×
Ad

ನೂಹ್‌ ಗಲಭೆ ಬೆನ್ನಲ್ಲೇ ಹಲವಾರು 'ಅಕ್ರಮ' ಮನೆ, ಕಟ್ಟಡಗಳ ಮೇಲೆ ಬುಲ್ಡೋಝರ್ ಕಾರ್ಯಾಚರಣೆ

Update: 2023-08-05 12:42 IST

Photo Credit: ANI

ಗುರುಗ್ರಾಮ್‌: ಹರ್ಯಾಣದ ನೂಹ್‌ ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ಹಿಂಸಾಚಾರದ ಬೆನ್ನಲ್ಲೇ ಶುಕ್ರವಾರ ಅಲ್ಲಿನ ಅಧಿಕಾರಿಗಳು ಹಲವಾರು ಮನೆಗಳು ಮತ್ತು ಇತರ ಕಟ್ಟಡಗಳನ್ನು ಬುಲ್‌ಡೋಜರ್‌ ಕಾರ್ಯಾಚರಣೆ ಮೂಲಕ ನೆಲಸಮಗೊಳಿಸಿದ್ದಾರೆ. ನಲ್ಹರ್‌ ಶಿವ ದೇವಸ್ಥಾನದ ಹಿಂಬದಿಯಲ್ಲಿನ 5 ಎಕರೆ ಜಮೀನಿನಲ್ಲಿನ ಒತ್ತುವರಿ ತೆರವುಗೊಳಿಸಲಾಗಿದೆ ಎಂದು ತಮ್ಮ ವರ್ಗಾವಣೆ ಆದೇಶ ಹೊರಬೀಳುವ ಮುನ್ನ ನೂಹ್‌ ಜಿಲ್ಲಾಧಿಕಾರಿ ಪ್ರಶಾಂತ್‌ ಪನ್ವರ್‌ ಹೇಳಿದ್ದರು. ಈ ದೇವಳದಿಂದಲೇ ಯಾತ್ರೆ ಆರಂಭಗೊಂಡಿತ್ತು.

ಅರಣ್ಯ ಇಲಾಖೆಗೆ ಸೇರಿದ್ದ ಆರು ಎಕರೆ ಜಮೀನನ್ನು ಪುನ್ಹಾನ ಎಂಬಲ್ಲಿ ತೆರವುಗೊಳಿಸಲಾಗಿದ್ದರೆ, ನಗೀನಾ ಮುನಿಸಿಪಾಲಿಟಿ ಪ್ರದೇಶ ದೋಭಿ ಘಾಟ್‌ ಪ್ರದೇಶದಲ್ಲಿ ಒಂದು ಎಕರೆ ಜಮೀನು ತೆರವುಗೊಳಿಸಲಾಗಿದೆ. ನಂಗಲ್‌ ಮುಬಾರಕ್ಪುರ್‌ ಎಂಬಲ್ಲಿ ಕೆಲ ತಾತ್ಕಾಲಿಕ ಶೆಡ್‌ಗಳನ್ನ ನೆಲಸಮಗೊಳಿಸಲಾಗಿದೆ ಎಂದು ಪನ್ವರ್‌ ಹೇಳಿದ್ದರು. ದಿಲ್ಲಿ-ಆಲ್ವಾರ್‌ ರಸ್ತೆ ಸಮೀಪ ಮುಚ್ಚಿದ್ದ ಒಂದು ಅಂಗಡಿಯನ್ನೂ ನೆಲಸಮಗೊಳಿಸಲಾಗಿದೆ, ಅದು ಸರ್ಕಾರಿ ಜಮೀನನ್ನು ಒತ್ತುವರಿ ಮಾಡಿ ನಿರ್ಮಿಸಲಾಗಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ಕಾರ್ಯಾಚರಣೆಗೂ ಹಿಂಸಾಚಾರಕ್ಕೂ ಸಂಬಂಧವಿಲ್ಲ, ಯಾರ ಜಮೀನು ತೆರವುಗೊಳಿಸಲಾಗಿದೆಯೋ ಅಥವಾ ನೆಲಸಮ ಕಾರ್ಯಾಚರಣೆ ನಡೆಸಲಾಗಿದೆಯೋ ಅವರಲ್ಲಿ ಯಾರೂ ಹಿಂಸಾಚಾರ ಪ್ರಕರಣದ ಆರೋಪಿಗಳಲ್ಲ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆಂದು ವರದಿಯಾಗಿದೆ.

ನಲ್ಹರ್‌ ಎಂಬಲ್ಲಿ 56 ವರ್ಷದ ಮುಹಮ್ಮದ್‌ ಅವರ ಮನೆ ಕೂಡ ನೆಲಸಮಗೊಳಿಸಲಾಗಿದೆ. ಆಸ್ಪತ್ರೆಯೊಂದರಲ್ಲಿ ಕಾವಲುಗಾರನಾಗಿರುವ ಅವರ ಮನೆ ನೆಲಸಮಗೊಳಿಸುವ ಕೆಲವೇ ಕ್ಷಣಗಳ ಮೊದಲು ಅವರಿಗೆ ಅರಣ್ಯ ಇಲಾಖೆಯ ನೋಟಿಸ್‌ ತಲುಪಿತ್ತು ಎಂದು ಅವರು ಹೇಳಿದ್ದಾರೆ. ನೋಟಿಸಿನಲ್ಲಿ ಎರಡು ದಿನಗಳಲ್ಲಿ ಮನೆ ನೆಲಸಮಗೊಳಿಸಲಾಗುವುದೆಂದಿದ್ದರೆ, ಅದು ದೊರೆತ ಅರ್ಧ ಗಂಟೆಯಲ್ಲೇ ಬುಲ್‌ ಡೋಜರ್‌ ಬಂದಿತ್ತು ಎಂದು ಅವರು ಹೇಳಿದ್ದಾರೆ. ಇದೇ ರೀತಿ ನೋಟಿಸ್‌ ದೊರೆತ ಕೆಲವೇ ಗಂಟೆಗಳಲ್ಲಿ ತಮ್ಮ ಮನೆಗಳನ್ನು ನೆಲಸಮಗೊಳಿಸಿರುವ ಬಗ್ಗೆ ಹಲವರು ದೂರಿಕೊಂಡಿದ್ದಾರೆ. ಆರು ಜನರನ್ನು ಬಲಿಪಡೆದ ಈ ಗಲಭೆಗಳಿಗೆ ಸಂಬಂಧಿಸಿದಂತೆ ಪೊಲೀಸರು ಇಲ್ಲಿಯ ತನಕ 200ಕ್ಕೂ ಅಧಿಕ ಮಂದಿಯನ್ನು ಬಂಧಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News