂಧಿತ ಪಾಕ್ ಪ್ರಜೆಗಳ ಕುರಿತು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಸರ್ವೋಚ್ಚ ನ್ಯಾಯಾಲಯವು ಕೈಗೆತ್ತಿಕೊಂಡಿತ್ತು.
ಇಂತಹ ವ್ಯಕ್ತಿಗಳನ್ನು ಬಿಡುಗಡೆಗೊಳಿಸಬೇಕು ಮತ್ತು ಪಾಕಿಸ್ತಾನಕ್ಕೆ ಗಡಿಪಾರು ಮಾಡಬೇಕು ಎಂದು ಅವರ ಅರ್ಜಿಯಲ್ಲಿ ಕೋರಲಾಗಿತ್ತು.
ತಮ್ಮ ಶಿಕ್ಷೆಯ ಅವಧಿ ಪೂರ್ಣಗೊಂಡ ಬಳಿಕ ಭಾರತೀಯ ಜೈಲುಗಳಿಂದ ಬಿಡುಗಡೆಗೊಂಡ ಪಾಕಿಸ್ತಾನಿ ಪ್ರಜೆಗಳನ್ನು ಅವರು ತನ್ನ ಪ್ರಜೆಗಳು ಎಂದು ಆ ದೇಶವು ಒಪ್ಪಿಕೊಂಡಿರದಿದ್ದರೆ ಅವರ ಭವಿಷ್ಯದ ಬಗ್ಗೆ ಸರ್ವೋಚ್ಚ ನ್ಯಾಯಾಲಯವು ಈ ಹಿಂದೆ ಕಳವಳಗಳನ್ನು ವ್ಯಕ್ತಪಡಿಸಿತ್ತು.
ಆದ್ದರಿಂದ ಪಾಕ್ ಪ್ರಜೆಗಳು ತಮ್ಮ ಶಿಕ್ಷೆಯ ಅವಧಿಯನ್ನು ಪೂರ್ಣಗೊಳಿಸಿದ್ದರೂ ಅವರು ಜೈಲುಗಳಲ್ಲಿ ಕೊಳೆಯುತ್ತಿರುವ ಕುರಿತು ದೂರುಗಳನ್ನು ಆಗಾಗ್ಗೆ ನ್ಯಾಯಾಲಯಗಳು ಸ್ವೀಕರಿಸುತ್ತವೆ,ಹೀಗಾಗಿ ಇಂತಹ ವಿದೇಶಿ ಪ್ರಜೆಗಳು ಜೈಲುಗಳಲ್ಲಿ ಬಲವಂತದಿಂದ ಉಳಿಯದಂತೆ ನೋಡಿಕೊಳ್ಳಲು ಸೂಕ್ತವಾದ ಕಾರ್ಯವಿಧಾನವೊಂದನ್ನು ರೂಪಿಸುವಂತೆ ಅದು ಸರಕಾರಕ್ಕೆ ಸೂಚಿಸಿತ್ತು.