×
Ad

ಕೇಂದ್ರದ ನೀತಿಗಳ ವಿರುದ್ಧ ಪ್ರತಿಭಟನೆಗೆ ಎಸ್‌ಕೆಎಂ, 10 ಕಾರ್ಮಿಕ ಒಕ್ಕೂಟಗಳ ನಿರ್ಧಾರ

Update: 2023-08-25 21:39 IST

Photo: twitter \ @SanjuktaChoudh5

ಹೊಸದಿಲ್ಲಿ: ಸಂಯುಕ್ತ ಕಿಸಾನ್ ಮೋರ್ಚಾ (SKM) ಹಾಗೂ 10 ಕೇಂದ್ರ ಕಾರ್ಮಿಕರ ಒಕ್ಕೂಟ (CTU) ಹೊಸದಿಲ್ಲಿಯ ತಾಲ್‌ಕಟೋರ ಕ್ರೀಡಾಂಗಣದಲ್ಲಿ ಗುರುವಾರ ಆಯೋಜಿಸಿದ ಕಾರ್ಮಿಕರು ಹಾಗೂ ರೈತರ ಜಂಟಿ ಸಮಾವೇಶ 2024ರ ಲೋಕಸಭಾ ಚುನಾವಣೆಗೆ ಮುನ್ನ ಕೇಂದ್ರ ಸರಕಾರದ ನೀತಿಗಳ ವಿರುದ್ಧ ಪ್ರತಿಭಟನೆ ನಡೆಸಲು ನಿರ್ಧರಿಸಿದೆ.

ಕೇಂದ್ರದಲ್ಲಿರುವ ನರೇಂದ್ರ ಮೋದಿ ಸರಕಾರ ಹಾಗೂ ರಾಜ್ಯಗಳಲ್ಲಿರುವ ವಿವಿಧ ಬಿಜೆಪಿ ಸರಕಾರಗಳನ್ನು ಸೋಲಿಸುವ ನಿಟ್ಟಿನಲ್ಲಿ ಸಂಘಟನೆಗಳು ಕಾರ್ಯ ನಿರ್ವಹಿಸಲಿವೆ.

‘ಆಕ್ರಮಣಕಾರಿ ಕಾರ್ಪೊರೇಟ್ ಪರ ನೀತಿಗಳು ಸೃಷ್ಟಿಸಿರುವ ಆತಂಕಕಾರಿ ಪರಿಸ್ಥಿತಿ ನಿವಾರಿಸಲು ಕಾರ್ಮಿಕರು ಹಾಗೂ ರೈತರು ಸಂಘಟಿತರಾಗುವಂತೆ ಸಮಾವೇಶ ಕರೆ ನೀಡಿತು.

ಕೇಂದ್ರ ಸರಕಾರದ ಕಾರ್ಪೋರೇಟ್ ಪರ ಹಾಗೂ ರೈತ ವಿರೋಧಿ ನೀತಿಗಳಿಂದ ಭಾರತದಲ್ಲಿ ಉಂಟಾಗಿರುವ ಕೃಷಿ ಬಿಕ್ಕಟ್ಟಿನ ಬಗ್ಗೆ ಸಮಾವೇಶ ಗಮನ ಸೆಳೆಯಿತು. ಈ ನೀತಿಗಳಿಂದ ಆದಾಯ ಕುಸಿದಿದೆ, ಸಾಲದ ಹೊರೆ ಏರಿಕೆಯಾಗಿದೆ ಹಾಗೂ ರೈತರ ಆತ್ಮಹತ್ಯೆ ಹೆಚ್ಚಾಗುತ್ತಿದೆ ಎಂದು ಸಮಾವೇಶ ಬೆಟ್ಟು ಮಾಡಿತು ಎಂದು ಹೇಳಿಕೆ ತಿಳಿಸಿದೆ.

ಏರಿಕೆಯಾಗುತ್ತಿರುವ ನಿರುದ್ಯೋಗ, ಇಳಿಕೆಯಾಗುತ್ತಿರುವ ಉದ್ಯೋಗ ಭದ್ರತೆ ಹಾಗೂ ಆವಶ್ಯಕ ಸಾಮಗ್ರಿಗಳ ಬೆಲೆ ಏರಿಕೆಯ ಸವಾಲುಗಳ ಕುರಿತು ಸಮಾವೇಶ ಚರ್ಚೆ ನಡೆಸಿತು. ಹೊಸ ಕಾರ್ಮಿಕ ಸಂಹಿತೆಗಳ ಮೂಲಕ ಕಾರ್ಮಿಕರ ಹಕ್ಕುಗಳು ಅಸ್ತಿತ್ವ ಕಳೆದುಕೊಳ್ಳುತ್ತಿರುವುದು, ಸಾಮಾಜಿಕ ಭದ್ರತೆಯ ಕೊರತೆ ಹಾಗೂ ಬಡತನದಿಂದ ಕೃಷಿ ಕಾರ್ಮಿಕರು ಹಾಗೂ ವಲಸೆ ಕಾರ್ಮಿಕರ ಪರಿಸ್ಥಿತಿ ಹದಗೆಡುತ್ತಿರುವುದರ ಬಗ್ಗೆ ಸಮಾವೇಶ ಗಮನ ಸೆಳೆದಿದೆ ಎಂದು ಹೇಳಿಕೆ ತಿಳಿಸಿದೆ.

ಕೇಂದ್ರ ಸರಕಾರದ ನೀತಿಗಳಿಂದಾಗಿ ಸಾಮೂಹಿಕ ಬಡತನ ಹೆಚ್ಚಾಗಿದೆ, ಕೈಗಾರಿಕೀಕರಣ ಹಾಗೂ ಆರ್ಥಿಕತೆ ನಿಧಾನವಾಗಿದೆ, ಮಧ್ಯಮ ಹಾಗೂ ಸಣ್ಣ ಉದ್ಯಮಗಳು ತೊಂದರೆಗೀಡಾಗಿವೆ ಎಂದು ಸಮಾವೇಶದಲ್ಲಿ ಅಂಗೀಕರಿಸಲಾದ ಜಂಟಿ ಘೋಷಣೆ ಹೇಳಿದೆ.

2023 ಡಿಸೆಂಬರ್ ಹಾಗೂ 2024 ಜನವರಿ ನಡುವೆ ದೇಶಾದ್ಯಂತ ಪ್ರತಿಭಟನೆ ನಡೆಸಲು ಸಂಘಟನೆಗಳು ನಿರ್ಧರಿಸಿವೆ. ಕಾರ್ಯಾಚರಣೆಯ ಮಾದರಿಯನ್ನು ಮುಂದಿನ ದಿನಗಳಲ್ಲಿ ಘೋಷಿಸಲಾಗುವುದು ಎಂದು ಹೇಳಿಕೆ ತಿಳಿಸಿದೆ. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News