ಅರ್ಜಿ ಸಲ್ಲಿಸಿದ್ದ ಎಲ್ಲ ಮಹಿಳೆಯರಿಗೆ ಆರ್ಥಿಕ ನೆರವು ನೀಡಿ ತಪ್ಪು ಮಾಡಿದ್ದೇವೆ: ʼಲಾಡ್ಕಿ ಬಹಿಣʼ ಯೋಜನೆ ಕುರಿತು ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ ವಿಷಾದ
ಡಿಸಿಎಂ ಅಜಿತ್ ಪವಾರ್ | PC : PTI
ಮುಂಬೈ: ರಾಜ್ಯ ಸರಕಾರವು ಸಾಕಷ್ಟು ಪರಿಶೀಲನೆಯಿಲ್ಲದೆ ಮುಖ್ಯಮಂತ್ರಿ ಮಾಝಿ ಲಾಡ್ಕಿ ಬಹಿಣ ಯೋಜನೆಯ ಎಲ್ಲ ಅರ್ಜಿದಾರರಿಗೆ ಆರ್ಥಿಕ ನೆರವು ನೀಡುವ ಮೂಲಕ ತಪ್ಪು ಮಾಡಿದೆ ಎಂದು ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ ಪವಾರ್ ಅವರು ಹೇಳಿದ್ದಾರೆ. ಕಳೆದ ವರ್ಷದ ವಿಧಾನಸಭಾ ಚುನಾವಣೆಗೆ ಮುನ್ನ ಸಮಯ ನಿರ್ಬಂಧ ಈ ತಪ್ಪಿಗೆ ಕಾರಣವಾಗಿತ್ತು ಎಂದಿದ್ದಾರೆ.
‘ಅರ್ಜಿ ಸಲ್ಲಿಸಿದ್ದ ಎಲ್ಲ ಮಹಿಳೆಯರಿಗೆ ಯೋಜನೆಯ ಲಾಭವನ್ನು ನೀಡಿ ನಾವು ತಪ್ಪು ಮಾಡಿದ್ದೇವೆ. ಅರ್ಜಿಗಳನ್ನು ಪರಿಶೀಲಿಸಲು ಮತು ಅನರ್ಹರನ್ನು ಗುರುತಿಸಲು ನಮಗೆ ಸ್ವಲ್ಪವೇ ಸಮಯಾವಕಾಶವಿತ್ತು.
ಆ ಸಮಯದಲ್ಲಿ ಚುನಾವಣೆಗಳನ್ನು 2-3 ತಿಂಗಳುಗಳಲ್ಲಿ ಘೋಷಿಸಬಹುದು ಎಂದು ನಾವು ಭಾವಿಸಿದ್ದೆವು’ಎಂದು ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಪವಾರ್ ಹೇಳಿದರು.
ಆಗಸ್ಟ್,2024ರಲ್ಲಿ ಜಾರಿಗೊಳಿಸಲಾದ ಲಾಡ್ಕಿ ಬಹಿಣ ಯೋಜನೆಯು 2.5 ಲಕ್ಷ ರೂ.ಗಿಂತ ಕಡಿಮೆ ವಾರ್ಷಿಕ ಆದಾಯವಿರುವ 21ರಿಂದ 65 ವರ್ಷ ವಯೋಮಾನದ ಅರ್ಹ ಮಹಿಳೆಯರಿಗೆ ಮಾಸಿಕ 1,500 ರೂ.ಗಳನ್ನು ನೀಡುತ್ತದೆ. ಬಡ ಮಹಿಳೆಯರಿಗೆ ನೆರವಾಗಲು ಈ ಯೋಜನೆಯನ್ನು ರೂಪಿಸಲಾಗಿತ್ತಾದರೂ 2,200ಕ್ಕೂ ಅಧಿಕ ಸರಕಾರಿ ಉದ್ಯೋಗಿಗಳು ಸೇರಿದಂತೆ ಸಾವಿರಾರು ಅನರ್ಹರು ಯೋಜನೆಯ ಲಾಭವನ್ನು ಪಡೆಯುತ್ತಿದ್ದಾರೆ ಎನ್ನುವುದು ಪರಿಶೀಲನೆಯಲ್ಲಿ ಬಹಿರಂಗಗೊಂಡಿದೆ.
ರಾಜ್ಯದ ಹಣಕಾಸು ಸಚಿವರೂ ಆಗಿರುವ ಪವಾರ್, ಈಗಾಗಲೇ ಜಮಾ ಮಾಡಲಾಗಿರುವ ಆರ್ಥಿಕ ನೆರವನ್ನು ಹಿಂಪಡೆಯುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಯೋಜನೆಯನ್ನು ಅನಾವರಣಗೊಳಿಸಿದಾಗ ಅರ್ಹ ಮಹಿಳೆಯರು ಮಾತ್ರ ಅರ್ಜಿ ಸಲ್ಲಿಸುವಂತೆ ಸರಕಾರವು ಮನವಿ ಮಾಡಿಕೊಂಡಿತ್ತು, ಆದರೆ ಅದು ಹಾಗಾಗಲಿಲ್ಲ. ಪರಿಶೀಲನೆಯನ್ನು ನಡೆಸಲಾಗುತ್ತಿದ್ದು, ಅರ್ಹ ಮಹಿಳೆಯರು ಮಾತ್ರ ಮಾಸಿಕ ಪಾವತಿಯನ್ನು ಪಡೆಯಲಿದ್ದಾರೆ ಎಂದು ಅವರು ತಿಳಿಸಿದರು.
ಪವಾರ್ ಹೇಳಿಕೆಗೆ ಪ್ರತಿಪಕ್ಷದಿಂದ ತೀವ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.
ಪವಾರ್ ಚುನಾವಣಾ ಲಾಭ ಗಳಿಕೆಗಾಗಿ ಸಾರ್ವಜನಿಕ ಹಣದ ದುರ್ಬಳಕೆಗೆ ಅವಕಾಶ ನೀಡಿದ್ದಾರೆ ಎಂದು ಆರೋಪಿಸಿರುವ ಶಿವಸೇನೆ(ಯುಬಿಟಿ) ಸಂಸದ ಸಂಜಯ್ ರಾವುತ್ ಅವರ ರಾಜೀನಾಮೆಗೆ ಆಗ್ರಹಿಸಿದ್ದಾರೆ. ಹಣಕಾಸು ಇಲಾಖೆಯು ಮತಗಳಿಗಾಗಿ ಸರಕಾರಿ ಹಣದ ಲೂಟಿಯ ನೇತೃತ್ವ ವಹಿಸಿದೆ ಎಂದು ಅವರು ಹೇಳಿದ್ದಾರೆ.